ಗಾಲೆ(ಜ.25): ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿ ಆರಂಭಗೊಳ್ಳಲು ಇನ್ನು ಕೇವಲ 10 ದಿನ ಮಾತ್ರ ಬಾಕಿ ಇದ್ದು, ಆಸ್ಪ್ರೇಲಿಯಾದಲ್ಲಿ ಐತಿಹಾಸಿಕ ಸರಣಿ ಗೆದ್ದು ಬಂದಿರುವ ಭಾರತಕ್ಕೀಗ ಜೋ ರೂಟ್‌ ಭೀತಿ ಶುರುವಾಗಿದೆ. ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಫೈನಲ್‌ ಪ್ರವೇಶಿಸಲು ಕಾತರಿಸುತ್ತಿರುವ ಭಾರತ ತಂಡಕ್ಕೆ ರೂಟ್‌ ಮುಳುವಾಗುವ ಸಾಧ್ಯತೆ ಗೋಚರವಾಗಿದೆ.

ಶ್ರೀಲಂಕಾ ಪ್ರವಾಸದಲ್ಲಿರುವ ಇಂಗ್ಲೆಂಡ್‌ ತಂಡಕ್ಕೆ ನಾಯಕ ರೂಟ್‌ ಮತ್ತೆ ಆಸರೆಯಾಗಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸಿದ್ದ ರೂಟ್‌, ಸದ್ಯ ನಡೆಯುತ್ತಿರುವ 2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 186 ರನ್‌ ಗಳಿಸಿದ್ದಾರೆ. ರೂಟ್‌ ಅತ್ಯುತ್ತಮ ಲಯದಲ್ಲಿದ್ದು, ಭಾರತೀಯ ಬೌಲರ್‌ಗಳಿಗೆ ಅವರನ್ನು ನಿಯಂತ್ರಿಸುವುದು ದೊಡ್ಡ ಸವಾಲಾಗಿ ಪರಿಣಮಿಸಬಹುದು ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.

ಫೆ.5 ರಿಂದ ಭಾರತ-ಇಂಗ್ಲೆಂಡ್ ತವರಿನ ಸರಣಿ; ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ!

ಮುನ್ನಡೆಯತ್ತ ಲಂಕಾ: ರೂಟ್‌ 186 ರನ್‌ಗಳ ಹೊರತಾಗಿಯೂ ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸುವ ಸಾಧ್ಯತೆ ಹೆಚ್ಚಿದೆ. 3ನೇ ದಿನದಂತ್ಯಕ್ಕೆ ಇಂಗ್ಲೆಂಡ್‌ 9 ವಿಕೆಟ್‌ ನಷ್ಟಕ್ಕೆ 339 ರನ್‌ ಗಳಿಸಿದ್ದು, ಇನ್ನೂ 42 ರನ್‌ ಹಿನ್ನಡೆಯಲ್ಲಿದೆ. ಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 381 ರನ್‌ ಕಲೆಹಾಕಿತ್ತು.

ಸ್ಕೋರ್‌: ಲಂಕಾ 381, ಇಂಗ್ಲೆಂಡ್‌ 339/9