ಸೆಂಚೂರಿಯನ್‌(ಫೆ.17): ನಾಯಕ ಇಯಾನ್‌ ಮಾರ್ಗನ್‌ ಹಾಗೂ ಜಾನಿ ಬೇರ್‌ಸ್ಟೋವ್‌ ಅವರ ಭರ್ಜರಿ ಅರ್ಧಶತಕಗಳ ನೆರವಿನಿಂದ ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ 5 ವಿಕೆಟ್‌ಗಳ ಗೆಲುವು ಸಾಧಿಸಿದೆ. ಈ ಜಯದೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್‌ 2-1ರಿಂದ ವಶಪಡಿಸಿಕೊಂಡಿದೆ. 

ವರ್ಷದ ಬಳಿಕ ಹರಿಣಗಳ ತಂಡ ಕೂಡಿಕೊಂಡ ಡೇಲ್ ಸ್ಟೇನ್..!

ಭಾನುವಾರ ನಡೆದ 3ನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ಆಫ್ರಿಕಾ ನೀಡಿದ 223 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಇಂಗ್ಲೆಂಡ್‌ ಆರಂಭದಲ್ಲಿ ಜೇಸನ್‌ ರಾಯ್‌ (7) ವಿಕೆಟ್‌ ಕಳೆದುಕೊಂಡಿತು. ಆದರೆ 2ನೇ ವಿಕೆಟ್‌ಗೆ ಬಟ್ಲರ್‌ (57) ಹಾಗೂ ಬೇರ್‌ಸ್ಟೋವ್‌ 91 ರನ್‌ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದರು. ಬೇರ್‌ಸ್ಟೋವ್‌ 64 ರನ್‌ಗಳಿಸಿದರು. ಕೊನೆಯಲ್ಲಿ ಮಾರ್ಗನ್‌ ಕೇವಲ 22 ಎಸೆತಗಳಲ್ಲಿ 7 ಸಿಕ್ಸರ್‌ ಸಹಿತ ಅಜೇಯ 57 ರನ್‌ಗಳಿಸಿ ಇಂಗ್ಲೆಂಡ್‌ಗೆ ಜಯ ತಂದುಕೊಟ್ಟರು. 

ಟೆಸ್ಟ್‌ ಕ್ರಿಕೆಟಲ್ಲಿ 5 ಲಕ್ಷ ರನ್‌ ಬಾರಿಸಿ ದಾಖಲೆ ಬರೆದ ಇಂಗ್ಲೆಂಡ್!

ಇದಕ್ಕೂ ಮೊದಲು ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡಲು ತೀರ್ಮಾನಿಸಿತು. ತೆಂಬಾ ಬವುಮಾ(49), ಕ್ಲಾಸೆನ್‌ (66)ಹಾಗೂ ಡೇವಿಡ್ ಮಿಲ್ಲರ್(35) ಹೋರಾಟದಿಂದ 6 ವಿಕೆಟ್‌ಗೆ 222 ರನ್‌ಗಳಿಸಿತು.

ಇಂಗ್ಲೆಂಡ್‌ ವಿರುದ್ದದ ಮೊದಲು ಟಿ20 ಪಂದ್ಯವನ್ನು ದಕ್ಷಿಣ ಆಫ್ರಿಕಾ ತಂಡ ಒಂದು ರನ್‌ ರೋಚಕ ಜಯ ಸಾಧಿಸಿತ್ತು. ಇನ್ನು ಡರ್ಬನ್‌ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ 2 ರನ್‌ಗಳ ರೋಚಕ ಜಯ ಸಾಧಿಸಿತ್ತು. ಇನ್ನು ಮೂರನೇ ಹಾಗೂ ನಿರ್ಣಾಯಕ ಪಂದ್ಯವನ್ನು 5 ವಿಕೆಟ್‌ಗಳಿಂದ ಜಯಿಸುವ ಮೂಲಕ ಟಿ20 ಸರಣಿ ಕೈವಶ ಮಾಡಿಕೊಂಡಿತು. ಈ ಮೂಲಕ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ಪ್ರವಾಸವನ್ನು ಅತ್ಯಂತ ಯಶಸ್ವಿಯಾಗಿ ಮುಗಿಸಿದೆ.

ಈ ಮೊದಲು ಇಂಗ್ಲೆಂಡ್ ತಂಡವು 4 ಪಂದ್ಯಗಳ ಟೆಸ್ಟ್ ಚಾಂಪಿಯನ್‌ಶಿಪ್‌ನ್ನು 3-1ರಿಂದ ಕೈವಶ ಮಾಡಿಕೊಂಡಿತ್ತು. ಇದಾದ ಬಳಿಕ ನಡೆದ 3 ಪಂದ್ಯಗಳ ಏಕದಿನ ಸರಣಿ 1-1ರಲ್ಲಿ ಸಮಬಲ ಸಾಧಿಸಿತ್ತು(ಎರಡನೇ ಪಂದ್ಯ ಮಳೆಯಿಂದ ರದ್ದಾಗಿತ್ತು) ಇದೀಗ ಟಿ20 ಸರಣಿಯು ಇಂಗ್ಲೆಂಡ್ ಪಾಲಾಗಿದೆ. ಕಾಕತಾಳೀಯವೆಂದರೆ ಮೂರು ಸರಣಿಯಲ್ಲೂ ಮೊದಲ ಪಂದ್ಯವನ್ನು ಆತಿಥೇಯ ದಕ್ಷಿಣ ಆಫ್ರಿಕಾ ಜಯಿಸಿದೆ. ಆದರೆ ಉತ್ತಮ ಆರಂಭ ಸರಣಿ ಗೆಲ್ಲಲು ನೆರವಾಗದೇ ಉಳಿದದ್ದು ಮಾತ್ರ ವಿಪರ್ಯಾಸ.  

ಸ್ಕೋರ್‌:

ದಕ್ಷಿಣ ಆಫ್ರಿಕಾ 222/6

ಇಂಗ್ಲೆಂಡ್‌ 226/5
News In 100 Seconds: ಪ್ರಮುಖ ಸುದ್ದಿಗಳು

"