Asianet Suvarna News Asianet Suvarna News

South Africa Squad ಟೀಂ ಇಂಡಿಯಾ ಎದುರಿನ ಟಿ20 ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ..!

* ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟಿ20 ಸರಣಿಗೆ ಕ್ಷಣಗಣನೆ

* 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಜೂನ್ 9ರಿಂದ ಆರಂಭ

* ಭಾರತ ಎದುರಿನ ಸರಣಿಗೆ 16 ಆಟಗಾರರನ್ನೊಳಗೊಂಡ ಬಲಿಷ್ಠ ಹರಿಣಗಳ ತಂಡ ಪ್ರಕಟ

Cricket South Africa Announce Squad For India 5 match T20Is kvn
Author
Bengaluru, First Published May 18, 2022, 9:41 AM IST | Last Updated May 18, 2022, 9:41 AM IST

ಜೋಹಾನ್ಸ್‌ಬರ್ಗ್‌(ಮೇ.18): ಜೂನ್‌ 9ರಿಂದ ಆರಂಭವಾಗಲಿರುವ ಭಾರತ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ 16 ಆಟಗಾರರ ದಕ್ಷಿಣ ಆಫ್ರಿಕಾ ತಂಡವನ್ನು (South Africa Cricket Squad) ಮಂಗಳವಾರ ಪ್ರಕಟಿಸಲಾಗಿದ್ದು, 21 ವರ್ಷದ ಯುವ ಬ್ಯಾಟರ್‌ ಟ್ರಿಸ್ಟಿಯನ್‌ ಟ್ರಬ್ಸ್‌ (Tristan Stubbs) ಮೊದಲ ಬಾರಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ತೆಂಬಾ ಬವುಮಾ ತಂಡವನ್ನು ಮುನ್ನಡೆಸಲಿದ್ದು, ಆಲ್ರೌಂಡರ್‌ ವೇಯ್ನ್‌ ಪಾರ್ನೆಲ್‌ (Wayne Parnell) 5 ವರ್ಷಗಳ ಬಳಿಕ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವೇಯ್ನ್‌ ಪಾರ್ನೆಲ್‌ 2017ರಲ್ಲಿ ಕೊನೆಯ ಬಾರಿಗೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಸ್ಥಾನ ಪಡೆದಿದ್ದರು.

21 ವರ್ಷದ ಟ್ರಿಸ್ಟಿಯನ್‌ ಟ್ರಬ್ಸ್‌, ಮಧ್ಯಮ ಕ್ರಮಾಂಕದ ಬಲಗೈ ಬ್ಯಾಟರ್ ಆಗಿದ್ದು, ಕಳೆದ ಆವೃತ್ತಿಯ ದಕ್ಷಿಣ ಆಫ್ರಿಕಾ ಟಿ20 ಚಾಲೆಂಜ್ ಕ್ರಿಕೆಟ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿದ್ದರು. ಗ್ಯಾಬೆಟ್ಸ್‌ ವಾರಿಯರ್ಸ್ ತಂಡದ ಪರ 7 ಇನಿಂಗ್ಸ್‌ಗಳನ್ನಾಡಿ 48.83ರ ಬ್ಯಾಟಿಂಗ್ ಸರಾಸರಿಯಲ್ಲಿ ಟ್ರಿಸ್ಟಿಯನ್‌ ಟ್ರಬ್ಸ್ 293 ರನ್ ಚಚ್ಚಿದ್ದರು. ಇದಷ್ಟೇ ಅಲ್ಲದೇ ಜಿಂಬಾಬ್ವೆ ಪ್ರವಾಸದಲ್ಲಿ ಟ್ರಿಸ್ಟಿಯನ್‌ ಟ್ರಬ್ಸ್ ದಕ್ಷಿಣ ಆಫ್ರಿಕಾ 'ಎ' ತಂಡದಲ್ಲಿ ಸ್ಥಾನ ಪಡೆದಿದ್ದರು ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ಕೂದಲೆಳೆ ಅಂತರದಲ್ಲಿ ಸೆಮೀಸ್‌ಗೇರುವ ಅವಕಾಶವನ್ನು ಕೈಚೆಲ್ಲಿದ್ದ ದಕ್ಷಿಣ ಆಫ್ರಿಕಾ ತಂಡವು, ಇದೀಗ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮತ್ತೊಂದು ಟಿ20 ವಿಶ್ವಕಪ್ ಟೂರ್ನಿಗೆ ಸಜ್ಜಾಗುತ್ತಿದೆ. ಕಳೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಬಳಿಕ ಹರಿಣಗಳ ಪಡೆಯು ಆಡುತ್ತಿರುವ ಮೊದಲ ಟಿ20 ಸರಣಿ ಇದಾಗಿದ್ದು, ಭಾರತದ ಕಠಿಣ ಸವಾಲು ಎದುರಿಸಲು ಸಜ್ಜಾಗಿದೆ. ಮುಂಬರುವ ಅಕ್ಟೋಬರ್‌ ಹಾಗೂ ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಸೂಪರ್ 12 ಹಂತದ ಗ್ರೂಪ್‌ನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ. ಇದೇ ಗುಂಪಿನಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಸಹ ಸ್ಥಾನ ಪಡೆದಿದ್ದು, ಇನ್ನೆರಡು ತಂಡಗಳು ಅರ್ಹತಾ ಸುತ್ತಿನಿಂದ ಸೂಪರ್ 12 ಹಂತಕ್ಕೆ ಲಗ್ಗೆಯಿಡಲಿವೆ.

ಇಂಡೋ-ಆಫ್ರಿಕಾ ಟಿ20 ಸರಣಿಗೆ ವೇಳಾಪಟ್ಟಿ ಪ್ರಕಟ, ಬೆಂಗಳೂರು ಕೊನೆಯ ಪಂದ್ಯಕ್ಕೆ ಆತಿಥ್ಯ

ಗಾಯಗೊಂಡ ದೀರ್ಘ ಸಮಯ ರಾಷ್ಟ್ರೀಯ ತಂಡದಿಂದ ಹೊರಗುಳಿದಿದ ವೇಗಿ ಏನ್ರಿಚ್‌ ನೋಕಿಯಾ (Anrich Nortje) ಕೂಡಾ ತಂಡಕ್ಕೆ ಮರಳಿದ್ದಾರೆ. ಮೊದಲ ಪಂದ್ಯ ನವದೆಹಲಿಯಲ್ಲಿ ನಡೆಯಲಿದ್ದು, ನಂತರದ ಪಂದ್ಯಗಳಿಗೆ ಕಟಕ್‌(ಜೂ.12), ವಿಶಾಖಪಟ್ಟಣಂ(ಜೂ.14), ರಾಜ್‌ಕೋಟ್‌(ಜೂ.17), ಬೆಂಗಳೂರು(ಜೂ.19) ಆತಿಥ್ಯ ವಹಿಸಲಿದೆ. ಐಪಿಎಲ್‌ನಲ್ಲಿ ಈಗಾಗಲೇ ಕಗಿಸೋ ರಬಾಡ, ಕ್ವಿಂಟನ್ ಡಿ ಕಾಕ್, ಏಯ್ಡನ್ ಮಾರ್ಕ್‌ರಮ್, ಡೇವಿಡ್ ಮಿಲ್ಲರ್ ಗಮನಾರ್ಹ ಪ್ರದರ್ಶನ ತೋರಿದ್ದು, ಅದೇ ಪ್ರದರ್ಶನವನ್ನು ಟೀಂ ಇಂಡಿಯಾ ಎದುರು ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಏನ್ರಿಚ್ ನೋಕಿಯಾ ಹಾಗೂ ವೇಯ್ನ್ ಪಾರ್ನೆಲ್ ದಕ್ಷಿಣ ಆಫ್ರಿಕಾ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. 

ತಂಡ: ತೆಂಬಾ ಬವುಮಾ(ನಾಯಕ), ಕ್ವಿಂಟನ್ ಡಿ ಕಾಕ್‌, ರೀಜಾ ಹೆಂಡ್ರಿಕ್ಸ್‌, ಹೆನ್ರಿಚ್ ಕ್ಲಾಸೆನ್‌, ಕೇಶವ್ ಮಹಾರಾಜ್‌, ಏಯ್ಡನ್ ಮಾರ್ಕ್ರಮ್‌, ಡೇವಿಡ್ ಮಿಲ್ಲರ್‌, ಲುಂಗಿ ಎನ್‌ಗಿಡಿ, ಏನ್ರಿಚ್ ನೋಕಿಯಾ, ವೇಯ್ನ್ ಪಾರ್ನೆಲ್‌, ಡ್ವೇನ್ ಪ್ರಿಟೋರಿಯಸ್‌, ಕಗಿಸೋ ರಬಾಡ, ತಬ್ರೀಜ್ ಶಮ್ಸಿ, ಟ್ರಿಸ್ಟಿಯನ್‌ ಸ್ಟಬ್ಸ್‌, ವ್ಯಾನ್ ಡರ್ ಡುಸ್ಸೆನ್‌, ಮಾರ್ಕೊ ಯಾನ್ಸನ್‌.

Latest Videos
Follow Us:
Download App:
  • android
  • ios