ದಕ್ಷಿಣ ಆಫ್ರಿಕಾ ತಂಡವನ್ನು ಕೊರೋನಾ ಹೆಮ್ಮಾರಿ ಬಿಟ್ಟೂ ಬಿಡದಂತೆ ಕಾಡಲಾರಂಭಿಸಿದೆ. ಇದೀಗ ಮತ್ತೊಬ್ಬ ಕ್ರಿಕೆಟಿಗ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಕೇಪ್‌ಟೌನ್(ನ.21): ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ನಡುವಿನ ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿಗೆ ಕೊರೋನಾ ಹೆಮ್ಮಾರಿ ತನ್ನ ವಕ್ರದೃಷ್ಠಿ ಬೀರಿದೆ. ನವೆಂಬರ್ 27ರಿಂದ ಆರಂಭವಾಗಲಿರುವ ಸರಣಿಗೆ ದಕ್ಷಿಣ ಆಫ್ರಿಕಾ ತಂಡದ 24 ಸದಸ್ಯರ ಪೈಕಿ ಶುಕ್ರವಾರ(ನ.20)ದಂದು ಮತ್ತೊಬ್ಬ ಆಟಗಾರನಿಗೆ ಕೊರೋನಾ ಸೋಂಕಿರುವುದು ದೃಢಪಟ್ಟಿದೆ.

ಕೊರೋನಾ ಸೋಂಕಿಗೆ ತುತ್ತಾದ ಆಟಗಾರನ ಹೆಸರನ್ನು ಆಫ್ರಿಕಾ ಕ್ರಿಕೆಟ್ ಮಂಡಳಿ ಬಹಿರಂಗ ಪಡಸಿಲ್ಲ. ಆದರೆ ಆತನನ್ನು ಐಸೋಲೇಷನ್‌(ಪ್ರತ್ಯೇಕವಾಗಿಡಲಾಗಿದೆ)ಗೆ ಒಳಪಡಿಸಲಾಗಿದೆ. ಮತ್ತೊಬ್ಬ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಕೊರೋನಾ ಸೋಂಕಿಗೆ ತುತ್ತಾದ ಬೆನ್ನಲ್ಲೇ ನವೆಂಬರ್ 21ರಂದು ಆಫ್ರಿಕಾ ಅಂತರ ತಂಡದ ನಡುವಿನ ಅಭ್ಯಾಸ ಪಂದ್ಯವನ್ನು ರದ್ದು ಮಾಡಲಾಗಿದೆ.

ದಕ್ಷಿಣ ಆಫ್ರಿಕಾ ಕ್ರಿಕೆಟಿಗನಿಗೆ ವಕ್ಕರಿಸಿದ ಕೊರೋನಾ ಸೋಂಕು; ಮೂವರು ಈಗ ಐಸೋಲೇಷನ್..!

ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯು ಇಂಗ್ಲೆಂಡ್ ಕ್ರಿಕೆಟ್‌ ಬೋರ್ಡ್ ಜತೆ ನಿಕಟ ಸಂಪರ್ಕದಲ್ಲಿದ್ದು, ಕೊರೋನಾ ವಿಚಾರದಲ್ಲಿ ಸಂಪೂರ್ಣ ಪಾರದರ್ಶಕತೆ ಹೊಂದಿರುವುದಾಗಿ ಭರವಸೆ ನೀಡಿದೆ.

ಈ ಮೊದಲು ಕಳೆದೆರಡು ದಿನಗಳ ಹಿಂದಷ್ಟೇ ದಕ್ಷಿಣ ಆಫ್ರಿಕಾ ಕ್ರಿಕೆಟಿಗನಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಬಳಿಕ ಆ ಆಟಗಾರ ಸೇರಿದಂತೆ ಆತನೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಮತ್ತಿಬ್ಬರು ಆಟಗಾರರನ್ನು ಆಫ್ರಿಕಾ ಕ್ರಿಕೆಟ್‌ ಮಂಡಳಿ ಐಸೋಲೇಷನ್‌ಗೆ ಒಳಪಡಿಸಿತ್ತು.