Asianet Suvarna News Asianet Suvarna News

Duleep Trophy: ಪಶ್ಚಿಮ ವಲಯ ಬಗ್ಗುಬಡಿದ ದಕ್ಷಿಣ ವಲಯ ಚಾಂಪಿಯನ್‌..! ಕಳೆದ ಸೋಲಿನ ಲೆಕ್ಕಾಚುಕ್ತಾ..!

ದುಲೀಪ್ ಟ್ರೋಫಿ ಟೂರ್ನಿಯಲ್ಲಿ ದಕ್ಷಿಣ ವಲಯ ಚಾಂಪಿಯನ್‌
ಪಶ್ಚಿಮ ವಲಯ ಎದುರು ಫೈನಲ್‌ನಲ್ಲಿ 75 ರನ್ ಜಯಭೇರಿ
14ನೇ ಬಾರಿಗೆ ದುಲೀಪ್ ಟ್ರೋಫಿ ಗೆದ್ದ ದಕ್ಷಿಣ ವಲಯ

Duleep Trophy Final South Zone Thrash West Zone by 75 runs and clinch title kvn
Author
First Published Jul 16, 2023, 12:42 PM IST

ಬೆಂಗಳೂರು(ಜು.16): 2023ನೇ ಸಾಲಿನ ದುಲೀಪ್ ಟ್ರೋಫಿ ಫೈನಲ್‌ ಪಂದ್ಯದಲ್ಲಿ ಹನುಮ ವಿಹಾರಿ ನೇತೃತ್ವದ ದಕ್ಷಿಣ ವಲಯ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಬಲಾಢ್ಯ ಆಟಗಾರರನ್ನೊಳಗೊಂಡ ಪಶ್ಚಿಮ ವಲಯವನ್ನು 75 ರನ್‌ಗಳಿಂದ ಮಣಿಸುವ ಮೂಲಕ ಚಾಂಪಿಯನ್‌ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಕಳೆದ ಬಾರಿ ಫೈನಲ್‌ನಲ್ಲಿ ಪಶ್ಚಿಮ ವಲಯ ವಿರುದ್ದ ಅನುಭವಿಸಿದ್ದ ಸೋಲಿನ ಲೆಕ್ಕಾಚಾರ ಚುಕ್ತಾ ಮಾಡುವಲ್ಲಿ ದಕ್ಷಿಣ ವಲಯ ಯಶಸ್ವಿಯಾಗಿದೆ. 24ನೇ ಬಾರಿಗೆ ದುಲೀಪ್ ಟ್ರೋಫಿ ಫೈನಲ್ ಪಂದ್ಯವನ್ನಾಡಿದ ದಕ್ಷಿಣ ವಲಯ ತಂಡವು 14ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ.

ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದ ದುಲೀಪ್‌ ಟ್ರೋಫಿ ಫೈನಲ್‌ ಪಂದ್ಯದಲ್ಲಿ ಪಶ್ಚಿಮ ವಲಯಕ್ಕೆ ಗೆಲ್ಲಲು ದಕ್ಷಿಣ ವಲಯ ತಂಡವು 298 ರನ್‌ಗಳ ಕಠಿಣ ಗುರಿ ನೀಡಿತ್ತು. ಇನ್ನು ಕಠಿಣ ಗುರಿ ಬೆನ್ನತ್ತಿದ್ದ ಪಶ್ಚಿಮ ವಲಯ ತಂಡವು 15 ರನ್‌ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಎರಡು ವಿಕೆಟ್ ಕಳೆದುಕೊಂಡಿತ್ತು. ಇನ್ನು ಅನುಭವಿ ಬ್ಯಾಟರ್ ಚೇತೇಶ್ವರ್ ಪೂಜಾರ(15) ಹಾಗೂ ಸೂರ್ಯಕುಮಾರ್ ಯಾದವ್(04) ಮತ್ತೊಮ್ಮೆ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಪರಿಣಾಮ ಪಶ್ಚಿಮ ವಲಯ ಒಂದು ಹಂತದಲ್ಲಿ 79 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

Duleep Trophy Final: ಕ್ಲೈಮ್ಯಾಕ್ಸ್‌ ಹಂತ ತಲುಪಿದ ದುಲೀಪ್ ಟ್ರೋಫಿ ಫೈನಲ್‌..!

ಈ ವೇಳೆ 5ನೇ ವಿಕೆಟ್‌ಗೆ ಜತೆಯಾದ ನಾಯಕ ಪ್ರಿಯಾಂಕ್ ಪಾಂಚಾಲ್ ಹಾಗೂ ಸರ್ಫರಾಜ್ ಖಾನ್ 98 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸರ್ಫರಾಜ್ ಖಾನ್(48) ಅವರನ್ನು ಕ್ಲೀನ್‌ ಬೌಲ್ಡ್‌ ಮಾಡುವ ಮೂಲಕ ಸಾಯಿ ಕಿಶೋರ್, ದಕ್ಷಿಣ ವಲಯ ಪಂದ್ಯದಲ್ಲಿ ಕಮ್‌ಬ್ಯಾಕ್‌ ಮಾಡುವಂತೆ ಮಾಡಿದರು. ನಾಲ್ಕನೇ ದಿನದಾಟದಂತ್ಯಕ್ಕೆ ಪಶ್ಚಿಮ ವಲಯ ತಂಡವು 5 ವಿಕೆಟ್ ಕಳೆದುಕೊಂಡು 182 ರನ್‌ ಗಳಿಸಿತ್ತು. ಇನ್ನು ಕೊನೆಯ ದಿನ ಗೆಲ್ಲಲು ಕೇವಲ 116 ರನ್‌ ಅಗತ್ಯವಿತ್ತು.

ಮೋಡಿ ಮಾಡಿದ ಸಾಯಿ ಕಿಶೋರ್: ಕೊನೆಯ ದಿನ ಗೆಲ್ಲಲು ಕೇವಲ 116 ರನ್ ಅಗತ್ಯವಿದ್ದಿದ್ದರಿಂದ ಪಶ್ಚಿಮ ವಲಯ ತಂಡವು ಆತ್ಮವಿಶ್ವಾಸದಿಂದಲೇ ಕಣಕ್ಕಿಳಿಯಿತು. ಆದರೆ ತಮಿಳುನಾಡು ಮೂಲದ ಸ್ಪಿನ್ನರ್, ಕೊನೆಯ ಮೂರು ವಿಕೆಟ್ ಕಬಳಿಸುವ ಮೂಲಕ ದಕ್ಷಿಣ ವಲಯದ ಗೆಲುವನ್ನು ಸುಲಭಗೊಳಿಸಿದರು. ಇನ್ನು ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ನೆಲಕಚ್ಚಿ ಆಡುವ ಪ್ರಯತ್ನ ನಡೆಸಿದ ನಾಯಕ ಪ್ರಿಯಾಂಕ್ ಪಾಂಚಾಲ್‌ ಕೇವಲ 5 ರನ್ ಅಂತರದಲ್ಲಿ ಶತಕ ವಂಚಿತರಾದರು. ಪ್ರಿಯಾಂಕ್ ಪಾಂಚಾಲ್‌, 211 ಎಸೆತಗಳನ್ನು ಎದುರಿಸಿ 11 ಬೌಂಡರಿ ಸಹಿತ 95 ರನ್‌ ಬಾರಿಸಿ ವಿದ್ವತ್ ಕಾವೇರಪ್ಪಗೆ ವಿಕೆಟ್ ಒಪ್ಪಿಸಿದರು.

ಪಂದ್ಯಶ್ರೇಷ್ಠ, ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ವಿದ್ವತ್ ಕಾವೇರಪ್ಪ: ಫೈನಲ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ 7 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ ಒಂದು ವಿಕೆಟ್ ಕಬಳಿಸಿದ ಕನ್ನಡದ ವೇಗಿ ವಿದ್ವತ್ ಕಾವೇರಪ್ಪ ಪಂದ್ಯಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. 

ಹೇಗಿತ್ತು ದುಲೀಪ್ ಟ್ರೋಫಿ ಫೈನಲ್‌ ಪಂದ್ಯ?

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ದಕ್ಷಿಣ ವಲಯ ತಂಡವು ನಾಯಕ ಹನುಮ ವಿಹಾರಿ ಬಾರಿಸಿದ ಸಮಯೋಚಿತ ಅರ್ಧಶತಕದ ನೆರವಿನಿಂದ 213 ರನ್ ಬಾರಿಸಿ ಸರ್ವಪತನ ಕಂಡಿತು. ಇನ್ನು ಮೊದಲ ಇನಿಂಗ್ಸ್‌ ಆರಂಭಿಸಿದ ಪಶ್ಚಿಮ ವಲಯ, ಆರಂಭಿಕ ಬ್ಯಾಟರ್ ಪೃಥ್ವಿ ಶಾ(65) ಬಾರಿಸಿದ ಅರ್ಧಶತಕದ ಹೊರತಾಗಿಯೂ ಕೇವಲ 146 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ದಕ್ಷಿಣ ವಲಯ ತಂಡವು 67 ರನ್‌ಗಳ ಮೊದಲ ಇನಿಂಗ್ಸ್‌ ಮುನ್ನಡೆ ಪಡೆಯಿತು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ ದಕ್ಷಿಣ ವಲಯದ ಬ್ಯಾಟರ್‌ಗಳು ಸಂಘಟಿತ ಪ್ರದರ್ಶನ ತೋರುವ ಮೂಲಕ 230 ರನ್ ಬಾರಿಸಿತು. ಈ ಮೂಲಕ ಪಶ್ಚಿಮ ವಲಯಕ್ಕೆ 298 ರನ್‌ಗಳ ಕಠಿಣ ಗುರಿ ನೀಡಿತ್ತು.

Follow Us:
Download App:
  • android
  • ios