ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದ ದಕ್ಷಿಣ ವಲಯ5 ವಿಕೆಟ್ ಕಬಳಿಸಿ ಮಿಂಚಿದ ವಿದ್ವತ್ ಕಾವೇರಪ್ಪಉತ್ತರ ವಲಯ ಎದುರು ಇನಿಂಗ್ಸ್ ಮುನ್ನಡೆ ನಿರೀಕ್ಷೆಯಲ್ಲಿ ದಕ್ಷಿಣ ವಲಯ

ಬೆಂಗಳೂರು(ಜು.06): ಕಳೆದ ದೇಸಿ ಋತುವಿನಲ್ಲಿ ಆಕರ್ಷಕ ಪ್ರದರ್ಶನ ತೋರಿ ಐಪಿಎಲ್‌ನ ಪಂಜಾಬ್‌ ಕಿಂಗ್ಸ್‌ ತಂಡದಲ್ಲಿ ಸ್ಥಾನ ಪಡೆದಿದ್ದ ಕರ್ನಾಟಕದ ವೇಗಿ ವಿದ್ವತ್‌ ಕಾವೇರಪ್ಪ, 2023-24ರ ದೇಸಿ ಋತುವನ್ನು 5 ವಿಕೆಟ್‌ ಗೊಂಚಲಿನೊಂದಿಗೆ ಆರಂಭಿಸಿದ್ದಾರೆ. ಬುಧವಾರದಿಂದ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭಗೊಂಡ ದುಲೀಪ್‌ ಟ್ರೋಫಿ ಸೆಮಿಫೈನಲ್‌ ಪಂದ್ಯದಲ್ಲಿ ದಕ್ಷಿಣ ವಲಯವನ್ನು ಪ್ರತಿನಿಧಿಸುತ್ತಿರುವ ವಿದ್ವತ್‌, ತಮ್ಮ ವೇಗದ ದಾಳಿಯಿಂದ ಉತ್ತರ ವಲಯ ಮೊದಲ ಇನ್ನಿಂಗ್ಸಲ್ಲಿ 198 ರನ್‌ಗೆ ತತ್ತರಿಸುವಂತೆ ಮಾಡಿದರು.

ಮೊದಲ ಇನ್ನಿಂಗ್ಸ್‌ ಶುರು ಮಾಡಿದ ದಕ್ಷಿಣ ವಲಯ ಸಹ ಆರಂಭಿಕ ಆಘಾತಕ್ಕೊಳಗಾಯಿತು. 35 ರನ್‌ಗೆ 4 ವಿಕೆಟ್‌ ಕಳೆದುಕೊಂಡ ತಂಡಕ್ಕೆ ಉಪನಾಯಕ, ಕರ್ನಾಟಕದ ಮಯಾಂಕ್‌ ಅಗರ್‌ವಾಲ್‌ ಆಸರೆಯಾಗಿದ್ದಾರೆ. ದಿನದಂತ್ಯಕ್ಕೆದಕ್ಷಿಣ ವಲಯ 4 ವಿಕೆಟ್‌ಗೆ 63 ರನ್‌ ಗಳಿಸಿದ್ದು, ಇನ್ನೂ 135 ರನ್‌ ಹಿನ್ನಡೆಯಲ್ಲಿದೆ.

ಉತ್ತರ ವಲಯದ ವೇಗಿಗಳಾದ ಬಲ್‌ತೇಜ್‌ ಸಿಂಗ್‌ ಹಾಗೂ ಹರ್ಷಿತ್‌ ರಾಣಾ, ದಕ್ಷಿಣ ವಲಯದ ಅಗ್ರ ಕ್ರಮಾಂಕವನ್ನು ಕಾಡಿದರು. ಇಡೀ ದಿನ ಮೋಡ ಕವಿದ ವಾತಾವರಣವಿದ್ದ ಕಾರಣ ವೇಗಿಗಳಿಗೆ ಹೆಚ್ಚಿನ ನೆರವು ದೊರೆಯಿತು. ಸಾಯಿ ಸುದರ್ಶನ್‌(09) ಹಾಗೂ ಆರ್‌.ಸಮರ್ಥ್‌(01)ರನ್ನು ಬಲ್‌ತೇಜ್‌ ಔಟ್ ಮಾಡಿದರೆ, ನಾಯಕ ಹನುಮ ವಿಹಾರಿ(00) ಹಾಗೂ ರಿಕಿ ಭೂಯಿ(00)ರ ವಿಕೆಟ್‌ಗಳನ್ನು ಹರ್ಷಿತ್‌ ಪಡೆದರು. 37 ರನ್‌ ಗಳಿಸಿರುವ ಮಯಾಂಕ್‌, 12 ರನ್‌ ಗಳಿಸಿರುವ ತಿಲಕ್‌ ವರ್ಮಾ 2ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದು, ಮೊದಲ ಇನ್ನಿಂಗ್ಸ್‌ ಮುನ್ನಡೆ ಪಡೆಯುವುದು ದಕ್ಷಿಣ ವಲಯದ ಮೊದಲ ಗುರಿಯಾಗಲಿದೆ.

ಇದಕ್ಕೂ ಮುನ್ನ ಟಾಸ್‌ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ವಲಯ ಭಾರೀ ಯಶಸ್ಸು ಸಾಧಿಸಿತು. 18 ರನ್‌ಗೆ 3 ವಿಕೆಟ್‌ ಕಳೆದುಕೊಂಡಿದ್ದ ತಂಡ 123 ರನ್‌ ಗಳಿಸುವಷ್ಟರಲ್ಲಿ ಇನ್ನೂ 4 ವಿಕೆಟ್ ಕೈಚೆಲ್ಲಿತು. ಹರ್ಷಿತ್‌ ರಾಣಾ(22 ಎಸೆತದಲ್ಲಿ 31), ವೈಭವ್‌ ಅರೋರಾ(23) ಇವರಿಬ್ಬರು 9ನೇ ವಿಕೆಟ್‌ಗೆ 29 ರನ್‌ ಸೇರಿಸಿದರು. ಕೊನೆಯ ವಿಕೆಟ್‌ಗೆ ಅರೋರಾ ಹಾಗೂ ಬಲ್‌ತೇಜ್‌ 25 ರನ್‌ ಕಲೆಹಾಕಿದರು. ಕೊನೆಯ 2 ವಿಕೆಟ್‌ಗೆ 54 ರನ್‌ ಸೇರಿಸಿದ ಉತ್ತರ ವಲಯ 200ರ ಸಮೀಪಕ್ಕೆ ತಲುಪಿತು. ವಿದ್ವತ್ 17.3 ಓವರಲ್ಲಿ 8 ಮೇಡನ್‌ ಸಹಿತ 28 ರನ್‌ಗೆ 5 ವಿಕೆಟ್‌ ಕಬಳಿಸಿದರೆ, ಕೆ.ವಿ.ಶಶಿಕಾಂತ್‌ 2, ರಾಜ್ಯದ ವೈಶಾಖ್‌ ವಿಜಯ್‌ಕುಮಾರ್‌ 1 ವಿಕೆಟ್‌ ಪಡೆದರು.

ಸ್ಕೋರ್‌:
ಉತ್ತರ ವಲಯ 58.3 ಓವರಲ್ಲಿ 198/10(ಪ್ರಭ್‌ಸಿಮ್ರನ್‌ 49, ಅಂಕಿತ್‌ 33, ವಿದ್ವತ್‌ 5-28)
ದಕ್ಷಿಣ ವಲಯ(ಮೊದಲ ದಿನದಂತ್ಯಕ್ಕೆ) 17 ಓವರಲ್ಲಿ 63/4(ಮಯಾಂಕ್‌ 37*, ತಿಲಕ್ 12*, ಬಲ್‌ತೇಜ್‌ 2-21, ಹರ್ಷಿತ್‌ 2-19)

ಸಿಡಿಯದ ತಾರಾ ಬ್ಯಾಟರ್ಸ್‌: ಪಶ್ಚಿಮ ವಲಯಕ್ಕೆ ಸಂಕಷ್ಟ

ಬೆಂಗಳೂರು: ಕೇಂದ್ರ ವಲಯದ ಬೌಲರ್‌ಗಳ ಮುಂದೆ ಪಶ್ಚಿಮ ವಲಯದ ತಾರಾ ಬ್ಯಾಟರ್‌ಗಳಾದ ಪೃಥ್ವಿ ಶಾ, ಚೇತೇಶ್ವರ್‌ ಪೂಜಾರ, ಸೂರ್ಯಕುಮಾರ್‌ ಯಾದವ್‌, ಸರ್ಫರಾಜ್‌ ಖಾನ್‌ ಆಟ ನಡೆಯಲಿಲ್ಲ. ದುಲೀಪ್‌ ಟ್ರೋಫಿಯ ಸೆಮೀಸ್‌ನಲ್ಲಿ ಪಶ್ಚಿಮ ವಲಯ ಮೊದಲ ದಿನದಂತ್ಯಕ್ಕೆ 8 ವಿಕೆಟ್‌ಗ 216 ರನ್‌ ಗಳಿಸಿದ್ದು, ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದೆ. ಶಾ 26, ಪೂಜಾರ 28, ಸೂರ್ಯ 7, ಸರ್ಫರಾಜ್‌ 0 ರನ್‌ಗೆ ಔಟಾದರು. ಅತೀತ್‌ ಸೇಠ್‌(74), ಧರ್ಮೇಂದ್ರ ಜಡೇಜಾ(39) ಹೋರಾಟ ತಂಡವನ್ನು 200ರ ಗಡಿ ದಾಟಿಸಿತು. ಕೇಂದ್ರ ವಲಯ ಪರ ನಾಯಕ ಶಿವಂ ಮಾವಿ 4 ವಿಕೆಟ್‌ ಕಿತ್ತರು.