Duleep Trophy Final: ಕ್ಲೈಮ್ಯಾಕ್ಸ್ ಹಂತ ತಲುಪಿದ ದುಲೀಪ್ ಟ್ರೋಫಿ ಫೈನಲ್..!
* ರೋಚಕಘಟ್ಟ ತಲುಪಿದ ದುಲೀಪ್ ಟ್ರೋಫಿ ಫೈನಲ್ ಪಂದ್ಯ
* ಗೆಲುವಿಗೆ 298 ರನ್ ಗುರಿ ಪಡೆದಿರುವ ಪಶ್ಚಿಮ ವಲಯ 4ನೇ ದಿನದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿದೆ
* ಕಳೆದ ಬಾರಿ ಫೈನಲ್ ಸೋಲಿಗೆ ಸೇಡು ತೀರಿಸಿ, ಟ್ರೋಫಿ ಎತ್ತಿ ಹಿಡಿಯಲು ದಕ್ಷಿಣಕ್ಕೆ 5 ವಿಕೆಟ್ ಅಗತ್ಯವಿದೆ
ಬೆಂಗಳೂರು(ಜು.16): ಈ ಬಾರಿಯ ದುಲೀಪ್ ಟ್ರೋಫಿ ಫೈನಲ್ ಪಂದ್ಯ ಕ್ಲೈಮಾಕ್ಸ್ ಹಂತ ತಲುಪಿದ್ದು, ಪ್ರಶಸ್ತಿ ಗೆಲ್ಲಲು ದಕ್ಷಿಣ ವಲಯ ಹಾಗೂ ಪಶ್ಚಿಮ ವಲಯ ತಂಡಗಳು ತೀವ್ರ ಪೈಪೋಟಿ ನಡೆಸುತ್ತಿವೆ. ಗೆಲುವಿಗೆ 298 ರನ್ ಗುರಿ ಪಡೆದಿರುವ ಪಶ್ಚಿಮ ವಲಯ 4ನೇ ದಿನದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿದ್ದು, ಕೊನೆ ದಿನವಾದ ಭಾನುವಾರ ಇನ್ನೂ 116 ರನ್ ಗಳಿಸಬೇಕಿದೆ. ಕಳೆದ ಬಾರಿ ಫೈನಲ್ ಸೋಲಿಗೆ ಸೇಡು ತೀರಿಸಿ, ಟ್ರೋಫಿ ಎತ್ತಿ ಹಿಡಿಯಲು ದಕ್ಷಿಣಕ್ಕೆ 5 ವಿಕೆಟ್ ಅಗತ್ಯವಿದೆ.
3ನೇ ದಿನದಂತ್ಯಕ್ಕೆ 7 ವಿಕೆಟ್‌ಗೆ 181 ರನ್ ಗಳಿಸಿದ್ದ ದಕ್ಷಿಣ ವಲಯ, ಶನಿವಾರ ಈ ಮೊತ್ತಕ್ಕೆ 49 ರನ್ ಸೇರಿಸಿತು. 8ನೇ ವಿಕೆಟ್‌ಗೆ ವಾಷಿಂಗ್ಟನ್ ಸುಂದರ್(37) ಹಾಗೂ ವೈಶಾಕ್(23) 42 ರನ್ ಸೇರಿಸಿ ದೊಡ್ಡ ಗುರಿ ನೀಡಲು ನೆರವಾದರು.
ಬಳಿಕ ಇನ್ನಿಂಗ್ಸ್ ಆರಂಭಿಸಿದ ಹಾಲಿ ಚಾಂಪಿಯನ್ ಪಶ್ಚಿಮ ವಲಯ, ಮತ್ತೆ ಆರಂಭಿಕ ಕುಸಿತಕ್ಕೊಳಗಾಯಿತು. ನಾಯಕ ಪ್ರಿಯಾಂಕ್ ಪಾಂಚಾಲ್(ಔಟಾಗದೆ 92) ಒಂದೆಡೆ ಹೋರಾಡುತ್ತಿದ್ದರೂ 79 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು. ಆದರೆ ಸರ್ಫರಾಜ್ ಖಾನ್ 48 ರನ್ ಸಿಡಿಸಿ ತಂಡವನ್ನು ಮೇಲೆತ್ತಿದರು. ವಾಸುಕಿ ಕೌಶಿಕ್ 3, ಸಾಯಿ ಕಿಶೋರ್, ವೈಶಾಕ್ ತಲಾ 1 ವಿಕೆಟ್ ಪಡೆದಿದ್ದಾರೆ.
ಸ್ಕೋರ್: ದಕ್ಷಿಣ 213/10 ಮತ್ತು 230/10 (ವಾಷಿಂಗ್ಟನ್ 37, ವೈಶಾಕ್ 23, ಧರ್ಮೇಂದ್ರಸಿಂಗ್ 5-40), ಪಶ್ಚಿಮ 146/10 ಮತ್ತು 182/5(4ನೇ ದಿನದಂತ್ಯಕ್ಕೆ) (ಪಾಂಚಾಲ್ 92*, ಸರ್ಫರಾಜ್ 48, ಕೌಶಿಕ್ 3-28)
ಏಷ್ಯಾಕಪ್: ಹೆಚ್ಚಿನ ಪಂದ್ಯ ಆತಿಥ್ಯಕ್ಕೆ ಪಿಸಿಬಿ ಬೇಡಿಕೆ
ಕರಾಚಿ: ಏಷ್ಯಾಕಪ್ ಕ್ರಿಕೆಟ್‌ನ ಗೊಂದಲಗಳು ದಿನ ಕಳೆದಂತೆ ಮತ್ತಷ್ಟು ಹೆಚ್ಚುತ್ತಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಟೂರ್ನಿಯ ಆತಿಥ್ಯದ ಬಗ್ಗೆ ಮತ್ತೆ ತಗಾದೆ ಎತ್ತಿದೆ. ಪಾಕ್‌ನಲ್ಲಿ 4ಕ್ಕಿಂತ ಹೆಚ್ಚು ಪಂದ್ಯಗಳನ್ನು ನಡೆಸುವಂತೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ) ಮೇಲೆ ಒತ್ತಡ ಹೇರಿರುವ ಪಿಸಿಬಿ, ಶ್ರೀಲಂಕಾದಲ್ಲಿ ನಡೆಯುವ ಪಂದ್ಯಗಳಿಂದ ಬರುವ ಆದಾಯದಲ್ಲಿ ಹೆಚ್ಚಿನ ಪಾಲು ನೀಡುವಂತೆಯೂ ಬೇಡಿಕೆ ಇರಿಸಿದೆ.
ಪಾಕ್‌ನಲ್ಲಿ 4, ಲಂಕಾದಲ್ಲಿ ಉಳಿದ 9 ಪಂದ್ಯಗಳು ನಡೆಸುವುದು ಈಗಾಗಲೇ ನಿಗದಿಯಾಗಿತ್ತು. ಆದರೆ ಪಾಕ್ ತನ್ನ ಪಂದ್ಯಗಳ ಸಂಖ್ಯೆನ್ನು ಹೆಚ್ಚಿಸಲು ಒತ್ತಡ ಹೇರುತ್ತಿದ್ದು, ಹೀಗಾಗಿ ವೇಳಾಪಟ್ಟಿ ಪ್ರಕಟ ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ಲಂಕಾ ಬದಲು ಯುಎಇಯಲ್ಲಿ ಪಂದ್ಯಗಳು ನಡೆಯುತ್ತಿದ್ದರೆ ಪಾಕ್‌ಗೆ ಹೆಚ್ಚಿನ ಆದಾಯ ಸಿಗುತ್ತಿತ್ತು ಎನ್ನಲಾಗಿದ್ದು, ಇದೇ ಕಾರಣಕ್ಕೆ ಲಂಕಾದ ಪಂದ್ಯಗಳಿಂದ ಬರುವ ಆದಾಯದ ಹೆಚ್ಚಿನ ಪಾಲಿನ ಮೇಲೆ ಪಿಸಿಬಿ ಕಣ್ಣಿಟ್ಟಿದೆ ಎಂದು ಹೇಳಲಾಗುತ್ತಿದೆ.
ಭಾರತ-ಬಾಂಗ್ಲಾ ವನಿತಾ ಏಕದಿನ ಸರಣಿ ಇಂದಿನಿಂದ
ಢಾಕಾ: ಟಿ20 ಸರಣಿಯನ್ನು 2-1 ಅಂತರದಲ್ಲಿ ಜಯಿಸಿದ ಉತ್ಸಾಹದಲ್ಲಿರುವ ಭಾರತ ಮಹಿಳಾ ತಂಡ, ಭಾನುವಾರದಿಂದ ಬಾಂಗ್ಲಾದೇಶ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲಿದೆ. ಏಷ್ಯನ್ ಗೇಮ್ಸ್‌ನ ಸಿದ್ಧತೆಯಲ್ಲಿರುವ ಭಾರತ ತಂಡ ಟಿ20 ಸರಣಿ ಗೆದ್ದಿದ್ದರೂ, ಸರಣಿಯುದ್ದಕ್ಕೂ ಬ್ಯಾಟಿಂಗ್‌ನಲ್ಲಿ ಕಳಪೆ ಪ್ರದರ್ಶನ ತೋರಿತ್ತು. ಮೊದಲ ಪಂದ್ಯದಲ್ಲಿ ಬಾಂಗ್ಲಾದ 114 ರನ್ ಬೆನ್ನತ್ತಿ ಗೆದ್ದಿದ್ದ ಭಾರತ, ಕೊನೆ 2 ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿ 95 ಹಾಗೂ 102 ರನ್ ಗಳಿಸಿತ್ತು. ಹೀಗಾಗಿ ಬ್ಯಾಟಿಂಗ್‌ನಲ್ಲಿ ಸುಧಾರಿತ ಪ್ರದರ್ಶನ ನೀಡಲು ಹರ್ಮನ್ ಬಳಗ ಕಾಯುತ್ತಿದೆ.
ಪಂದ್ಯ ಆರಂಭ: ಬೆಳಗ್ಗೆ 9ಕ್ಕೆ