* ಪಾಕಿಸ್ತಾನ ವಿರುದ್ದದ ಟಿ20 ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ* ತಂಡ ಕೂಡಿಕೊಂಡ ಇಯಾನ್‌ ಮಾರ್ಗನ್‌* ಆಲ್ರೌಂಡರ್ ಬೆನ್‌ ಸ್ಟೋಕ್ಸ್‌ಗೆ ವಿಶ್ರಾಂತಿ

ಲಂಡನ್‌(ಜು.14): ಪಾಕಿಸ್ತಾನ ವಿರುದ್ದದ 3 ಪಂದ್ಯಗಳ ಟಿ20 ಸರಣಿಗೆ 16 ಆಟಗಾರರನ್ನೊಳಗೊಂಡ ಬಲಿಷ್ಠ ತಂಡವನ್ನು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಯು ಪ್ರಕಟಿಸಿದ್ದು, ಇಯಾನ್‌ ಮಾರ್ಗನ್‌ ತಂಡ ಕೂಡಿಕೊಂಡಿದ್ದಾರೆ.

ಏಕದಿನ ಸರಣಿಗೂ ಮುನ್ನ ತಂಡದಲ್ಲಿ ಕೋವಿಡ್ 19 ಸೋಂಕು ದೃಢಪಟ್ಟ ಬೆನ್ನಲ್ಲೇ ನಾಯಕ ಮಾರ್ಗನ್ ಸೇರಿದಂತೆ ಎಲ್ಲಾ ಆಟಗಾರರು ಕಡ್ಡಾಯ ಐಸೋಲೇಷನ್‌ಗೆ ಓಳಗಾಗಿದ್ದರು. ಇನ್ನು ಮತ್ತೆ ನಾಯಕನಾಗಿ ಮಾರ್ಗನ್ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಮಾರ್ಗನ್ ಅನುಪಸ್ಥಿತಿಯಲ್ಲಿ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಇಂಗ್ಲೆಂಡ್‌ ಆಲ್ರೌಂಡರ್ ಬೆನ್ ಸ್ಟೋಕ್ಸ್‌ಗೆ ವಿಶ್ರಾಂತಿ ನೀಡಲಾಗಿದೆ. 

Scroll to load tweet…

ಇದೇ ವೇಳೆ ಸೀಮಿತ ಓವರ್‌ಗಳ ತಂಡದ ಸ್ಟಾರ್ ಆಟಗಾರರಾದ ಜಾನಿ ಬೇರ್‌ಸ್ಟೋವ್‌, ಜೋಸ್ ಬಟ್ಲರ್‌, ಜೇಸನ್ ರಾಯ್, ಮೋಯಿನ್ ಅಲಿ ಹಾಗೂ ಆದಿಲ್ ರಶೀದ್ ಕೂಡಾ ಇಂಗ್ಲೆಂಡ್ ತಂಡ ಕೂಡಿಕೊಂಡಿದ್ದಾರೆ. ಈ ಎಲ್ಲಾ ಆಟಗಾರರು ಪಾಕ್‌ ವಿರುದ್ದದ ಏಕದಿನ ಸರಣಿಯಿಂದ ಹೊರಗುಳಿದಿದ್ದರು. ಇನ್ನು ಪಾಕ್‌ ವಿರುದ್ದದ ಏಕದಿನ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದ ವೇಗಿ ಸಕೀಬ್‌ ಮೊಹಮ್ಮದ್ ಹಾಗೂ ಲೆಗ್ ಸ್ಪಿನ್ನರ್ ಮ್ಯಾಥ್ಯೂ ಪಾರ್ಕಿನ್‌ಸನ್‌ ಇದೇ ಮೊದಲ ಬಾರಿಗೆ ಇಂಗ್ಲೆಂಡ್‌ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

Scroll to load tweet…

ಟಿ20 ಸರಣಿಗೂ ಮುನ್ನ ಇಂಗ್ಲೆಂಡ್ ಹೆಡ್ ಕೋಚ್‌ ಕ್ರಿಸ್ ಸಿಲ್ವರ್‌ವುಡ್‌ ವಿಶ್ರಾಂತಿಗೆ ಜಾರಿದ್ದು, ಸಿಲ್ವರ್‌ವುಡ್‌ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ಮಾಜಿ ನಾಯಕ ಪೌಲಿ ಕಾಲಿಂಗ್‌ವುಡ್ ಟಿ20 ಸರಣಿಯಲ್ಲಿ ಇಂಗ್ಲೆಂಡ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಮೂರು ಪಂದ್ಯಗಳ ಟಿ20 ಸರಣಿಯು ಜುಲೈ 16ರಿಂದ ಆರಂಭವಾಗಲಿದ್ದು, ಇನ್ನುಳಿದ ಎರಡು ಟಿ20 ಪಂದ್ಯಗಳು ಕ್ರಮವಾಗಿ ಜುಲೈ 18 ಹಾಗೂ ಜುಲೈ 20ರಂದು ನಡೆಯಲಿವೆ.

ಪಾಕ್‌ ವಿರುದ್ದದ ಸರಣಿಗೆ ಇಂಗ್ಲೆಂಡ್ ತಂಡ ಹೀಗಿದೆ ನೋಡಿ: 

ಇಯಾನ್‌ ಮಾರ್ಗನ್‌(ನಾಯಕ), ಮೋಯಿನ್ ಅಲಿ, ಜಾನಿ ಬೇರ್‌ಸ್ಟೋವ್‌, ಜೇಕ್‌ ಬಾಲ್‌, ಟಾಮ್ ಬಾಂಟನ್, ಜೋಸ್ ಬಟ್ಲರ್, ಟಾಮ್ ಕರ್ರನ್‌, ಲೆವಿಸ್ ಗ್ರೆಗೊರಿ, ಕ್ರಿಸ್ ಜೋರ್ಡನ್, ಲಿಯಾಮ್ ಲಿವಿಂಗ್‌ಸ್ಟೋನ್, ಸಕೀಬ್ ಮೊಹಮದ್, ಡೇವಿಡ್ ಮಲಾನ್, ಮ್ಯಾಟ್‌ ಪಾರ್ಕಿನ್‌ಸನ್‌, ಆದಿಲ್‌ ರಶೀದ್, ಜೇಸನ್ ರಾಯ್ ಹಾಗೂ ಡೇವಿಡ್ ವಿಲ್ಲೆ.