ಲಂಡನ್(ಜ.22): ಭಾರತ ವಿರುದ್ದ ಫೆಬ್ರವರಿ 05ರಿಂದ ಆರಂಭವಾಗಲಿರುವ 4 ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಟೆಸ್ಟ್ ಪಂದ್ಯಕ್ಕೆ 16 ಆಟಗಾರರನ್ನೊಳಗೊಂಡ ಬಲಿಷ್ಠ ಇಂಗ್ಲೆಂಡ್‌ ತಂಡ ಪ್ರಕಟಗೊಂಡಿದ್ದು, ಸ್ಟಾರ್ ಆಟಗಾರರಾದ ಬೆನ್‌ ಸ್ಟೋಕ್ಸ್‌ ಹಾಗೂ ಜೋಫ್ರಾ ಆರ್ಚರ್‌ ತಂಡ ಕೂಡಿಕೊಂಡಿದ್ದಾರೆ. 

ಸದ್ಯ ಇಂಗ್ಲೆಂಡ್‌ ತಂಡವು ಶ್ರೀಲಂಕಾ ವಿರುದ್ದ 2 ಪಂದ್ಯಗಳ ಟೆಸ್ಟ್ ಸರಣಿ ಆಡುತ್ತಿದೆ. ಈ ಸರಣಿಗೆ ಬೆನ್ ಸ್ಟೋಕ್ಸ್ ಹಾಗೂ ಜೋಫ್ರಾ ಆರ್ಚರ್‌ಗೆ ವಿಶ್ರಾಂತಿ ನೀಡಲಾಗಿತ್ತು. ಇನ್ನುಳಿದಂತೆ ಆರಂಭಿಕ ಬ್ಯಾಟ್ಸ್‌ಮನ್ ರೋರಿ ಬರ್ನ್ಸ್‌ ಸಹ ಇಂಗ್ಲೆಂಡ್ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಜಾನಿ ಬೇರ್‌ಸ್ಟೋವ್‌ ಇಂಗ್ಲೆಂಡ್‌ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ.

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಶಾಕ್‌; ಸ್ಟಾರ್ ಆಟಗಾರ ಔಟ್..!

ಜೋ ರೂಟ್‌ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದು, ಅನುಭವಿ ವೇಗಿಗಳಾದ ಸ್ಟುವರ್ಟ್ ಬ್ರಾಡ್ ಹಾಗೂ ಜೇಮ್ಸ್ ಆಂಡರ್‌ಸನ್ ಕೂಡಾ ತಂಡದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ. ಆಲ್ರೌಂಡರ್‌ಗಳಾದ ಮೋಯಿನ್ ಅಲಿ ಹಾಗೂ ಕ್ರಿಸ್ ವೋಕ್ಸ್‌ ಕೂಡಾ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮೊದಲೆರಡು ಟೆಸ್ಟ್ ಪಂದ್ಯಗಳನ್ನು ಚೆನ್ನೈನಲ್ಲಿ ಆಡಿದರೆ, ಮತ್ತೆರಡು ಟೆಸ್ಟ್ ಪಂದ್ಯಗಳನ್ನು ಅಹಮದಾಬಾದ್‌ನ ಮೊಟೆರಾ ಕ್ರೀಡಾಂಗಣದಲ್ಲಿ ಸೆಣಸಾಡಲಿವೆ.

ಇಂಗ್ಲೆಂಡ್ ತಂಡ ಹೀಗಿದೆ ನೋಡಿ:

ಜೋ ರೂಟ್‌(ನಾಯಕ), ಜೋಫ್ರಾ ಆರ್ಚರ್, ಮೋಯಿನ್ ಅಲಿ, ಜೇಮ್ಸ್ ಆಂಡರ್‌ಸನ್‌, ಡಾಮ್ ಬಿಸ್‌, ಸ್ಟುವರ್ಟ್ ಬ್ರಾಡ್‌, ರೋರಿ ಬರ್ನ್ಸ್, ಜೋಸ್ ಬಟ್ಲರ್, ಜಾಕ್‌ ಕ್ರಾವ್ಲಿ, ಬೆನ್ ಫೋಕ್ಸ್, ಡ್ಯಾನ್ ಲಾರೆನ್ಸ್,ಜಾಕ್ ಲೀಚ್‌, ಡಾಮ್ ಸಿಬ್ಲಿ, ಬೆನ್ ಸ್ಟೋಕ್ಸ್, ಓಲಿ ಸ್ಟೋನ್, ಕ್ರಿಸ್ ವೋಕ್ಸ್.