ಇಂಗ್ಲೆಂಡ್ ಅನುಭವಿ ವೇಗಿ ಜೇಮ್ಸ್ ಆ್ಯಂಡರ್‌ಸನ್ ಇಂದು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಲಿದ್ದು, ನಿವೃತ್ತಿಯ ಕುರಿತು ಸುಳಿವು ಬಿಟ್ಟುಕೊಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಲಂಡನ್(ಆ.10): ಇಂಗ್ಲೆಂಡ್ ದಿಗ್ಗಜ ಬೌಲರ್ ಜೇಮ್ಸ್ ಆ್ಯಂಡರ್‌ಸನ್ ಇಂದು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಲಿದ್ದು, ಕ್ರಿಕೆಟ್ ಭವಿಷ್ಯದ ಬಗ್ಗೆ ಮಹತ್ವದ ಸುಳಿವನ್ನು ನೀಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ಗಾಯದ ಸಮಸ್ಯೆಯ ಬಳಿಕ ಚೇತರಿಸಿಕೊಂಡು ತಂಡಕ್ಕೆ ಕಮ್‌ಬ್ಯಾಕ್ ಮಾಡಿರುವ ಆ್ಯಂಡರ್‌ಸನ್ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿದ್ದಾರೆ. ಕಮ್‌ಬ್ಯಾಕ್‌ ಬಳಿಕ ನಡೆದ ನಾಲ್ಕು ಪಂದ್ಯಗಳ ಪೈಕಿ ಆ್ಯಂಡರ್‌ಸನ್ ಮೂರು ಪಂದ್ಯಗಳನ್ನಾಡಿದ್ದು, 6 ಇನಿಂಗ್ಸ್‌ಗಳಲ್ಲಿ ಕೇವಲ 6 ವಿಕೆಟ್ ಪಡೆಯಲು ಸಫಲವಾಗಿದ್ದಾರೆ.

ಜೋ ರೂಟ್ ಪಡೆ ಸದ್ಯ ಬಲಿಷ್ಠ ಬೌಲಿಂಗ್ ಲೈನ್‌ ಅಪ್ ಹೊಂದಿದೆ. ಹೀಗಾಗಿ ಆ್ಯಂಡರ್‌ಸನ್ ಉತ್ತಮ ಪ್ರದರ್ಶನ ತೋರಲೇಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ಉತ್ತಮ ಪ್ರದರ್ಶನದ ಹೊರತಾಗಿಯೂ ಸ್ಯಾಮ್ ಕರನ್, ಮಾರ್ಕ್ ವುಡ್ ಬೆಂಚ್ ಕಾಯಿಸುತ್ತಿದ್ದಾರೆ. ಇನ್ನು ಕ್ರಿಸ್ ವೋಕ್ಸ್ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ತಮ್ಮ ಅದ್ಭುತ ಆಲ್ರೌಂಡ್ ಪ್ರದರ್ಶನದಿಂದಾಗಿ ಮುಂದಿನ ಕೆಲವು ಪಂದ್ಯಗಳಿಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

ಪಾಕ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಬಿದ್ದ ಇಂಗ್ಲೆಂಡ್ ಸ್ಟಾರ್ ಆಲ್ರೌಂಡರ್..!

ರೊಟೆಷನ್ ನಿಯಮದನ್ವಯ ಶುಕ್ರವಾರದಿಂದ ಆರಂಭವಾಗುವ ಎರಡನೇ ಟೆಸ್ಟ್‌ನಲ್ಲಿ ಒಬ್ಬ ವೇಗಿಗೆ ರೆಸ್ಟ್ ನೀಡಬೇಕಾಗಿದೆ. ಹೀಗಾದಲ್ಲಿ ಆಟಗಾರನ ಪ್ರದರ್ಶನ ಹಾಗೂ ವಯಸ್ಸನ್ನು ಗಮನಿಸಿದರೆ ಆ್ಯಂಡರ್‌ಸನ್ ಅವರಿಗೆ ರೆಸ್ಟ್ ನೀಡುವ ಸಾಧ್ಯತೆಯೇ ಹೆಚ್ಚಿದೆ.

ಡೇಲಿ ಮೇಲ್ ವರದಿಯಂತೆ 38 ವರ್ಷದ ಜೇಮ್ಸ್ ಆ್ಯಂಡರ್‌ಸನ್ ಸೋಮವಾರವಾದ ಇಂದು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 28 ಓವರ್‌ ಬೌಲಿಂಗ್ ಮಾಡಿ ಕೇವಲ 1 ವಿಕೆಟ್ ಪಡೆಯಲಷ್ಟೇ ಶಕ್ತವಾಗಿದ್ದರು. ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿತ್ತು. ಸದ್ಯ 154 ಟೆಸ್ಟ್ ಪಂದ್ಯಗಳನ್ನಾಡಿರುವ ಜೇಮ್ಸ್ ಆ್ಯಂಡರ್‌ಸನ್ 590 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ 600 ವಿಕೆಟ್ ಮೈಲಿಗಲ್ಲು ಸ್ಥಾಪಿಸಲಿದ್ದಾರೆ ಎಂದು ಭಾವಿಸಲಾಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಅದು ಕಷ್ಟಸಾಧ್ಯವೇನೋ ಎನಿಸಲಾರಂಭಿಸಿದೆ. ಹೀಗಾಗಿ ಭವಿಷ್ಯದ ಕ್ರಿಕೆಟ್‌ ಜೀವನದ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತಾರಾ ಎನ್ನುವುದಕ್ಕೆ ಕೆಲವೇ ಗಂಟೆಗಳಲ್ಲಿ ಉತ್ತರ ಸಿಗುವ ಸಾಧ್ಯತೆಯಿದೆ.