ಅಹಮದಾಬಾದ್‌(ಫೆ.25): ಭಾರತ-ಇಂಗ್ಲೆಂಡ್‌ ನಡುವಿನ ಪಿಂಕ್ ಬಾಲ್ ಟೆಸ್ಟ್‌ ಪಂದ್ಯದ ಮೊದಲ ದಿನದಾಟ ಮುಕ್ತಾಯವಾದ ಬೆನ್ನಲ್ಲೇ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್‌ ಹಾಗೂ ಹೆಡ್‌ ಕೋಚ್ ಕ್ರಿಸ್ ಸಿಲ್ವರ್‌ವುಡ್ ಐಸಿಸಿ ಮ್ಯಾಚ್‌ ರೆಫ್ರಿ ಜಾವಗಲ್ ಶ್ರೀನಾಥ್ ಭೇಟಿಯಾಗಿ ಅಂಪೈರ್‌ಗಳು ಸ್ಥಿರತೆ ಕಾಪಾಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ವರದಿ ಪ್ರಕಾರ, ನಾಯಕ ರೂಟ್‌ ಹಾಗೂ ಕೋಚ್ ಸಿಲ್ವರ್‌ವುಡ್ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ವೇಳೆ ಮೂರನೇ ಅಂಪೈರ್ ನೀಡಿದ ಎರಡು ತೀರ್ಪುಗಳ ಬಗ್ಗೆ ಅಸಮಧಾನ ಹೊಂದಿದ್ದಾರೆ ಎಂದು ವರದಿಯಾಗಿದೆ. ಈ ಕುರಿತಂತೆ  ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ ಪ್ರಕಟಣೆಯೊಂದನ್ನು ಹೊರಡಿಸಿದೆ.

ಪಂದ್ಯ ಮುಕ್ತಾಯವಾದ ಬಳಿಕ ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಹಾಗೂ ಹೆಡ್‌ ಕೋಚ್‌ ಮ್ಯಾಚ್‌ ರೆಫ್ರಿ ಜತೆ ಮಾತನಾಡಿದ್ದಾರೆ. ಮೈದಾನದಲ್ಲಿ ಅಂಪೈರ್‌ ಬಳಿ ಗೌರವ ಪೂರ್ವಕವಾಗಿಯೇ ಚರ್ಚೆ ನಡೆಸಿದ್ದೇವೆ, ಯಾವುದೇ ನಿರ್ಣಯ ಕೊಡುವಾಗಲೂ ಅಂಪೈರ್‌ಗಳು ಸ್ಥಿರತೆ ಕಾಪಾಡಿಕೊಳ್ಳಲಿ ಎಂದು ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಮ್ಯಾಚ್‌ ರೆಫ್ರಿ, ನಾಯಕನಿಗೆ ಅಂಪೈರ್ ಪ್ರಶ್ನಿಸುವ ಹಕ್ಕಿದೆ ಎಂದು ತಿಳಿಸಿದ್ದಾರೆಂದು ಇಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.

ಚೆಂಡು ನೆಲಕ್ಕೆ ತಾಗಿದರೂ ಔಟ್‌ಗೆ ಮನವಿ: ಟ್ರೋಲ್‌ ಅದ ಬೆನ್ ಸ್ಟೋಕ್ಸ್‌..!

ಸ್ಟುವರ್ಟ್ ಬ್ರಾಡ್‌ ಬೌಲಿಂಗ್‌ನಲ್ಲಿ ಶುಭ್‌ಮನ್‌ ಗಿಲ್‌ ಬ್ಯಾಟ್ ಸವರಿ ಚೆಂಡು ಬೆನ್ ಸ್ಟೋಕ್ಸ್‌ ಕೈ ಸೇರಿತ್ತು. ಮೈದಾನದಲ್ಲಿದ್ದ ಅಂಪೈರ್ ಸಾಫ್ಟ್ ಸಿಗ್ನಲ್‌ ಔಟ್ ಎಂದು ತೀರ್ಮಾನಿಸಿದ್ದರು. ಆದರೆ ಮೂರನೇ ಅಂಪೈರ್‌ ರೀಪ್ಲೇ ನೋಡಿದಾಗ ಚೆಂಡು ನೆಲಕ್ಕೆ ತಾಗಿರುವುದು ಸ್ಪಷ್ಟವಾಗಿ ಗೋಚರವಾಗಿದ್ದರಿಂದ ಥರ್ಡ್ ಅಂಪೈರ್ ನಾಟೌಟ್ ಎಂದು ನಿರ್ಣಯ ನೀಡಿದರು.

ಇದಾದ ಬಳಿಕ ಇಂಗ್ಲೆಂಡ್‌ ವಿಕೆಟ್ ಕೀಪರ್‌ ಬೆನ್‌ ಫೋಕ್ಸ್‌ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್ ಶರ್ಮಾ ಅವರ ಸ್ಟಂಪಿಂಗ್‌ ಮನವಿಯನ್ನು ಥರ್ಡ್ ಅಂಪೈರ್ ಪುರಸ್ಕರಿಸಿರಲಿಲ್ಲ. ಈ ಎರಡು ತೀರ್ಮಾನಗಳ ಬಗ್ಗೆ ರೂಟ್‌ ಹಾಗೂ ಸಿಲ್ವರ್‌ವುಡ್ ಅಸಮಾಧಾನ ಹೊರಹಾಕಿದ್ದರು ಎಂದು ವರದಿಯಾಗಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಿಂಕ್‌ ಬಾಲ್ ಟೆಸ್ಟ್‌ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್‌ ತಂಡ ಕೇವಲ 112 ರನ್‌ಗಳಿಗೆ ಸರ್ವಪತನ ಕಂಡಿದೆ. ಅಕ್ಷರ್ ಪಟೇಲ್‌ 6, ಅಶ್ವಿನ್ 3 ಹಾಗೂ ಇಶಾಂತ್ ಶರ್ಮಾ ಒಂದು ವಿಕೆಟ್ ಕಬಳಿಸಿದ್ದಾರೆ. ಇನ್ನು ಮೊದಲ ಇನಿಂಗ್ಸ್‌ ಆರಂಭಿಸಿರುವ ಟೀಂ ಇಂಡಿಯಾ ಮೊದಲ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 99 ರನ್ ಬಾರಿಸಿದ್ದು, ಇನ್ನು ಕೇವಲ 13 ರನ್‌ಗಳ ಹಿನ್ನಡೆಯಲ್ಲಿದೆ.