ನಿರ್ಣಾಯಕ ಘಟ್ಟದತ್ತ ಐಸಿಸಿ ಟಿ20 ವಿಶ್ವಕಪ್ ಟೂರ್ನಿಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತಕ್ಕೆ ಇಂಗ್ಲೆಂಡ್ ಸವಾಲುಇಂಡೋ-ಪಾಕ್ ಫೈನಲ್ ಪಂದ್ಯದ ಬಗ್ಗೆ ಖಡಕ್ ಉತ್ತರ ನೀಡಿದ ಬೆನ್ ಸ್ಟೋಕ್ಸ್

ಅಡಿಲೇಡ್‌(ನ.09): ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ತಂಡಗಳು ಸೆಣಸಾಟ ನಡೆಸಿವೆ. ಈಗಾಗಲೇ ಹಲವು ಕ್ರಿಕೆಟ್ ಪಂಡಿತರು, ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಭಾರತ ಫೈನಲ್ ಪ್ರವೇಶಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇನ್ನೊಂದೆಡೆ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕಾದಾಡುತ್ತಿದ್ದು, ಫೈನಲ್‌ ಪ್ರವೇಶಿಸಲು ಎದುರು ನೋಡುತ್ತಿವೆ.

ಇನ್ನು ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಎರಡನೇ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ಕ್ರಿಕೆಟಿಗ ಬೆನ್ ಸ್ಟೋಕ್ಸ್ ಬಳಿ ಪತ್ರಕರ್ತರು ಫೈನಲ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುವ ಸಾಧ್ಯತೆಗಳ ಬಗ್ಗೆ ಪ್ರಶ್ನಿಸಿದ್ದಾರೆ. ಆಗ, ನಿಮ್ಮ ಪ್ರಕಾರ ಭಾರತ ಹಾಗೂ ಪಾಕಿಸ್ತಾನ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾದರೇ ಒಳ್ಳೆಯದ್ದೇ. ಆದರೆ ನನಗದು ಗೊತ್ತಿಲ್ಲ. ನಾವು ಸದ್ಯ ಗುರುವಾರ ನಡೆಯಲಿರುವ ಪಂದ್ಯದಲ್ಲಿ ಗೆಲುವು ಸಾಧಿಸಲು ಎದುರು ನೋಡಿದ್ದೇವೆ ಎಂದು ಬೆನ್ ಸ್ಟೋಕ್ಸ್ ಹೇಳಿದ್ದಾರೆ.

ಇನ್ನು ಇದೇ ವೇಳೆ ವಿರಾಟ್ ಕೊಹ್ಲಿಯ ಕಮ್‌ಬ್ಯಾಕ್ ಕುರಿತಂತೆಯೂ ಮಾತನಾಡಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಸಾಮರ್ಥ್ಯವೇನು ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಅವರು ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ಉತ್ತಮ ಪ್ರದರ್ಶನ ತೋರಿದ್ದಾರೆ ಎಂದು ಇಂಗ್ಲೆಂಡ್ ಆಲ್ರೌಂಡರ್ ಸ್ಟೋಕ್ಸ್ ಹೇಳಿದ್ದಾರೆ.

ಇನ್ನು ಸೂಪರ್ 12 ಹಂತದ ಕೊನೆಯ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಜಿಂಬಾಬ್ವೆ ಎದುರು 71 ರನ್‌ಗಳ ಗೆಲುವು ದಾಖಲಿಸುವ ಮೂಲಕ ಭರ್ಜರಿಯಾಗಿಯೇ ಸೆಮೀಸ್‌ ಪ್ರವೇಶಿಸಿದೆ. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ಕೆ ಎಲ್ ರಾಹುಲ್ ಹಾಗೂ ಸೂರ್ಯಕುಮಾರ್ ಯಾದವ್ ಬಾರಿಸಿದ ಸ್ಪೋಟಕ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 186 ರನ್ ಕಲೆಹಾಕಿತ್ತು. ಇನ್ನು ಈ ಗುರಿ ಬೆನ್ನತ್ತಿದ ಜಿಂಬಾಬ್ವೆ ತಂಡವು 17.2 ಓವರ್‌ಗಳಲ್ಲಿ ಕೇವಲ 115 ರನ್‌ ಬಾರಿಸಿ ಸರ್ವಪತನ ಕಂಡಿತು.

ಇನ್ನು ಇದೀಗ ಟೀಂ ಇಂಡಿಯಾ, ನವೆಂಬರ್ 10ರಂದು ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ದ ಕಾದಾಡಲಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ಅಡಿಲೇಡ್ ಓವಲ್ ಮೈದಾನ ಆತಿಥ್ಯವನ್ನು ವಹಿಸಿದೆ.