ಸದ್ಯದಲ್ಲೇ ಎಬಿ ಡಿವಿಲಿಯರ್ಸ್ ತಂಡ ಕೂಡಿಕೊಳ್ಳಲಿದ್ದಾರೆ ಎಂದು ವರದಿಯಾಗಿದ್ದನ್ನು ನೊಡಿದ್ದೇವೆ. ಇದೀಗ ಎಬಿಡಿಗೆ ಹರಿಣಗಳ ತಂಡವನ್ನು ಮುನ್ನಡೆಸುವ ಆಫರ್ ಸಿಕ್ಕಿದೆ ಎನ್ನಲಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಕೇಪ್‌ಟೌನ್(ಏ.30)‌: ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡಕ್ಕೆ ಮತ್ತೆ ನಾಯಕರಾಗಬೇಕು ಎಂದು ಕ್ರಿಕೆಟ್‌ ದ.ಆಫ್ರಿಕಾ ಕ್ರಿಕೆಟ್ ಮಂಡಳಿಯು ಎಬಿ ಡಿವಿಲಿಯರ್ಸ್‌ ಅವರಿಗೆ ಆಹ್ವಾನ ನೀಡಿದೆ ಎಂದು ವರದಿಯಾಗಿದೆ. 

ಇನ್ನು ಎಬಿ ಡಿವಿಲಿಯರ್ಸ್‌ ಉತ್ತಮ ಫಾರ್ಮ್‌ಗೆ ಮರಳಿದ ಬಳಿಕ ರಾಷ್ಟ್ರೀಯ ತಂಡಕ್ಕೆ ಮರಳುವುದಾಗಿ ಹೇಳಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಇತ್ತೀಚೆಗಷ್ಟೇ ಎಬಿ ಡಿವಿಲಿಯರ್ಸ್ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಲು ಮನಸ್ಸಿದೆ ಎಂದು ಹೇಳಿಕೊಂಡಿದ್ದರು.

ಆದರೆ ಈಗ ನಾನು ಅದ್ಭುತ ಫಾರ್ಮ್‌ನಲ್ಲಿದ್ದೇನೆ ಎನಿಸಿದರೆ. ಇತರರಿಗಿಂತ ನನ್ನ ಪ್ರದರ್ಶನ ಉತ್ತಮವಾಗಿದ್ದರೆ ಮಾತ್ರ ನಾನು ತಂಡದಲ್ಲಿ ಸ್ಥಾನ ಪಡೆಯಲು ಬಯಸುತ್ತೇನೆ. ನಾನು ತಂಡದಲ್ಲಿ ಸ್ಥಾನ ಪಡೆಯಲು ಯೋಗ್ಯ ಎನಿಸಿದರೆ ಮಾತ್ರ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳತ್ತೇನೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಅಭಿಪ್ರಾಯಪಟ್ಟಿದ್ದಾರೆ.

ಕೊರೋನಾ ಎಫೆಕ್ಟ್: ಡಿವಿಲಿಯರ್ಸ್‌ ಕ್ರಿಕೆಟ್‌ ಭವಿಷ್ಯ ಈಗ ಅತಂತ್ರ..!

ಕೆಲ ತಿಂಗಳುಗಳ ಹಿಂದಷ್ಟೇ ದಕ್ಷಿಣ ಆಫ್ರಿಕಾ ಕ್ರಿಕೆಟ್ ಕೋಚ್ ಮಾರ್ಕ್ ಬೌಷರ್, ಮುಂಬರುವ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ತಂಡಕ್ಕೆ ಲಭ್ಯವಿದ್ದರೆ ಎಬಿಡಿ ಹೆಸರನ್ನು ಪರಿಗಣಿಸಲಾಗುವುದು ಎಂದು ಹೇಳಿದ್ದರು. ಆದರೆ ಅದಕ್ಕೂ ಮುನ್ನ ಎಬಿಡಿ ಗಮನಾರ್ಹ ಪ್ರದರ್ಶನವನ್ನು ನೀಡಬೇಕು ಎಂದು ಹೇಳಿದ್ದರು. ಕೊರೋನಾ ವೈರಸ್‌ನಿಂದಾಗಿ ಎಲ್ಲಾ ಕ್ರೀಡಾಚಟುವಟಿಕೆಗಳು ಸ್ತಬ್ಧವಾಗಿವೆ. ಇನ್ನು ಐಪಿಎಲ್‌ನಲ್ಲಿ ಮಿಂಚುವ ವಿಶ್ವಾಸದಲ್ಲಿದ್ದ ಎಬಿಡಿಗೆ ಕೊರೋನಾ ನಿರಾಸೆ ಮಾಡಿದೆ. ಹೀಗಾಗಿ ಎಬಿಡಿ ಕಮ್‌ಬ್ಯಾಕ್ ಕನಸು ಕೂಡಾ ಅತಂತ್ರವಾಗಿದೆ 

ಆಧುನಿಕ ಕ್ರಿಕೆಟ್‌ನ ಸೂಪರ್‌ಸ್ಟಾರ್ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್‌ 2018ರ ಮೇನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಬದುಕಿಗೆ ನಿವೃತ್ತಿ ಹೇಳಿದ್ದರು. ವಿದಾಯಕ್ಕೂ ಮುನ್ನ ಎಬಿಡಿ ದಕ್ಷಿಣ ಆಫ್ರಿಕಾ ಪರ 114 ಟೆಸ್ಟ್, 228 ಏಕದಿನ ಹಾಗೂ 78 ಟಿ20 ಪಂದ್ಯಗಳನ್ನಾಡಿದ್ದಾರೆ.