ಮೊದಲು ಫೇಲ್ ಆದ ನಿನ್ನ ದೇಶ ನೋಡ್ಕೋ: ಕಾಶ್ಮೀರ ಎಂದ ಅಫ್ರಿದಿಗೆ ಬಡಿದ ರೈನಾ!
ಕಾಶ್ಮೀರದ ಬಗ್ಗೆ ಮಾತನಾಡಿದ ಪಾಕ್ ಕ್ರಿಕೆಟಿಗ ಅಫ್ರಿದಿಗೆ ಮಾತಿನಲ್ಲೇ ಬಡಿದ ಸುರೇಶ್ ರೈನಾ| ನಾನೊಬ್ಬ ಹೆಮ್ಮೆಯ ಕಾಶ್ಮೀರಿಗ, ಕಾಶ್ಮೀರ ಯಾವತ್ತಿದ್ದರೂ ಭಾರತದ ಭಾಗ| ಕಾಶ್ಮೀರದ ಬಗ್ಗೆ ಬಾಯ್ಬಿಟ್ಟ ಅಫ್ರಿದಿಗೆ ನೆಟ್ಟಿಗರಿಂದ ಕ್ಲಾಸ್
ಶ್ರೀನಗರ(ಮೇ.18): ಕಾಶ್ಮೀರ ಸಂಬಂಧ ವಿವಾದಾತ್ಮಕ ಮಾತುಗಳನ್ನಾಡಿದ ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿಗೆ ಟೀಂ ಇಂಡಿಯಾದ ಹಿರಿಯ ಆಟಗಾರ ಸುರೇಶ್ ರೈನಾ ಮಾತಿನಲ್ಲೇ ಮುಟ್ಟಿ ನೋಡುವಂತೆ ಉತ್ತರಿಸಿದ್ದಾರೆ.
ಇತ್ತೀಚೆಗಷ್ಟೇ ಪಾಕಿಸ್ತಾನ ಸೇನಾ ಸಮವಸ್ತ್ರದಲ್ಲಿ ಕಾಶ್ಮೀರ(ಪಿಒಕೆ)ಗೆ ಭೇಟಿ ನೀಡಿದ್ದ ಆಲ್‌ರೌಂಡರ್ ಅಫ್ರಿದಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂಬಂಧ ನೀಡಿದ ಪ್ರತಿಕ್ರಿಯೆ ಭಾರೀ ವಿವಾದ ಹುಟ್ಟು ಹಾಕಿತ್ತು. ಇಡೀ ವಿಶ್ವವೇ ಒಂದು ವೈರಸ್‌ನಿಂದ ನಲುಗಿದೆ. ಆದರೆ ಮೋದಿಯ ಹೃದಯ ಮತ್ತು ಮನಸ್ಸು ಅದಕ್ಕಿಂತಲೂ ಅಪಾಯಕಾರಿ ಎಂದು ಹೇಳಿದ್ದ ಅಫ್ರಿದಿ ಮಾತುಗಳು ಭಾರೀ ಟೀಕೆಗೊಳಗಾಗಿತ್ತು. .
ಇಷ್ಟೇ ಅಲ್ಲದೇ ಕಾಶ್ಮೀರದ ಜನ ನನ್ನ ಪರ ತೋರಿಸಿರುವ ಪ್ರೀತಿಗೆ ನಾನು ಋಣಿಯಾಗಿದ್ದೇನೆ. ಮುಂದಿನ PSL ಸರಣಿಯಲ್ಲಿ ಕಾಶ್ಮೀರದ ಒಂದು ತಂಡವೂ ಇರುತ್ತದೆ ಎಂದು ನಾನು ಭಾವಿಸುತ್ತೇನೆ. ಒಂದು ವೇಳೆ ಕಾಶ್ಮೀರದ ತಂಡವಿದ್ದರೆ, ಆ ತಂಡದ ಪರವಾಗಿ ನಾನು ಆಡಲು ಬಸುತ್ತೇನೆ' ಎಂದಿದ್ದರು.
ಸಾಲದೆಂಬಂತೆ ಅಲ್ಲಿಂದ ಮರಳಿದ್ದ ಅಫ್ರಿದಿ ತಮ್ಮ ಟ್ವಿಟರ್ ಖಾತೆಯಲ್ಲಿ ಕಾಶ್ಮೀರಿಯರ ನೋವು ಅರ್ಥೈಸಿಕೊಳ್ಳಲು ಧಾರ್ಮಿಕ ಭಾವನೆಯ ಅಗತ್ಯವಿಲ್ಲ. ಸೂಕ್ತ ಸ್ಥಳದಲ್ಲಿ ಸೂಕ್ತ ಭಾವನೆ ಬೇಕಷ್ಟೇ, ಕಾಶ್ಮೀರ ಕಾಪಾಡಿ ಎಂದು ಬರೆದಿದ್ದರು.
ಆದರೀಗ ಈ ಟ್ವೀಟ್‌ಗೆ ಸುರೇಶ್ ರೈನಾ ಪ್ರತಿಕ್ರಿಯಿಸಿರುವ ಸುರೇಶ್ ರೈನಾ ಸುದ್ದಿಯಲ್ಲಿರಲು ಬಳಸಿಕೊಂಡ ಉಪಾಯವನ್ನು ಭರ್ಜರಿಯಾಗಿ ಟೀಕಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ರೈನಾ 'ಅಬ್ಬಾ ಸುದ್ದಿಯಲ್ಲಿರಬೇಕೆಂದು ಜನ ಏನೆಲ್ಲಾ ಮಾಡ್ತಾರೆ...! ಅದರಲ್ಲೂ ಭಿಕ್ಷೆಯ ಮೇಲೆ ಬದುಕುತ್ತಿರುವ ರಾಷ್ಟ್ರದಲ್ಲಿ. ಹೀಗಾಗಿ ಕಾಶ್ಮೀರವನ್ನು ಬಿಟ್ಟು ಫೇಲ್ ಆಗಿರುವ ನಿನ್ನ ದೇಶಕ್ಕಾಗಿ ಏನಾದರೂ ಒಳ್ಳೆಯದನ್ನು ಮಾಡು. ನಾನೊಬ್ಬ ಹೆಮ್ಮೆಯ ಕಾಶ್ಮೀರಿ, ಕಾಶ್ಮೀರ ಇಂದಿಗೂ ಹಾಗೂ ಎಂದೆಂದಿಗೂ ಭಾರತದಿಂದ ಬೇರ್ಪಡಿಸಲಾಗದ ಭಾಗವೇ ಉಳಿಯುತ್ತದೆ. ಜೈ ಹಿಂದ್ ಎಂದು ಬರೆದಿದ್ದಾರೆ.
ಇನ್ನು ಅಫ್ರಿದಿಯ ಮಾತುಗಳು ನೆಟ್ಟಿಗರನ್ನೂ ಅಸಮಾಧಾನಕ್ಕೀಡು ಮಾಡಿದ್ದು, ಭಾರೀ ಆಕ್ರೋಶ ಹಾಗೂ ಟೀಕೆಗೊಳಗಾಗಿವೆ.