ಲಂಡನ್(ಡಿ.22)‌: ಮುಂಬರುವ ಶ್ರೀಲಂಕಾ ವಿರುದ್ಧದ ಪ್ರವಾಸಕ್ಕೆ ದಕ್ಷಿಣ ಆಫ್ರಿಕಾ ಮಾಜಿ ಆಲ್ರೌಂಡರ್‌ ಜಾಕ್‌ ಕಾಲೀಸ್‌, ಇಂಗ್ಲೆಂಡ್‌ ತಂಡದ ಬ್ಯಾಟಿಂಗ್‌ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ. 

ಜನವರಿಯಲ್ಲಿ ಇಂಗ್ಲೆಂಡ್‌ ತಂಡ, ಲಂಕಾ ವಿರುದ್ಧ 2 ಟೆಸ್ಟ್‌ ಪಂದ್ಯಗಳನ್ನಾಡಲಿದೆ. ಈ ಸರಣಿಗೆ ಇಂಗ್ಲೆಂಡ್‌ 7 ತರಬೇತುದಾರರ ತಂಡವನ್ನು ರಚಿಸಿದೆ. ಇದೇ ಮೊದಲ ಬಾರಿಗೆ ಕಾಲೀಸ್‌ ಇಂಗ್ಲೆಂಡ್‌ ತಂಡದಲ್ಲಿ ಕಾರ‍್ಯನಿರ್ವಹಿಸುತ್ತಿದ್ದಾರೆ. ಜ.2 ರಂದು ಇಂಗ್ಲೆಂಡ್‌ ತಂಡ ಲಂಕಾ ಪ್ರವಾಸಕ್ಕೆ ತೆರಳಲಿದೆ. 

ಫೆಬ್ರವರಿಯಲ್ಲಿ ನಡೆಯಲಿರುವ ಭಾರತ ಪ್ರವಾಸಕ್ಕೂ ಕಾಲೀಸ್‌ ಅವರ ಸೇವೆಯನ್ನು ಮುಂದುವರಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಲಂಕಾ ಪ್ರವಾಸದಲ್ಲಿ ಇಂಗ್ಲೆಂಡ್‌ ಜ.14 ರಿಂದ 18 ಹಾಗೂ ಜ.22 ರಿಂದ 26 ರವರೆಗೆ ಗಾಲೆಯಲ್ಲಿ ನಡೆಯಲಿರುವ 2 ಟೆಸ್ಟ್‌ ಪಂದ್ಯದಲ್ಲಿ ಆಡಲಿದೆ.

2019-20ನೇ ಸಾಲಿನ ಅವಧಿಯಲ್ಲಿ ಜಾಕ್ ಕಾಲೀಸ್ ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದರು. ಈ ವೇಳೆ ಜೋ ರೂಟ್ ನೇತೃತ್ವದ ಇಂಗ್ಲೆಂಡ್ ತಂಡದ ಎದುರು ದಕ್ಷಿಣ ಆಫ್ರಿಕಾ ತಂಡ 3-1 ಅಂತರದಲ್ಲಿ ಟೆಸ್ಟ್ ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. 

ಬಾಕ್ಸಿಂಗ್ ಡೇ ಟೆಸ್ಟ್: ಹನುಮ ವಿಹಾರಿ ಬದಲಿಗೆ ಈ ಆಲ್ರೌಂಡರ್‌ಗೆ ಸ್ಥಾನ..?

ಅಂತಾರಾಷ್ಟ್ರೀಯ ಟೆಸ್ಟ್  ಕ್ರಿಕೆಟ್‌ ಇತಿಹಾಸದಲ್ಲಿ ಸಚಿನ್ ತೆಂಡುಲ್ಕರ್ ಹಾಗೂ ರಿಕಿ ಪಾಂಟಿಂಗ್ ಬಳಿಕ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟ್ಸ್‌ಮನ್ ಎನ್ನುವ ಶ್ರೇಯ ಜಾಕ್ ಕಾಲೀಸ್ ಹೆಸರಿನಲ್ಲಿದೆ. ಒಟ್ಟು 166 ಟೆಸ್ಟ್ ಪಂದ್ಯಗಳನ್ನಾಡಿರುವ ಕಾಲೀಸ್ 55.37ರ ಸರಾಸರಿಯಲ್ಲಿ 13,289 ರನ್ ಬಾರಿಸಿದ್ದಾರೆ.