ಮೆಲ್ಬರ್ನ್(ಡಿ.22)‌: ಡಿಸೆಂಬರ್ 26 ರಿಂದ ಮೆಲ್ಬರ್ನ್‌ನಲ್ಲಿ ಆರಂಭವಾಗಲಿರುವ ಆಸ್ಪ್ರೇಲಿಯಾ ವಿರುದ್ಧದ ಬಾಕ್ಸಿಂಗ್‌ ಡೇ ಟೆಸ್ಟ್‌ಗೆ ಅಂತಿಮ 11ರಲ್ಲಿ ಹನುಮ ವಿಹಾರಿ ಬದಲು, ಆಲ್ರೌಂಡರ್‌ ರವೀಂದ್ರ ಜಡೇಜಾಗೆ ಸ್ಥಾನ ನೀಡಲು ಭಾರತ ತಂಡದ ಆಡಳಿತ ಒಲವು ತೋರಿದೆ. ಗಾಯಗೊಂಡಿರುವ ಜಡೇಜಾ ಫಿಟ್‌ ಆದರೆ, ಹನುಮ ಜಾಗದಲ್ಲಿ ತಂಡದಲ್ಲಿ ಆಡಲಿದ್ದಾರೆ ಎನ್ನಲಾಗಿದೆ. ಜಡೇಜಾ ಅವರ ಚೇತರಿಕೆಯನ್ನು ಆಡಳಿತ ಗಮನಿಸುತ್ತಿದೆ.

ಆಸ್ಪ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದ ವೇಳೆ ಜಡೇಜಾ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಗಾಯಗೊಂಡ ಕಾರಣದಿಂದ ಜಡೇಜಾ ಮೊದಲ ಟೆಸ್ಟ್‌ಗೆ ಅಲಭ್ಯರಾಗಿದ್ದರು. ಸದ್ಯ ಚೇತರಿಸಿಕೊಳ್ಳುತ್ತಿರುವ ಜಡೇಜಾ ನಿಧಾನಕ್ಕೆ ನೆಟ್ಸ್‌ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. 2ನೇ ಟೆಸ್ಟ್‌ ವೇಳೆಗೆ ಜಡೇಜಾ ಸಂಪೂರ್ಣ ಫಿಟ್‌ ಆಗಲಿದ್ದಾರೆ ಎನ್ನುವುದು ಖಚಿತವಾಗಿಲ್ಲ. ದೀರ್ಘವಾಧಿ ಸಮಯದವರೆಗೆ ಜಡೇಜಾ ಬೌಲಿಂಗ್‌ ಮಾಡುವಷ್ಟು ಸಮರ್ಥರಾಗಿದ್ದರೆ ಮಾತ್ರ ಆಡಿಸಲಾಗುವುದು ಎಂದು ಆಡಳಿತ ಹೇಳಿದೆ. ಮೊದಲ ಪಂದ್ಯದಲ್ಲಿ ಹನುಮ ನೀರಸ ಪ್ರದರ್ಶನ ತೋರಿದ್ದರು. ಹೀಗಾಗಿ ಹನುಮ ಬದಲಾಗಿ ಜಡೇಜಾರನ್ನು ಕಣಕ್ಕಿಳಿಸಬೇಕು ಎಂದು ಸಾಮಾಜಿಕ ತಾಣಗಳಲ್ಲಿ ಕೂಗು ಎದ್ದಿತ್ತು.

ಬಾಕ್ಸಿಂಗ್ ಡೇ ಟೆಸ್ಟ್‌ಗೂ ಮುನ್ನ ಹೆಚ್ಚಾಯ್ತು ಟೀಂ ಇಂಡಿಯಾಗೆ ತಲೆನೋವು..!

ಮಳೆಯಿಂದಾಗಿ ಅಭ್ಯಾಸ ರದ್ದು:

ಅಡಿಲೇಡ್‌ ಓವಲ್‌ನಲ್ಲಿರುವ ಭಾರತ ತಂಡದ ಸೋಮವಾರದ ನೆಟ್ಸ್‌ ಅಭ್ಯಾಸಕ್ಕೆ ಮಳೆ ಅಡ್ಡಿಪಡಿಸಿದೆ. ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ, ಮಂಗಳವಾರ ಭಾರತಕ್ಕೆ ಹಿಂದಿರುಗಲಿದ್ದಾರೆ. ಅದೇ ದಿನ ಭಾರತ ತಂಡ ಮೆಲ್ಬರ್ನ್‌ಗೆ ಪ್ರಯಾಣ ಬೆಳೆಸಲಿದೆ.

ಜ.3 ರಿಂದ ರೋಹಿತ್‌ ನೆಟ್ಸ್‌ ಅಭ್ಯಾಸ:

ಸಿಡ್ನಿಯಲ್ಲಿರುವ ಭಾರತ ತಂಡದ ಹಿರಿಯ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ, ಜ.3 ರಿಂದ ನೆಟ್ಸ್‌ ಅಭ್ಯಾಸ ಆರಂಭಿಸಲಿದ್ದಾರೆ. ಸದ್ಯ ರೋಹಿತ್‌, 2 ಕೋಣೆಯ ಅಪಾರ್ಟ್‌ಮೆಂಟ್‌ನಲ್ಲಿ ಕಠಿಣ ಕ್ವಾರಂಟೈನ್‌ನಲ್ಲಿ ಇದ್ದಾರೆ. ಕ್ವಾರಂಟೈನ್‌ ಅವಧಿ ಪೂರ್ಣಗೊಳ್ಳದ ಕಾರಣದಿಂದ ರೋಹಿತ್‌ರನ್ನು, ಭಾರತ ತಂಡ ಇರುವ ಕಡೆ ಕಳುಹಿಸಲಾಗಿಲ್ಲ. ಕ್ವಾರಂಟೈನ್‌ ಮುಕ್ತಾಯದ ಬಳಿಕ ರೋಹಿತ್‌ ತಂಡವನ್ನು ಕೂಡಿಕೊಳ್ಳಲಿದ್ದಾರೆ.