ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಮೊದಲ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಇಂಗ್ಲೆಂಡ್‌ ತಂಡಕ್ಕೆ ಅಭ್ಯಾಸ ನಡೆಸಲು ಕೇವಲ ಮೂರು ದಿನಗಳು ಮಾತ್ರ ಸಿಗಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಲಂಡನ್(ಜ.26)‌: ಭಾರತ ವಿರುದ್ಧ ಫೆಬ್ರವರಿ 5ರಿಂದ ಆರಂಭಗೊಳ್ಳಲಿರುವ ಮೊದಲ ಟೆಸ್ಟ್‌ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್‌ ತಂಡಕ್ಕೆ ಕೇವಲ 3 ದಿನಗಳ ಕಾಲ ಅಭ್ಯಾಸ ನಡೆಸಲು ಅವಕಾಶ ಸಿಗಲಿದೆ. ಶ್ರೀಲಂಕಾದಿಂದ ಭಾರತಕ್ಕೆ ಬಂದಿಳಿದ ಬಳಿಕ ತಂಡ ಕಡ್ಡಾಯವಾಗಿ 6 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕಿದೆ.

ಜೋ ರೂಟ್‌ ನೇತೃತ್ವದ ಇಂಗ್ಲೆಂಡ್‌ ತಂಡ ಬುಧವಾರ ಚೆನ್ನೈಗೆ ಆಗಮಿಸಲಿದ್ದು, ಹೋಟೆಲ್‌ನಲ್ಲಿ ಕ್ವಾರಂಟೈನ್‌ಗೆ ಒಳಗಾಗಲಿದೆ. 6 ದಿನಗಳಲ್ಲಿ ಎಲ್ಲ ಆಟಗಾರರು, ಸಿಬ್ಬಂದಿಯನ್ನು 3 ಬಾರಿ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ಟೀಂ ಇಂಡಿಯಾಗೆ ಶುರುವಾಗಿದೆ ಇಂಗ್ಲೆಂಡ್ ಸ್ಪಿನ್ನರ್ಸ್‌ ಟೆನ್ಷನ್‌..!

ಶ್ರೀಲಂಕಾಗೆ ತೆರಳದ ಬೆನ್‌ ಸ್ಟೋಕ್ಸ್‌, ಜೋಫ್ರಾ ಆರ್ಚರ್‌ ಹಾಗೂ ರೋರಿ ಬರ್ಸ್‌ ಭಾನುವಾರ ರಾತ್ರಿ ಭಾರತಕ್ಕೆ ಆಗಮಿಸಿದ್ದು, ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಈ ಆಟಗಾರರಿಗೆ ಮೊದಲ ಟೆಸ್ಟ್‌ಗೂ ಮುನ್ನ 5 ದಿನಗಳ ಕಾಲ ಅಭ್ಯಾಸ ನಡೆಸಲು ಅವಕಾಶ ಸಿಗಲಿದೆ. ಕೊರೋನಾ ಲಾಕ್ಡೌನ್‌ ಬಳಿಕ ಭಾರತದಲ್ಲಿ ನಡೆಯಲಿರುವ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್‌ ಸರಣಿ ಇದಾಗಿದೆ.

ಒಂದು ಕಡೆ ಟೀಂ ಇಂಡಿಯಾ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಆಸ್ಟ್ರೇಲಿಯಾ ವಿರುದ್ದವೇ 2-1 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಕೈವಶ ಮಾಡಿಕೊಂಡಿತ್ತು. ಇನ್ನು ಜೋ ರೂಟ್‌ ನೇತೃತ್ವದ ಇಂಗ್ಲೆಂಡ್‌ ತಂಡವು ಶ್ರೀಲಂಕಾ ಎದುರು ಟೆಸ್ಟ್ ಸರಣಿಯನ್ನು ಕ್ಲೀನ್‌ಸ್ವೀಪ್‌ ಮಾಡಿ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಹೀಗಾಗಿ ಭಾರತ ಹಾಗೂ ಇಂಗ್ಲೆಂಡ್‌ ನಡಿವಿನ ಸರಣಿ ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿರುವ ಸಾಧ್ಯತೆಯಿದೆ.