* ಟೀಂ ಇಂಡಿಯಾ ಎದುರಿನ ಟಿ20 ಸರಣಿಗೆ ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರಕಟ* ಭಾರತ ಎದುರಿನ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡಿದ್ದ ಇಂಗ್ಲೆಂಡ್ ಆಟಗಾರರಿಗೆ ಟಿ20 ತಂಡದಲ್ಲಿಲ್ಲ ಸ್ಥಾನ* ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿಯು ಜುಲೈ 07ರಿಂದ ಆರಂಭ

ಲಂಡನ್(ಜು.02)‌: ಭಾರತ ವಿರುದ್ಧ ಜು.7ರಿಂದ ಆರಂಭಗೊಳ್ಳಲಿರುವ 3 ಪಂದ್ಯಗಳ ಟಿ20 ಸರಣಿಗೆ ಇಂಗ್ಲೆಂಡ್‌ ತಂಡ ಪ್ರಕಟಗೊಂಡಿದ್ದು ಲಂಕಾಶೈರ್‌ನ 34 ವರ್ಷದ ವೇಗಿ ರಿಚರ್ಡ್‌ ಗ್ಲೀಸನ್‌ ಸ್ಥಾನ ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ಗ್ಲೀಸನ್‌ಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ದೊರೆತಿದೆ. ಭಾರತ ವಿರುದ್ಧ ಟೆಸ್ಟ್‌ನಲ್ಲಿ ಆಡುತ್ತಿರುವ ಯಾವುದೇ ಆಟಗಾರರಿಗೆ ಟಿ20 ತಂಡದಲ್ಲಿ ಸ್ಥಾನ ನೀಡಲಾಗಿಲ್ಲ. ಆದರೆ ಜುಲೈ 12ರಿಂದ ಆರಂಭಗೊಳ್ಳಲಿರುವ 3 ಪಂದ್ಯಗಳ ಏಕದಿನ ಸರಣಿಗೆ ಜಾನಿ ಬೇರ್‌ಸ್ಟೋವ್‌, ಜೋ ರೂಟ್‌, ಬೆನ್ ಸ್ಟೋಕ್ಸ್‌ ಆಯ್ಕೆಯಾಗಿದ್ದಾರೆ.

ಇಂಗ್ಲೆಂಡ್ ತಂಡದ ನಾಯಕರಾಗಿದ್ದ ಇಯಾನ್ ಮಾರ್ಗನ್ (Eoin Morgan) ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಹಿನ್ನೆಲೆಯಲ್ಲಿ ವಿಕೆಟ್ ಕೀಪರ್ ಬ್ಯಾಟರ್‌ ಜೋಸ್ ಬಟ್ಲರ್‌ಗೆ (Jos Buttler) ಇಂಗ್ಲೆಂಡ್ ಸೀಮಿತ ಓವರ್‌ಗಳ ತಂಡದ ನಾಯಕತ್ವ ಪಟ್ಟ ಕಟ್ಟಲಾಗಿದೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕೈಕ ಟೆಸ್ಟ್ ಪಂದ್ಯ ಮುಕ್ತಾಯದ ಬೆನ್ನಲ್ಲೇ ಉಭಯ ತಂಡಗಳು ಮೊದಲಿಗೆ ಮೂರು ಪಂದ್ಯಗಳ ಟಿ20 ಸರಣಿಯನ್ನಾಡಲಿವೆ. ಇನ್ನು ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಟಾರ್ ಸ್ಪಿನ್ನರ್ ಆದಿಲ್ ರಶೀದ್‌, ಹಜ್ ತೀರ್ಥಯಾತ್ರೆ ಕೈಗೊಳ್ಳುತ್ತಿರುವ ಹಿನ್ನಲೆಯಲ್ಲಿ ಅವರಿಗೆ ರಜೆ ನೀಡಲಾಗಿದೆ. ಇನ್ನುಳಿದಂತೆ ಇಂಗ್ಲೆಂಡ್ ತಂಡವು ಬಲಿಷ್ಠ ಆಟಗಾರರನ್ನೇ ಒಳಗೊಂಡಿದೆ. ಮುಂಬರುವ ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ದೃಷ್ಟಿಯಿಂದ ಈ ಸರಣಿಯು ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ.

ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಜುಲೈ 7ಕ್ಕೆ ಆರಂಭವಾಗಲಿದ್ದು, ಮೊದಲ ಪಂದ್ಯಕ್ಕೆ ಸೌಥಾಂಪ್ಟನ್‌ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಬಳಿಕ ಜುಲೈ 9, 10ಕ್ಕೆ ಉಳಿದೆರಡು ಪಂದ್ಯಗಳು ಕ್ರಮವಾಗಿ ಬಮಿಂಗ್‌ಹ್ಯಾಮ್‌ ಹಾಗೂ ನಾಟಿಂಗ್‌ಹ್ಯಾಮ್‌ನಲ್ಲಿ ನಿಗದಿಯಾಗಿವೆ. ಏಕದಿನ ಪಂದ್ಯಗಳು ಜುಲೈ 12, 14 ಮತ್ತು 17ಕ್ಕೆ ಕ್ರಮವಾಗಿ ಓವಲ್‌, ಲಾರ್ಡ್ಸ್ ಹಾಗೂ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿವೆ.

ಇಂಗ್ಲೆಂಡ್ ಎದುರಿನ ಸೀಮಿತ ಓವರ್‌ಗಳ ಸರಣಿಗೆ ಸ್ಥಾನ ಪಡೆದ ಆರ್ಶದೀಪ್ ಸಿಂಗ್..!

Scroll to load tweet…

ಭಾರತ ಎದುರಿನ ಟಿ20 ಸರಣಿಗೆ ಇಂಗ್ಲೆಂಡ್ ತಂಡ ಹೀಗಿದೆ ನೋಡಿ

ಜೋಸ್ ಬಟ್ಲರ್(ನಾಯಕ), ಮೋಯಿನ್ ಅಲಿ, ಹ್ಯಾರಿ ಬ್ರೂಕ್, ಸ್ಯಾಮ್ ಕರ್ರನ್, ರಿಚರ್ಡ್ ಗ್ಲೀಸನ್, ಕ್ರಿಸ್ ಜೋರ್ಡನ್‌, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲಾನ್, ಟೈಮಲ್ ಮಿಲ್ಸ್‌, ಮ್ಯಾಥ್ಯೂ ಪಾರ್ಕಿನ್‌ಸನ್, ಜೇಸನ್ ರಾಯ್, ಫಿಲ್ ಸಾಲ್ಟ್‌, ರೀಸೆ ಟೋಪ್ಲೆ, ಡೇವಿಡ್ ಮಲಾನ್.

ಭಾರತ ಎದುರಿನ ಏಕದಿನ ಸರಣಿಗೆ ಇಂಗ್ಲೆಂಡ್ ಕ್ರಿಕೆಟ್ ತಂಡ ಹೀಗಿದೆ ನೋಡಿ

ಜೋಸ್ ಬಟ್ಲರ್(ನಾಯಕ), ಮೋಯಿನ್ ಅಲಿ, ಜಾನಿ ಬೇರ್‌ಸ್ಟೋವ್, ಹ್ಯಾರಿ ಬ್ರೂಕ್, ಬ್ರೈಡನ್ ಕೇರ್ಸ್‌, ಸ್ಯಾಮ್ ಕರ್ರನ್, ಲಿಯಾಮ್ ಲಿವಿಂಗ್‌ಸ್ಟೋನ್, ಕ್ರೆಗ್ ಓವರ್‌ಟನ್, ಮ್ಯಾಥ್ಯೂ ಪಾರ್ಕಿನ್‌ಸನ್, ಜೋ ರೂಟ್, ಜೇಸನ್ ರಾಯ್, ಫಿಲ್ ಸಾಲ್ಟ್, ಬೆನ್ ಸ್ಟೋಕ್ಸ್‌, ರೀಸೆ ಟೋಪ್ಲೆ, ಡೇವಿಡ್ ವಿಲ್ಲೆ.