ಚೆನ್ನೈ(ಡಿ.25): ಕೋವಿಡ್‌ ಭೀತಿಯಿಂದ ದುಬೈನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್‌ನಿಂದ ಹಿಂದೆ ಸರಿದಿದ್ದ ಸುರೇಶ್‌ ರೈನಾ, 2021ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪರವೇ ಆಡಲಿದ್ದಾರೆ ಎಂದು ತಂಡದ ಮೂಲಗಳು ತಿಳಿಸಿರುವುದಾಗಿ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. 

2020ರ ಐಪಿಎಲ್‌ನಲ್ಲಿ ಆಡದ ಹಿನ್ನೆಲೆಯಲ್ಲಿ ರೈನಾ ಅವರನ್ನು ಚೆನ್ನೈ ತಂಡದಿಂದ ಕೈಬಿಡಲಾಗುವುದು ಎನ್ನುವ ವದಂತಿ ಹಬ್ಬಿದ್ದ ಹಿನ್ನೆಲೆಯಲ್ಲಿ ತಂಡ ಸ್ಪಷ್ಟನೆ ನೀಡಿದೆ.

ಇನ್ನು ಮುಂಬೈನಲ್ಲಿ ಸುರೇಶ್ ರೈನಾ ಬಂಧನದ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಸ್‌ಕೆ ಫ್ರಾಂಚೈಸಿ, ನಮಗೆ ರೈನಾ ಅರೆಸ್ಟ್ ಆಗಿರುವ ಬಗ್ಗೆ ಮಾತ್ರ ಗೊತ್ತಿದೆ. ಈ ಬಗ್ಗೆ ಹೆಚ್ಚೇನು ಪ್ರತಿಕಿಯಿಸಲು ಬಯಸುವುದಿಲ್ಲ, ಅವರು ಐಪಿಎಲ್‌ನಲ್ಲಿ ನಮ್ಮ ತಂಡದಲ್ಲೇ ಮುಂದುವರೆಯಲಿದ್ದಾರೆ ಎನ್ನುವುದನ್ನು ತಿಳಿಸಲು ಬಯಸುತ್ತೇವೆ ಎಂದು ಹೇಳಿದ್ದಾರೆ.

ಸುರೇಶ್ ರೈನಾ ಆರೆಸ್ಟ್‌ ಬಗ್ಗೆ ಕೊನೆಗೂ ಸಿಕ್ತು ಸ್ಪಷ್ಟನೆ..! ಅಷ್ಟಕ್ಕೂ ಆಗಿದ್ದೇನು?

ಸುರೇಶ್ ರೈನಾ ಅವರು ಮುಂಬೈನ ವಿಮಾನ ನಿಲ್ದಾಣದ ಸಮೀಪವಿರುವ ಕ್ಲಬ್‌ನಲ್ಲಿ ತಡರಾತ್ರಿ ಔತಣಕೂಟದಲ್ಲಿ ಪಾಲ್ಗೊಂಡಿದ್ದರು, ಈ ವೇಳೆ ಕೆಲ ಸೆಲಿಬ್ರಿಟಿಗಳನ್ನು ಸೇರಿದಂತೆ 34 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದರು. 

ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಸುರೇಶ್ ರೈನಾ ಜನವರಿ 10ರಿಂದ ಆರಂಭವಾಗಲಿರುವ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಉತ್ತರ ಪ್ರದೇಶ ತಂಡವನ್ನು ಪ್ರತಿನಿಧಿಸಲಿದ್ದಾರೆ.