ಮುಂಬರುವ ಅಂಡರ್‌ 19 ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗೆ ಮುನ್ನ ನಡೆಯಲಿರುವ ಪ್ರತಿಷ್ಠಿತ ಅಂಡರ್‌-19 ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಗೆ ಭಾರತ ತಂಡವನ್ನು ಶನಿವಾರ ಪ್ರಕಟಿಸಲಾಗಿದೆ. 

ಮುಂಬೈ (ನ.25): ದಕ್ಷಿಣ ಆಫ್ರಿಕಾದ ಆತಿಥ್ಯದಲ್ಲಿ ಮುಂದಿನ ಜನವರಿ-ಫೆಬ್ರವರಿಯಲ್ಲಿ ನಡೆಯಲಿರುವ ಅಂಡರ್‌-19 ಏಕದಿನ ವಿಶ್ವಕಪ್‌ ಟೂರ್ನಿಗೆ ಸಿದ್ಧತಾ ದೃಷ್ಟಿಯಿಂದ ಪ್ರಮುಖವಾಗಿರುವ ಅಂಡರ್‌-19 ಏಷ್ಯಾಕಪ್‌ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಜೂನಿಯರ್‌ ಕ್ರಿಕೆಟ್‌ ಆಯ್ಕೆ ಸಮಿತಿ ಯುಎಇ ಆತಿಥ್ಯದಲ್ಲಿ ನಡೆಯಲಿರುವ ಎಸಿಸಿ ಅಂಡರ್‌-19 ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಿದೆ. ಭಾರತ ಈ ಟೂರ್ನಿಯ ಅತ್ಯಂತ ಯಶಸ್ವಿ ತಂಡವಾಗಿದ್ದು, ಎಂಟು ಬಾರಿ ಎಸಿಸಿ ಅಂಡರ್‌-19 ಟೂರ್ನಿಯ ಚಾಂಪಿಯನ್‌ ಎನಿಸಿದೆ. ಭಾರತದ U19 ತಂಡವು 15 ಸದಸ್ಯರು ಮತ್ತು ಮೂವರು ಟ್ರಾವೆಲಿಂಗ್‌ ಸ್ಟ್ಯಾಂಡ್‌ಬೈ ಆಟಗಾರರನ್ನು ಒಳಗೊಂಡಿರುತ್ತದೆ. ಆಯ್ಕೆ ಸಮಿತಿಯು ನಾಲ್ವರು ಹೆಚ್ಚುವರಿ ಮೀಸಲು ಆಟಗಾರರನ್ನು ಹೆಸರಿಸಿದೆ. ಮೀಸಲು ಆಟಗಾರರು ಟೂರ್‌ ಮಾಡಲಿರುವ ತಂಡದ ಭಾಗವಾಗಿರುವುದಿಲ್ಲ. 15 ಸದಸ್ಯರ ತಂಡದಲ್ಲಿ ಕರ್ನಾಟಕದ ವೇಗದ ಬೌಲರ್‌ ಧನುಷ್‌ ಗೌಡ ಸ್ಥಾನ ಪಡೆದುಕೊಂಡಿದ್ದಾರೆ.

ಅಂಡರ್‌-19 ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿ, ಡಿಸೆಂಬರ್‌ 8 ರಿಂದ 17ರವರೆಗೆ ನಡೆಯಲಿದೆ. ಭಾರತ ತಂಡ ಮೊದಲ ಪಂದ್ಯದಲ್ಲಿ ಡಿಸೆಂಬರ್‌ 8 ರಂದು ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಬಳಿಕ ಪಾಕಿಸ್ತಾನ (ಡಿ.10), ನೇಪಾಳ (ಡಿ.12) ತಂಡವನ್ನು ಎದುರಿಸಲಿದೆ.

ಎಸಿಸಿ ಅಂಡರ್‌-19 ಏಷ್ಯಾಕಪ್‌ಗೆ ಭಾರತ ತಂಡ: ಆರ್ಶಿನ್‌ ಕುಲಕರ್ಣಿ, ಸಚಿನ್‌ ದಾಸ್‌, (ಮಹಾರಾಷ್ಟ್ರ), ಆದರ್ಶ್‌ ಸಿಂಗ್‌, ನಮನ್‌ ತಿವಾರಿ(ಉತ್ತರಪ್ರದೇಶ), ರುದ್ರ ಮಯೂರ್‌ ಪಟೇಲ್‌ (ಗುಜರಾತ್‌), ಪ್ರಿಯಾಂಶು ಮೊಲಿಯಾ, ರಾಜ್‌ ಲಿಂಬಿನಿ (ಬರೋಡ), ಮುಶೀರ್‌ ಖಾನ್‌ (ಮುಂಬೈ), ಉದಯ್‌ ಶರಣ್‌ (ನಾಯಕ), ಅರಾಧ್ಯ ಶುಕ್ಲಾ( ಪಂಜಾಬ್‌), ಆರಾವೆಲ್ಲಿ ಅವಿನಾಶ್‌ ರಾವ್‌ ( ವಿ.ಕೀ) ಮುರುಗನ್‌ ಅಭಿಷೇಕ್‌ (ಹೈದರಾಬಾದ್‌), ಸೌಮ್ಯ ಕುಮಾರ್‌ ಪಾಂಡೆ (ಉಪನಾಯಕ, ಮಧ್ಯಪ್ರದೇಶ), ಇನ್ನೇಶ್‌ ಮಹಾಜನ್‌ (ವಿ.ಕೀ, ಹಿಮಾಚಲ), ಧನುಶ್‌ ಗೌಡ (ಕರ್ನಾಟಕ).
ಟ್ರಾವೆಲಿಂಗ್‌ ಸ್ಟ್ಯಾಂಡ್‌ಬೈ ಪ್ಲೇಯರ್ಸ್‌: ಪ್ರೇಮ್‌ ದೇವಕರ್‌ (ಮುಂಬೈ), ಅನ್ಶ್‌ ಗೋಸಾಯಿ (ಸೌರಾಷ್ಟ್ರ), ಮೊಹಮದ್‌ ಅಮ್ಮಾನ್‌ (ಉತ್ತರ ಪ್ರದೇಶ)