Asianet Suvarna News Asianet Suvarna News

ಅಂಡರ್‌ 23 ಏಷ್ಯಾಕಪ್‌: ಸೆಮೀಸಲ್ಲಿ ಭಾರತಕ್ಕೆ ಶರಣಾದ ಬಾಂಗ್ಲಾ, ಪ್ರಶಸ್ತಿಗಾಗಿ ಇಂಡೋ-ಪಾಕ್ ಫೈಟ್

ಅಂಡರ್‌-23 ಉದಯೋನ್ಮುಖ ಆಟಗಾರರ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ಫೈನಲ್ ಪ್ರವೇಶ
ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ಎದುರು ಭರ್ಜರಿ ಜಯ ಕಂಡ ಯಶ್ ಧುಳ್ ಪಡೆ
ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ ಭಾರತ ಅಂಡರ್ 23 ತಂಡ

Emerging Asia Cup Yash Dhull Nishant Sindhu Star As India Beat Bangladesh Set Final Date vs Pakistan kvn
Author
First Published Jul 22, 2023, 10:34 AM IST

ಕೊಲಂಬೊ(ಜು.22): ಅಂಡರ್‌-23 ಉದಯೋನ್ಮುಖ ಆಟಗಾರರ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಈ ಬಾರಿ ಮಾಜಿ ಚಾಂಪಿಯನ್‌ಗಳಾದ ಭಾರತ ‘ಎ’ ಹಾಗೂ ಪಾಕಿಸ್ತಾನ ‘ಎ’ ತಂಡಗಳು ಫೈನಲ್‌ನಲ್ಲಿ ಸೆಣಸಾಡಲಿವೆ. ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 51 ರನ್‌ ಗೆಲುವು ಸಾಧಿಸಿತು. ಬ್ಯಾಟಿಂಗ್‌ನಲ್ಲಿ ಸಾಧಾರಣ ಪ್ರದರ್ಶನ ನೀಡಿದರೂ, ಬೌಲಿಂಗ್‌ನಲ್ಲಿ ತೋರಿದ ಅಭೂತಪೂರ್ವ ಪ್ರದರ್ಶನ ತಂಡವನ್ನು ಫೈನಲ್‌ಗೇರಿಸಿತು.

ಮೊದಲು ಬ್ಯಾಟ್‌ ಮಾಡಿದ ಭಾರತ, ನಾಯಕ್‌ ಯಶ್‌ ಧುಳ್‌(66) ಏಕಾಂಗಿ ಹೋರಾಟದ ನೆರವಿನಿಂದ 49.1 ಓವರ್‌ಗಳಲ್ಲಿ 211 ರನ್‌ಗೆ ಆಲೌಟಾಯಿತು. ಅಭಿಷೇಕ್‌ ಶರ್ಮಾ 34, ಸಾಯಿ ಸುದರ್ಶನ್‌ 21, ಮಾನವ್‌ ಸುತಾರ್‌ 21 ರನ್‌ ಕೊಡುಗೆ ನೀಡಿದರು. ಸುಲಭ ಗುರಿ ಬೆನ್ನತ್ತಿದ ಬಾಂಗ್ಲಾ ಸ್ಫೋಟಕ ಆರಂಭ ಪಡೆಯಿತು. ವಿಕೆಟ್‌ ನಷ್ಟವಿಲ್ಲದೇ 70 ರನ್‌ ಗಳಿಸಿದ್ದ ತಂಡ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ ಬಳಿಕ ನಾಟಕೀಯ ಕುಸಿತ ಕಂಡ ತಂಡ 34.2 ಓವರ್‌ಗಳಲ್ಲಿ 160 ರನ್‌ಗೆ ಸರ್ವಪತನ ಕಂಡಿತು. ಆರಂಭಿಕರಾದ ತಂಜೀದ್‌ ಹಸನ್‌(51), ಮೊಹಮದ್‌ ನೈಮ್‌(38) ಹೊರತುಪಡಿಸಿ ಇತರರು ಮಿಂಚಲಿಲ್ಲ. ನಿಶಾಂತ್‌ ಸಿಂಧು 5 ವಿಕೆಟ್‌ ಕಿತ್ತರು. ಮತ್ತೊಂದು ಸೆಮೀಸ್‌ನಲ್ಲಿ ಶ್ರೀಲಂಕಾ ‘ಎ’ ವಿರುದ್ಧ ಪಾಕ್‌ 60 ರನ್‌ ಜಯಗಳಿಸಿತು.

ನಾಳೆ ಫೈನಲ್‌

ಟೂರ್ನಿಯ ಫೈನಲ್‌ ಪಂದ್ಯ ಭಾನುವಾರ ನಡೆಯಲಿದ್ದು, ಭಾರತ ಹಾಗೂ ಪಾಕಿಸ್ತಾನ ಪ್ರಶಸ್ತಿಗಾಗಿ ಸೆಣಸಾಡಲಿವೆ. ಭಾರತ 2013ರ ಚೊಚ್ಚಲ ಆವೃತ್ತಿಯಲ್ಲಿ ಚಾಂಪಿಯನ್‌ ಆಗಿದ್ದು, ಪಾಕ್‌ ಕಳೆದ ಬಾರಿ ಪ್ರಶಸ್ತಿ ಗೆದ್ದಿತ್ತು. ಎರಡೂ ತಂಡಗಳು 2ನೇ ಬಾರಿ ಪ್ರಶಸ್ತಿ ಗೆಲ್ಲುವ ತವಕದಲ್ಲಿವೆ.

ಏಷ್ಯಾಕಪ್‌ ವೇಳಾಪಟ್ಟಿ ಪ್ರಕಟಕ್ಕೆ ಪಿಸಿಬಿ ಬೇಸರ..!

ಕರಾಚಿ: ಏಷ್ಯಾಕಪ್ ವಿಚಾರದಲ್ಲಿ ಹಲವು ಗೊಂದಲಗಳನ್ನು ಸೃಷ್ಟಿಸಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಇದೀಗ ಟೂರ್ನಿಯ  ವೇಳಾಪಟ್ಟಿ ಪ್ರಕಟಣೆಯಾಗಿದ್ದರ ಬಗ್ಗೆಯೂ ತನ್ನ ಬೇಸರ ಹೊರಹಾಕಿದೆ. ಬುಧವಾರ ಟೂರ್ನಿಯ ವೇಳಾಪಟ್ಟಿಯನ್ನು ಲಾಹೋರ್‌ನಲ್ಲಿ ಆಯೋಜಿಸಿದ್ದ ಅಧಿಕೃತ ಕಾರ್ಯಕ್ರಮದಲ್ಲಿ ಪ್ರಕಟಿಸಲು ಪಿಸಿಬಿ ನಿರ್ಧರಿಸಿತ್ತು.

Ind vs WI ಕಿಂಗ್ ಕೊಹ್ಲಿ ಶತಕ; ವಿಂಡೀಸ್‌ ಬೌಲರ್‌ಗಳ ಚಳಿ ಬಿಡಿಸಿದ ಭಾರತ

ಆದರೆ ಈ ಕಾರ್ಯಕ್ರಮಕ್ಕೂ ಅರ್ಧಗಂಟೆ ಮುಂಚೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ) ಮುಖ್ಯಸ್ಥ ಜಯ್‌ ಶಾ, ಏಷ್ಯಾಕಪ್ ಕಪ್ ಟೂರ್ನಿಯ ವೇಳಾಪಟ್ಟಿಯನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದರು. ಇದರಿಂದಾಗಿ ತನ್ನ ಕಾರ್ಯಕ್ರಮದ ಮೌಲ್ಯ ಕಳೆದುಕೊಂಡಿತು ಎಂದು ಪಿಸಿಬಿ ದೂರಿದ್ದಾಗಿ ವರದಿಯಾಗಿದೆ.

ಇಂದು ಭಾರತ-ಬಾಂಗ್ಲಾ 3ನೇ ಮಹಿಳಾ ಏಕದಿನ

ಮೀರ್‌ಪುರ: ಬಾಂಗ್ಲಾದೇಶ ಮಹಿಳಾ ತಂಡದ ವಿರುದ್ಧ ಏಕದಿನ ಸರಣಿ ಗೆಲುವಿನ ನಿರೀಕ್ಷೆಯಲ್ಲಿರುವ ಭಾರತ, ಶನಿವಾರ 3ನೇ ಹಾಗೂ ಕೊನೆ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಆತಿಥೇಯರ ವಿರುದ್ಧದ ಟಿ20 ಸರಣಿಯನ್ನು 2-1ರಿಂದ ಗೆದ್ದಿದ್ದ ಭಾರತ, ಮೊದಲ ಏಕದಿನ ಪಂದ್ಯದಲ್ಲಿ ಸೋಲನುಭವಿಸಿತ್ತು. ಬಳಿಕ 2ನೇ ಪಂದ್ಯದಲ್ಲಿ ಗೆದ್ದು ಸರಣಿ ಸಮಬಲಗೊಳಿಸಿತ್ತು. ಕೆಲ ವೈಯಕ್ತಿಕ ಪ್ರದರ್ಶನದ ಹೊರತಾಗಿ ಭಾರತ ತಂಡ ಬಾಂಗ್ಲಾ ಪ್ರವಾಸದುದ್ದಕ್ಕೂ ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. ಹೀಗಾಗಿ ತಂಡದ ಬ್ಯಾಟಿಂಗ್‌ ವಿಭಾಗದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ.

Follow Us:
Download App:
  • android
  • ios