ಹಾಲಿ ವರ್ಷ ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳಿಂದ 54 ಡಕ್1998ರಲ್ಲಿ ತನ್ನದೇ ಕುಖ್ಯಾತ ವಿಶ್ವದಾಖಲೆಯನ್ನು ಸರಿಗಟ್ಟಿದ ಇಂಗ್ಲೆಂಡ್20 ಭಿನ್ನ ಪ್ಲೇಯರ್ ಗಳಿಂದ 54 ಸೊನ್ನೆ
ಮೆಲ್ಬೋರ್ನ್ (ಡಿ. 28): ಏಕದಿನ ಕ್ರಿಕೆಟ್ ನ ವಿಶ್ವ ಚಾಂಪಿಯನ್ ಇಂಗ್ಲೆಂಡ್ (England)ತಂಡದ ಟೆಸ್ಟ್ ಮಾದರಿಯ ನಿರ್ವಹಣೆ ಹಾಲಿ ವರ್ಷ ಬಹಳಷ್ಟು ಟೀಕೆಗೆ ತುತ್ತಾಗಿದೆ. ಕೇವಲ 12 ದಿನಗಳಲ್ಲೇ ಆ್ಯಷಸ್ (Ashes) ಟ್ರೋಫಿ ಸೋತ ಬೆನ್ನಲ್ಲಿಯೇ ಇಂಗ್ಲೆಂಡ್ ತಂಡದ ಆಟಗಾರರ ನಿರ್ವಹಣೆಯ ಬಗ್ಗೆ ಮಾಜಿ ಕ್ರಿಕೆಟಿಗರು ವ್ಯಾಪಕ ಟೀಕೆ ಮಾಡಿದ್ದಾರೆ. ಇದು ಹಾಲಿ ವರ್ಷದಲ್ಲಿ ಇಂಗ್ಲೆಂಡ್ ತಂಡದ 9ನೇ ಟೆಸ್ಟ್ ಸೋಲು. ಕ್ಯಾಲೆಂಡರ್ ವರ್ಷವೊಂದರಲ್ಲೇ ಇಂಗ್ಲೆಂಡ್ ತಂಡ ಇಷ್ಟು ಸೋಲು ಕಂಡಿರುವುದು ಇದೇ ಮೊದಲ ಬಾರಿ. ಇದಕ್ಕೂ ಮುನ್ನ 1984, 1986, 1993 ಹಾಗೂ 2016ರಲ್ಲಿ ತಂಡ 8 ಸೋಲು ಕಂಡಿದ್ದೇ ಕೆಟ್ಟ ನಿರ್ವಹಣೆ ಎನಿಸಿತ್ತು. 2010-11 ರಲ್ಲಿ ಆಸ್ಟ್ರೇಲಿಯಾದಲ್ಲಿ(Australia) ಆ್ಯಷಸ್ ಸರಣಿ ಗೆದ್ದ ಬಳಿಕ ಇಂಗ್ಲೆಂಡ್ ಆಡಿದ 13 ಪಂದ್ಯಗಳ ಪೈಕಿ 12 ರಲ್ಲಿ ಸೋಲು ಕಂಡಿದೆ.
ಇಂಗ್ಲೆಂಡ್ ತಂಡದ ಒಟ್ಟಾರೆ ಈ ಎಲ್ಲಾ ಕೆಟ್ಟ ದಾಖಲೆಗಿಂತ "ವಿಶ್ವದಾಖಲೆಯ ಡಕ್" ಬಗ್ಗೆ ವ್ಯಾಪಕ ಟೀಕೆಗಳು ಬಂದಿವೆ. ವಿಶ್ವದ ಎಲ್ಲಾ ಕಡೆ ಇಂಗ್ಲೆಂಡ್ ಹಾಲಿ ವರ್ಷ ಒಂದಲ್ಲಾ ಒಂದು ಟೆಸ್ಟ್ ಪಂದ್ಯ ಸೋತಿದೆ. ಅದಕ್ಕೆ ಪ್ರಮುಖ ಕಾರಣ ಇಂಗ್ಲೆಂಡ್ ನ ಬ್ಯಾಟಿಂಗ್. ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಇಂಗ್ಲೆಂಡ್ ಬ್ಯಾಟಿಂಗ್ ವಿಭಾಗದ ಐದು "ಡಕ್" ನಿರ್ವಹಣೆ ಬಂದಿದೆ. ಹಸೀಬ್ ಅಹ್ಮದ್ (Haseeb Hameed), ಡೇವಿಡ್ ಮಲಾನ್ (Dawid Malan), ಜಾಕ್ ಲೀಚ್ (Jack Leach), ಮಾರ್ಕ್ ವುಡ್ (Mark Wood) ಹಾಗೂ ಒಲ್ಲಿ ರಾಬಿನ್ಸನ್ (Ollie Robinson) ಶೂನ್ಯಕ್ಕೆ ಔಟಾದರು.
ಆ ಮೂಲಕ 2021ರಲ್ಲಿ ಒಟ್ಟು 54 ಬಾರಿ ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳು ಶೂನ್ಯಕ್ಕೆ ಔಟ್ ಆದಂತಾಗದೆ. ಇದು ಇವರದೇ ತಂಡ 1998ರಲ್ಲಿ ನಿರ್ಮಿಸಿದ ವಿಶ್ವದಾಖಲೆಗೆ ಸಮ. ಒಟ್ಟಾರೆ 20 ಭಿನ್ನ ಬ್ಯಾಟ್ಸ್ ಮನ್ ಗಳು ಇದಕ್ಕೆ "ಕಾಣಿಕೆ" ನೀಡಿದ್ದು, ರೋರಿ ಬನ್ಸ್ ಗರಿಷ್ಠ 6 ಬಾರಿ ಸೊನ್ನೆಗೆ ಔಟ್ ಆಗಿದ್ದರೆ, ನಂತರದ ಸ್ಥಾನದಲ್ಲಿರುವ ಒಲ್ಲಿ ರಾಬಿನ್ಸನ್ ಐದು ಬಾರಿ ಸೊನ್ನೆ ವಿಕ್ರಮ ಸಾಧಿಸಿದ್ದಾರೆ.
ಉಳಿದವರನ್ನು ಲೆಕ್ಕ ಹಾಕುವುದಾದರೆ, ಡೊಮಿನಿಕ್ ಸಿಬಿಲಿ, ಹಸೀಬ್ ಹಮೀದ್, ಡಾನ್ ಲಾರೆನ್ಸ್, ಜಾನಿ ಬೇರ್ ಸ್ಟೋ ಹಾಗೂ ಜೇಮ್ಸ್ ಆಂಡರ್ ಸನ್ ತಲಾ ನಾಲ್ಕು ಬಾರಿ ಈ ವರ್ಷದಲ್ಲಿ ಸೊನ್ನೆಗೆ ಔಟ್ ಆಗಿದ್ದಾರೆ. ಸ್ಯಾಮ್ ಕರ್ರನ್ ಹಾಗೂ ಸ್ಟುವರ್ಟ್ ಬ್ರಾಡ್ ತಲಾ ಮೂರು ಬಾರಿ, ಜಾಕ್ ಕ್ರಾವ್ಲಿ, ಜೋಸ್ ಬಟ್ಲರ್, ಜೇಮ್ಸ್ ಬ್ರೇಸಿ, ಜಾಕ್ ಲೀಚ್, ಜೋಫ್ರಾ ಆರ್ಚರ್ ಹಾಗೂ ಮಾರ್ಕ್ ವುಡ್ ತಲಾ 2 ಬಾರಿ ಸೊನ್ನೆಗೆ ವಿಕೆಟ್ ಒಪ್ಪಿಸಿದ್ದಾರೆ. ಉಳಿದಂತೆ ಡೇವಿಡ್ ಮಲಾನ್, ನಾಯಕ ಜೋ ರೂಟ್, ಡೊಮಿನಿಕ್ ಬೆಸ್, ಮೊಯಿನ್ ಅಲಿ ಹಾಗೂ ಒಲ್ಲಿ ಸ್ಟೋನ್ ತಲಾ ಒಮ್ಮೆ "ಡಕ್" ಗೆ ಕಾಣಿಕೆ ಕೊಟ್ಟಿದ್ದಾರೆ.
ಟೆಸ್ಟ್ ಆಡುವುದನ್ನು ಹೆಮ್ಮೆಯ ರೀತಿ ಭಾವಿಸುವ ಇಂಗ್ಲೆಂಡ್ ತಂಡ, ಕಳೆದ ಕೆಲವು ವರ್ಷಗಳಲ್ಲಿ ತನ್ನ ನಿರ್ವಹಣೆಯಲ್ಲಿ ಇದನ್ನು ತೋರಿಸುತ್ತಿಲ್ಲ. ಕಳೆದ 2-3 ವರ್ಷಗಳಲ್ಲಿ ಇಂಗ್ಲೆಂಡ್ ತಂಡ ಸೀಮಿತ ಓವರ್ ಗಳ ಕ್ರಿಕೆಟ್ ನಲ್ಲಿ ಅದ್ಭುತ ನಿರ್ವಹಣೆ ತೋರುತ್ತಿದ್ದರೆ, ಟೆಸ್ಟ್ ಕ್ರಿಕೆಟ್ ನಲ್ಲಿ ಅಷ್ಟೇ ದಯನೀಯ ನಿರ್ವಹಣೆ ನೀಡುತ್ತಿದೆ. ಈ ಬಾರಿ ತವರಿನ್ಲಲಿ ನ್ಯೂಜಿಲೆಂಡ್ ಹಾಗೂ ಭಾರತಕ್ಕೆ ಸೋತಿದ್ದು ಮಾತ್ರವಲ್ಲ, ಆಸೀಸ್ ನೆಲದಲ್ಲಿ ಕನಿಷ್ಠ ಹೋರಾಟವನ್ನೂ ತೋರದೇ ಸೋಲು ಕಾಣುತ್ತಿದೆ. ಪಂದ್ಯವೆಂದ ಮೇಲೆ ಸೋಲುಗಳು ಸಹಜ ಆದರೆ, ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳು ಆಡುತ್ತಿರುವ ರೀತಿ ಕಂಡು ಸ್ವತಃ ಆಸೀಸ್ ಮಾಜಿ ಆಟಗಾರರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ICC Awards 2021 : ವರ್ಷದ ಟೆಸ್ಟ್ ಪ್ಲೇಯರ್ ಪ್ರಶಸ್ತಿ ರೇಸ್ ನಲ್ಲಿದ್ದಾರೆ ಟೀಂ ಇಂಡಿಯಾ ಅಗ್ರ ಬೌಲರ್!
ಭಾರತ ತಂಡಕ್ಕೆ 2ನೇ ಸ್ಥಾನ: ವರ್ಷವೊಂದರಲ್ಲಿ ಗರಿಷ್ಠ ಸೊನ್ನೆ ಸುತ್ತಿನದ ಟೆಸ್ಟ್ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಭಾರತ (Team India) ತಂಡ 2ನೇ ಸ್ಥಾನದಲ್ಲಿದೆ. ಭಾರತದ ಬ್ಯಾಟ್ಸ್ ಮನ್ ಗಳು ಒಂದೇ ವರ್ಷದಲ್ಲಿ 34 ಬಾರಿ ಶೂನ್ಯಕ್ಕೆ ಔಟಾಗಿದ್ದರು. ಉಳಿದಂತೆ ನಂತರದ ಮೂರು ಸ್ಥಾನಗಳಲ್ಲಿ ಜಿಂಬಾಬ್ವೆ, ಬಾಂಗ್ಲಾದೇಶ ಹಾಗೂ ವೆಸ್ಟ್ ಇಂಡೀಸ್ ತಂಡಗಳಿದ್ದು, ಈ ಮೂರೂ ತಂಡಗಳು ವರ್ಷವೊಂದರಲ್ಲಿ 23 ಬಾರಿ ಸೊನ್ನೆ ಸುತ್ತಿವೆ.
