ಭಾರತದ ವಿರುದ್ಧದ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಬೆನ್ನಲ್ಲೇ, ವೆಸ್ಟ್ ಇಂಡೀಸ್ ಕ್ರಿಕೆಟ್ನ ಅಭಿವೃದ್ಧಿಗೆ ಆರ್ಥಿಕ ನೆರವು ನೀಡುವಂತೆ ಕೋಚ್ ಡರೆನ್ ಸಾಮಿ ಮನವಿ ಮಾಡಿದ್ದಾರೆ. ಭಾರತದ ಅತ್ಯುತ್ತಮ ಮೂಲಸೌಕರ್ಯಗಳನ್ನು ಶ್ಲಾಘಿಸಿದ ಅವರು, ಬಿಕ್ಕಟ್ಟುಗಳ ನಡುವೆಯೂ ತಮ್ಮ ತಂಡದ ಹೋರಾಟವನ್ನು ವಿವರಿಸಿದ್ದಾರೆ.
ಬೆಂಗಳೂರು: ಭಾರತದ ವಿರುದ್ಧದ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ಬೆನ್ನಲ್ಲೇ, ವೆಸ್ಟ್ ಇಂಡೀಸ್ ಕ್ರಿಕೆಟ್ನ ಅಭಿವೃದ್ಧಿಗಾಗಿ ಆರ್ಥಿಕ ನೆರವು ನೀಡುವಂತೆ ಮುಖ್ಯ ಕೋಚ್ ಡರೆನ್ ಸಾಮಿ ಮನವಿ ಮಾಡಿದ್ದಾರೆ. ಭಾರತದ ವಿರುದ್ಧದ ಏಕದಿನ ಸರಣಿಯನ್ನು ವಿಂಡೀಸ್ 1-2 ಅಂತರದಿಂದ ಸೋತಿತ್ತು. ಆದರೆ ಬಲಿಷ್ಠ ಟೀಂ ಇಂಡಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು 2-2 ಅಂತರದಿಂದ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸದ್ಯ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ವೆಸ್ಟ್ ಇಂಡೀಸ್ ತಂಡಕ್ಕೆ, ಈ ಪ್ರದರ್ಶನ ಹೊಸ ಸ್ಪಾನ್ಸರ್ಗಳು ಹಾಗೂ ಹೂಡಿಕೆದಾರರನ್ನು ಆಕರ್ಷಿಸಲು ಸಹಾಯ ಮಾಡಲಿದೆ ಎಂದು ಸಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಳೆಯಿಂದಾಗಿ ಐದನೇ ಹಾಗೂ ಅಂತಿಮ ಟಿ20 ಪಂದ್ಯ ರದ್ದಾದ ಬಳಿಕ ಡರೆನ್ ಸಾಮಿ ಮಾತನಾಡಿದ ಅವರು, ಕೆರಿಬಿಯನ್ ಕ್ರಿಕೆಟ್ಗೆ ಈಗ ಬಲವಾದ ಆರ್ಥಿಕ ಬೆಂಬಲದ ಅಗತ್ಯವಿದೆ ಎಂದು ನೋವು ತೋಡಿಕೊಂಡಿದ್ದಾರೆ. "ವೆಸ್ಟ್ ಇಂಡೀಸ್ ಕ್ರಿಕೆಟ್ಗೆ ಆರ್ಥಿಕವಾಗಿ ಬೆಂಬಲ ನೀಡಲು ಯಾರಾದರೂ ಮುಂದೆ ಬರಬೇಕಾದ ಪರಿಸ್ಥಿತಿ ಈಗಿದೆ. ವಿಶ್ವದ ಅತ್ಯುತ್ತಮ ತಂಡದ ವಿರುದ್ಧ ಭಾರತದಲ್ಲೇ ಆಡಿದ ಇಂತಹ ಸರಣಿಗಳು, ನಮ್ಮ ಪರವಾಗಿ ಉತ್ತಮ ಚರ್ಚೆಗಳಿಗೆ ದಾರಿ ಮಾಡಿಕೊಡಲಿವೆ ಎಂದು ಭಾವಿಸುತ್ತೇನೆ," ಎಂದು ಅವರು ಹೇಳಿದರು.
ಉಭಯ ಕ್ರಿಕೆಟ್ ತಂಡಗಳ ಹೋಲಿಕೆ ಮಾಡಿದ ಸಾಮಿ
ಇದೇ ವೇಳೆ ಭಾರತ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟ್ನ ಮೂಲಸೌಕರ್ಯಗಳನ್ನು ಸಾಮಿ ಹೋಲಿಕೆ ಮಾಡಿದ ಅವರು, "ಭಾರತ ಯಾವುದೇ ಐಸಿಸಿ ಟೂರ್ನಿಗೆ ಹೋದರೂ ಕಪ್ ಗೆಲ್ಲುತ್ತದೆ ಎಂಬ ನಿರೀಕ್ಷೆ ಇರುತ್ತದೆ. ಏಕೆಂದರೆ, ಅದಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ಅವರು ಹೊಂದಿದ್ದಾರೆ. ಆದರೆ ವೆಸ್ಟ್ ಇಂಡೀಸ್ ತಂಡ ಎಲ್ಲೇ ಹೋದರೂ, ನಾನಾ ಬಿಕ್ಕಟ್ಟುಗಳ ನಡುವೆಯೂ ಹೋರಾಡಿ ನಾವು ಉತ್ತಮ ಪ್ರದರ್ಶನ ನೀಡುತ್ತಿದ್ದೇವೆ," ಎಂದು ಅವರು ವಿವರಿಸಿದರು.
ಸ್ಪಾನ್ಸರ್ಗಳು ಮತ್ತು ಇತರ ಪಾಲುದಾರರೊಂದಿಗಿನ ಮಾತುಕತೆ ವೇಳೆ, ಈ ಸರಣಿಯ ಪ್ರದರ್ಶನ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಗೆ ಹೆಚ್ಚಿನ ಬಲ ತುಂಬಲಿದೆ ಎಂದು ಮಾಜಿ ವಿಂಡೀಸ್ ನಾಯಕ ಆಶಿಸಿದ್ದಾರೆ. "ಒಂದೆಡೆ ಎಲ್ಲ ಸೌಲಭ್ಯಗಳು ಸರಿಯಾಗಿವೆ. ಮತ್ತೊಂದೆಡೆ ಬಿಕ್ಕಟ್ಟುಗಳಿಂದ ಕೂಡಿದ ಪರಿಸ್ಥಿತಿ ಇದೆ. ಆದರೂ ನಾವು ಮುನ್ನುಗ್ಗುತ್ತಿದ್ದೇವೆ. ಇದೊಂದು ದೊಡ್ಡ ಹೆಜ್ಜೆ ಎಂದು ನಾನು ಭಾವಿಸುತ್ತೇನೆ," ಎಂದು ಸಾಮಿ ತಿಳಿಸಿದರು.
1978ರ ಬಳಿಕ ಬೆಂಗ್ಳೂರಲ್ಲಿ ಭಾರತ-ವಿಂಡೀಸ್ ನಡುವೆ ಮೊದಲ ಮುಖಾಮುಖಿ!
ಭಾರತ ಹಾಗೂ ವೆಸ್ಟ್ಇಂಡೀಸ್ ನಡುವೆ ಶನಿವಾರ ನಡೆದ 5ನೇ ಟಿ20 ಪಂದ್ಯ, ಬೆಂಗಳೂರಲ್ಲಿ ಉಭಯ ತಂಡಗಳ ನಡುವೆ 1978ರ ಬಳಿಕ ನಡೆದ ಮೊದಲ ಅಂತಾರಾಷ್ಟ್ರೀಯ ಪಂದ್ಯ. 48 ವರ್ಷಗಳ ಹಿಂದೆ ಭಾರತ-ವಿಂಡೀಸ್ ನಡುವೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯವೊಂದು ನಡೆದಿತ್ತು. ಆ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು.


