* ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗೆ 15 ಆಟಗಾರರನ್ನೊಳಗೊಂಡ ಇಂಗ್ಲೆಂಡ್ ತಂಡ ಪ್ರಕಟ* ಇಯಾನ್‌ ಮಾರ್ಗನ್‌ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ* ಸ್ಟೋಕ್ಸ್‌, ಆರ್ಚರ್‌, ರೂಟ್‌ಗಿಲ್ಲ ತಂಡದಲ್ಲಿ ಸ್ಥಾನ

ಲಂಡನ್‌(ಸೆ.09): ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ 15 ಆಟಗಾರರನ್ನೊಳಗೊಂಡ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟಗೊಂಡಿದ್ದು, ಸ್ಟಾರ್ ಆಲ್ರೌಂಡರ್‌ ಬೆನ್ ಸ್ಟೋಕ್ಸ್‌ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಬೆನ್‌ ಸ್ಟೋಕ್ಸ್‌ ಅನಿರ್ದಿಷ್ಟಾವಧಿಗೆ ವಿಶ್ರಾಂತಿ ಬಯಸಿರುವುದಾಗಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್‌ ತಿಳಿಸಿದೆ.

ಇನ್ನು ಇಂಗ್ಲೆಂಡ್ ತಂಡದ ಮಾರಕ ವೇಗಿ ಜೋಫ್ರಾ ಆರ್ಚರ್‌ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಆರ್ಚರ್‌ ಕೂಡಾ ಇಂಗ್ಲೆಂಡ್ ಟಿ20 ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಇಯಾನ್‌ ಮಾರ್ಗನ್‌ ತಂಡವನ್ನು ಮುನ್ನಡೆಸಲಿದ್ದಾರೆ. ಅಚ್ಚರಿಯ ಆಯ್ಕೆ ಎನ್ನುವಂತೆ ವೇಗಿ ಟೈಮಲ್‌ ಮಿಲ್ಸ್‌ ಅವರಿಗೆ ತಂಡದಲ್ಲಿ ಕಲ್ಪಿಸಲಾಗಿದೆ. 2017ರ ಫೆಬ್ರವರಿ ಬಳಿಕ ಇದೇ ಮೊದಲ ಬಾರಿಗೆ ಇಂಗ್ಲೆಂಡ್‌ ಟಿ20 ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಮಿಲ್ಸ್‌ ಇತ್ತೀಚೆಗಷ್ಟೇ ನಡೆದ ವೆಟಾಲಿಟಿ ಟಿ20 ಬ್ಲಾಸ್ಟ್‌ ಹಾಗೂ ದಿ ಹಂಡ್ರೆಡ್ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದರು.

Scroll to load tweet…

ಟಿ20 ವಿಶ್ವಕಪ್‌ಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟ; ಎಂ.ಎಸ್. ಧೋನಿ ಮೆಂಟರ್!

ಇನ್ನು ಇಂಗ್ಲೆಂಡ್‌ ಟೆಸ್ಟ್‌ ತಂಡದ ನಾಯಕ ಜೋ ರೂಟ್‌ ಕೂಡಾ ಟಿ20 ತಂಡದಲ್ಲಿ ಸ್ಥಾನ ಗಿಟ್ಟಿಸಲು ವಿಫಲರಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಜೋ ರೂಟ್‌ ಸೀಮಿತ ಓವರ್‌ಗಳ ತಂಡದಲ್ಲಿ ಸ್ಥಾನ ಪಡೆಯುವ ಇಂಗಿತ ವ್ಯಕ್ತಪಡಿಸಿದ್ದರು. ಇನ್ನುಳಿದಂತೆ ಬೇರ್‌ಸ್ಟೋವ್, ಬಟ್ಲರ್, ಮೋಯಿನ್ ಅಲಿ, ಸ್ಯಾಮ್‌ ಕರ್ರನ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಟಾಮ್‌ ಕರ್ರನ್, ಜೇಮ್ಸ್‌ ವಿನ್ಸಿ ಹಾಗೂ ಲಿಯಾಮ್ ಡಾಸನ್ ಮೀಸಲು ಆಟಗಾರರಾಗಿ ಸ್ಥಾನ ಪಡೆದಿದ್ದಾರೆ.

Scroll to load tweet…

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 17ರಿಂದ ಆರಂಭವಾಗಲಿದೆ. ಆರಂಭದಲ್ಲಿ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ. ಇನ್ನು ಇಂಗ್ಲೆಂಡ್ ತಂಡವು ತನ್ನ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಅಕ್ಟೋಬರ್ 23ರಂದು ನಡೆಯಲಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ದುಬೈನ ಅಂತರರಾಷ್ಟ್ರೀಯ ಮೈದಾನ ಆತಿಥ್ಯವನ್ನು ವಹಿಸಲಿದೆ.

ಇಂಗ್ಲೆಂಡ್ ಕ್ರಿಕೆಟ್ ತಂಡ ಹೀಗಿದೆ ನೋಡಿ:

ಇಯಾನ್‌ ಮಾರ್ಗನ್‌(ನಾಯಕ), ಮೋಯಿನ್ ಅಲಿ, ಜಾನಿ ಬೇರ್‌ಸ್ಟೋವ್‌, ಸ್ಯಾಮ್‌ ಬಿಲ್ಲಿಂಗ್ಸ್‌, ಜೋಸ್ ಬಟ್ಲರ್, ಸ್ಯಾಮ್ ಕರ್ರನ್, ಕ್ರಿಸ್ ಜೋರ್ಡನ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌, ಡೇವಿಡ್ ಮಲಾನ್‌, ಟೈಮಲ್ ಮಿಲ್ಸ್, ಆದಿಲ್ ರಶೀದ್, ಜೇಸನ್ ರಾಯ್, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್‌, ಮಾರ್ಕ್‌ ವುಡ್‌

ಮೀಸಲು ಆಟಗಾರರು: ಟಾಮ್‌ ಕರ್ರನ್, ಜೇಮ್ಸ್‌ ವಿನ್ಸಿ, ಲಿಯಾಮ್ ಡಾಸನ್