Asianet Suvarna News Asianet Suvarna News

Cricket Match-Fixing ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ವಂಚನೆಯಲ್ಲ: ಕರ್ನಾಟಕ ಹೈಕೋರ್ಟ್ ತೀರ್ಪು

* ಕೆಪಿಎಲ್‌ ಮ್ಯಾಚ್‌ ಫಿಕ್ಸಿಂಗ್ ಕುರಿತಂತೆ ಕರ್ನಾಟಕ ಹೈಕೋರ್ಟ್ ಮಹತ್ತರ ತೀರ್ಪು

* ಮ್ಯಾಚ್‌ ಫಿಕ್ಸಿಂಗ್ ಆರೋಪಿತರ ಮೇಲಿನ ಎಫ್‌ಐಆರ್ ರದ್ದು ಪಡಿಸಿದ ಹೈಕೋರ್ಟ್

* ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ IPC ಸೆಕ್ಷನ್ 420ರ ಅಡಿಯಲ್ಲಿ  ವಂಚನೆ ಅಪರಾಧವೆಂದು ಪರಿಗಣಿಸಲಾಗದು

Cricket match fixing is not cheating Karnataka High Court quashes case against KPL players and team official kvn
Author
Bengaluru, First Published Jan 22, 2022, 2:18 PM IST

ಬೆಂಗಳೂರು(ಜ.22): 2019ರ ಆಗಸ್ಟ್‌ನಲ್ಲಿ ನಡೆದ ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್‌) (Karnataka Premier League) ಟೂರ್ನಿಯಲ್ಲಿ ನಡೆದಿದೆ ಎನ್ನಲಾದ ಮ್ಯಾಚ್‌ ಫಿಕ್ಸಿಂಗ್ (Match Fixing) ಪ್ರಕರಣದ ಕುರಿತಂತೆ ಇದೀಗ ಕರ್ನಾಟಕ ಹೈಕೋರ್ಟ್‌ (Karnataka High Court) ನೀಡಿದ ತೀರ್ಪು ಬೆಂಗಳೂರು ನಗರ ಪೊಲೀಸರ ಪಾಲಿಗೆ ಹಿನ್ನೆಡೆಯಾಗಿದೆ. ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಭಾರತೀಯ ದಂಡ ಸಂಹಿತೆ(IPC) ಸೆಕ್ಷನ್ 420ರ ಅಡಿಯಲ್ಲಿ  ವಂಚನೆ ಅಪರಾಧವೆಂದು ಪರಿಗಣಿಸಲಾಗದು ಎಂದು ಕರ್ನಾಟಕ ಉಚ್ಛ ನಾಯಾಲಯ ಅಭಿಪ್ರಾಯಪಟ್ಟಿದೆ. ಇದಷ್ಟೇ ಅಲ್ಲದೇ ಕೆಪಿಎಲ್‌ ಆಟಗಾರರು ಹಾಗೂ ಇತರರ ವಿರುದ್ದ ದಾಖಲಾಗಿದ್ದ ಎಫ್‌ಐಆರ್‌ (FIR) ರದ್ದುಪಡಿಸಿ ಆದೇಶ ಹೊರಡಿಸಿದೆ.

ಕರ್ನಾಟಕ ಕ್ರಿಕೆಟ್ ತಂಡದ (Karnataka Cricket Team) ಮಾಜಿ ನಾಯಕ ಸಿ.ಎಂ. ಗೌತಮ್ (CM Gautam), ಅಬ್ರಾರ್ ಖಾಜಿ ಉತ್ತರ ಪ್ರದೇಶ ಮೂಲದ ಬುಕ್ಕಿ ಅಮಿತ್ ಮಾವಿ ಹಾಗೂ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಆಶ್ಫಾಕ್‌ ಅಲಿ ಥಾರಾ ಅವರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ಈ ಮಹತ್ತರವಾದ ತೀರ್ಪನ್ನು ನೀಡಿದೆ. 

ಒಂದು ವೇಳೆ ಆಟಗಾರರು ಮ್ಯಾಚ್ ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡಿದ್ದರೆ, ಸಹಜವಾಗಿಯೇ ಕ್ರೀಡಾ ಪ್ರಿಯರಿಗೆ ವಂಚನೆ ಮಾಡಿದ ಭಾವನೆ ಮೂಡುತ್ತದೆ. ಹಾಗಂತ ಈ ಭಾವನೆ ಅಪರಾಧಕ್ಕೆ ಕಾರಣವಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಮ್ಯಾಚ್ ಫಿಕ್ಸಿಂಗ್ ಎನ್ನುವುದು ಆಟಗಾರರನ ಅಪ್ರಾಮಾಣಿಕತೆ, ಅಶಿಸ್ತು ಹಾಗೂ ಮಾನಸಿಕ ಭ್ರಷ್ಟಾಚಾರವನ್ನು ತೋರಿಸುತ್ತದೆ. ಈ ಸಂಬಂಧ ನಿಯಮಾನುಸಾರ ಆಟಗಾರರ ಮೇಲೆ ಬಿಸಿಸಿಐ ಶಿಸ್ತುಕ್ರಮ ಜರುಗಿಸಬಹುದಾಗಿದೆ. ಆದರೆ ಇದನ್ನು ಐಪಿಸಿ ಸೆಕ್ಷನ್‌ 420ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲು ಅವಕಾಶವಿಲ್ಲ ಎಂದು ಕೋರ್ಟ್ ಹೇಳಿದೆ.

2018 ಹಾಗೂ 2019ರಲ್ಲಿ ನಡೆದ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಿದ ಆರೋಪದಡಿ ಮೂವರು ಆಟಗಾರರು ಹಾಗೂ ತಂಡದ ಸಿಬ್ಬಂದಿಗಳನ್ನು ಬೆಂಗಳೂರು ಪೊಲೀಸರು 2019ರಲ್ಲಿ ಬಂಧಿಸಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್‌ನಂತೆಯೇ ಕರ್ನಾಟಕ ಪ್ರೀಮಿಯರ್ ಲೀಗ್ ಕ್ರೀಡಾಕೂಟವು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ಈ ಸಂಬಂಧ ಆಟಗಾರರನ್ನು ವಶಕ್ಕೆ ಪಡೆದ ಪೊಲೀಸರು, ಕೆಪಿಎಲ್ (KPL Tournament) ಟೂರ್ನಿಯ ಕೆಲವು ಪಂದ್ಯಗಳು ಮ್ಯಾಚ್ ಫಿಕ್ಸಿಂಗ್ ಆಗಿದ್ದವು ಹಾಗೂ ಇದರಲ್ಲಿ ಆಟಗಾರರು ಹಾಗೂ ತಂಡದ ಸಿಬ್ಬಂದಿಗಳು ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರು.

ಸಿ.ಎಂ. ಗೌತಮ್ ಹಾಗೂ ಇತರರ ಮೇಲೆ ಕ್ರೈಂ ಬ್ರಾಂಚ್ ಪೊಲೀಸರು 2019ರಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು, ತನಿಖೆಯನ್ನು ಆರಂಭಿಸಿದ್ದರು. ಇವರ ಮೇಲೆ ನಗರದ ಕಬ್ಬನ್‌ ಪಾರ್ಕ್‌ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಈ ಕುರಿತಂತೆ ಅರ್ಜಿದಾರರ ಪರ ವಕೀಲರು, ಇನ್ಯಾವುದೋ ಕೇಸ್‌ನ ವಿಚಾರಣೆಯಲ್ಲಿ ನೀಡಿದ ತಪ್ಪೊಪ್ಪಿಗೆ ಹೇಳಿಕೆಯನ್ನು ಆಧರಿಸಿ ಎಫ್‌ಐಆರ್ ದಾಖಲಿಸಲು ಸಾಧ್ಯವಿಲ್ಲ. ಮ್ಯಾಚ್ ಫಿಕ್ಸಿಂಗ್ ಅಪರಾಧವೆಂದು ಯಾವ ಕಾನೂನಿನ ಅಡಿಯು ಗುರುತಿಸಿಲ್ಲ. ಹೀಗಾಗಿ ಅರ್ಜಿದಾರರ ವಿರುದ್ದ ಐಪಿಸಿ ಸೆಕ್ಷನ್‌ 420ರ ಅಡಿಯಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸುವಂತಿಲ್ಲ ಎಂದು ವಾದಿಸಿದ್ದರು.  

KPL ಫಿಕ್ಸಿಂಗ್‌: 16 ಮಂದಿ ವಿರುದ್ಧ ಚಾರ್ಜ್ ಶೀಟ್

2019ರ ಆಗಸ್ಟ್ 22ರಂದು ನಡೆದ ಕೆಪಿಎಲ್ ಟೂರ್ನಿಯ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಬೆಳಗಾವಿ ಟಸ್ಕರ್ಸ್‌ ನಡುವಿನ ಪಂದ್ಯದ ವೇಳೆ ಓವರ್‌ವೊಂದರಲ್ಲಿ 10ಕ್ಕೂ ಹೆಚ್ಚು ರನ್‌ ನೀಡಿದರೆ 7.5 ಲಕ್ಷ ರುಪಾಯಿ ನೀಡುವುದಾಗಿ ಗೌತಮ್‌ಗೆ ಅಶ್ಫಕ್ ಆಫರ್‌ ನೀಡಿದ್ದರು. ಆಗ ಗೌತಮ್ ನೆಟ್ ಪ್ರಾಕ್ಟೀಸ್ ವೇಳೆ ತಮ್ಮ ತಂಡದ ಸ್ಪಿನ್ನರ್ ಅಬ್ರಾರ್ ಖಾಜಿಗೆ 10ಕ್ಕೂ ಹೆಚ್ಚು ರನ್ ಬಿಟ್ಟುಕೊಡಲು ಮನವೊಲಿಸಿ ಮುಂಗಡವಾಗಿ 2.5 ಲಕ್ಷ ರುಪಾಯಿ ಹಣ ನೀಡಿದ್ದರು. ಅದರಂತೆ ಪಂದ್ಯದ ವೇಳೆ ಖಾಜಿ ಪಂದ್ಯ 7ನೇ ಓವರ್‌ನಲ್ಲಿ 2 ವೈಡ್ ಸಹಿತ ಒಟ್ಟು 11 ರನ್‌ ನೀಡಿದ್ದರು.

Follow Us:
Download App:
  • android
  • ios