* ದಿಗ್ಗಜ ಕ್ರಿಕೆಟಿಗ ಶೇನ್‌ ವಾರ್ನ್‌ ಅವರಿಗೆ ಎಂಸಿಜಿಯಲ್ಲಿ ಭಾವಪೂರ್ಣ ಶ್ರದ್ದಾಂಜಲಿ* ಶೇನ್‌ ವಾರ್ನ್‌ ಶ್ರದ್ದಾಂಜಲಿ ಸಭೆಯಲ್ಲಿ 5 ಲಕ್ಷಕ್ಕೂ ಅಧಿಕ ಮಂದಿ ಭಾಗಿ* 52ನೇ ವಯಸ್ಸಿಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದ ವಾರ್ನ್‌

ಮೆಲ್ಬರ್ನ್(ಮಾ.31)‌: ಕಳೆದ ತಿಂಗಳು ಹೃದಯಾಘಾತದಿಂದ ಮೃತಪಟ್ಟ ಮಾಜಿ ಕ್ರಿಕೆಟಿಗ, ಸ್ಪಿನ್‌ ದಂತಕಥೆ ಶೇನ್‌ ವಾರ್ನ್‌ಗೆ (Shane Warne) ಆಸ್ಪ್ರೇಲಿಯಾದ ಮೆಲ್ಬರ್ನ್‌ ಕ್ರಿಕೆಟ್‌ ಮೈದಾನ (ಎಂಸಿಜಿ)ದಲ್ಲಿ ಬುಧವಾರ ಸಾವಿರಾರು ಮಂದಿ ಅಭಿಮಾನಿಗಳು, ಕುಟುಂಬ ಸದಸ್ಯರು, ಸ್ನೇಹಿತರು ಶ್ರದ್ಧಾಂಜಲಿ ಸಲ್ಲಿಸಿದರು. ಅಂದಾಜು 5,00,000 ಮಂದಿ ಎಂಸಿಜಿಯಲ್ಲಿ ನೆರೆದಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಆಸ್ಪ್ರೇಲಿಯಾದ ಪ್ರಧಾನಿ ಸ್ಕಾಟ್‌ ಮಾರಿಸ್ಸನ್‌(), ಖ್ಯಾತ ಗಾಯಕ ಎಲ್ಟನ್‌ ಜಾನ್‌, ದಿಗ್ಗಜ ಗಾಲ್ಫ್ ಆಟಗಾರ ಗ್ರೆಗ್‌ ನಾರ್ಮನ್‌, ಸರ್ಫಿಂಗ್‌ ಚಾಂಪಿಯನ್‌ ಕೆಲ್ಲಿ ಸ್ಲೇಟರ್‌, ವಿಂಡೀಸ್‌ನ ದಿಗ್ಗಜ ಕ್ರಿಕೆಟಿಗ ಬ್ರಿಯಾನ್‌ ಲಾರಾ (Brian Lara), ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಮಾಜಿ ನಾಯಕ ಮೈಕಲ್‌ ವಾನ್‌, ನಾಸಿರ್ ಹುಸೈನ್ (Nasser Hussain) ಆಸ್ಪ್ರೇಲಿಯಾದ ಮಾಜಿ ಕ್ರಿಕೆಟಿಗರು (Australian Cricketer) ಸೇರಿ ನೂರಾರು ಗಣ್ಯರು ವಿಕ್ಟೋರಿಯಾ ಸರ್ಕಾರ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮೆಲ್ಬರ್ನ್‌ ಮೂಲದ ಶೇನ್ ವಾರ್ನ್‌ ತಮ್ಮ ತವರು ಮೈದಾನ ಎಂಸಿಜಿಯಲ್ಲಿ (Melbourne Cricket Ground) 2006ರಲ್ಲಿ 700ನೇ ಟೆಸ್ಟ್‌ ವಿಕೆಟ್‌ ಮೈಲಿಗಲ್ಲು ತಲುಪಿದ್ದರು. ಕಾರ್ಯಕ್ರಮದ ವೇಳೆ ಅವರ ಕ್ರಿಕೆಟ್‌ ಬದುಕಿನ ಅನೇಕ ಮೈಲಿಗಲ್ಲುಗಳನ್ನು ನೆನಪು ಮಾಡಿಕೊಳ್ಳಲಾಯಿತು.

ವಾರ್ನ್‌ ಸ್ಟ್ಯಾಂಡ್‌ ಅನಾವರಣ: ಎಂಸಿಜಿ ಮೈದಾನದಲ್ಲಿನ ಪ್ರೇಕ್ಷಕರ ಸ್ಟ್ಯಾಂಡ್‌ವೊಂದಕ್ಕೆ ಶೇನ್‌ ವಾರ್ನ್‌ ಹೆಸರನ್ನು ಇಡಲಾಗಿದ್ದು, ವಾರ್ನ್‌ರ ಮೂವರು ಮಕ್ಕಳಾದ ಬ್ರೂಕ್‌, ಸಮ್ಮರ್‌ ಹಾಗೂ ಜ್ಯಾಕ್ಸನ್‌ ಸ್ಟ್ಯಾಂಡ್‌ ಅನ್ನು ಅನಾವರಣಗೊಳಿಸಿದರು. ಮೈದಾನದ ಆವರಣದಲ್ಲಿರುವ ವಾರ್ನ್‌ರ ಪ್ರತಿಮೆ ಮುಂದೆ ಅಭಿಮಾನಿಗಳು ಬಿಯರ್‌ ಬಾಟಲಿಗಳು, ಸಿಗರೇಟ್‌ ಪ್ಯಾಕ್‌ಗಳನ್ನು ಇಟ್ಟು ತಮ್ಮ ನೆಚ್ಚಿನ ಕ್ರಿಕೆಟಿಗನಿಗೆ ವಿದಾಯ ಹೇಳಿದರು.

ಎಸ್‌ಸಿಜಿಯಲ್ಲೂ ವಾರ್ನ್‌ ನೆನಪು

ಸಿಡ್ನಿ ಕ್ರಿಕೆಟ್‌ ಮೈದಾನ(ಎಸ್‌ಸಿಜಿ)ದ ಬೌಂಡರಿ ಗೆರೆ ಬಳಿ ಅವರು ಅಲ್ಲಿ ಪಡೆದ 64 ಟೆಸ್ಟ್‌ ವಿಕೆಟ್‌ಗಳ ಸ್ಕೋರ್‌ ಪಟ್ಟಿಯನ್ನು ಇರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮೆಲ್ಬರ್ನ್‌ನಲ್ಲಿ ಶೇನ್‌ ವಾರ್ನ್‌ ಅಂತ್ಯಕ್ರಿಯೆ

ಮೆಲ್ಬರ್ನ್‌: ಇತ್ತೀಚೆಗೆ ನಿಧನರಾದ ಆಸ್ಪ್ರೇಲಿಯಾದ ಸ್ಪಿನ್‌ ದಂತಕತೆ ಶೇನ್‌ ವಾರ್ನ್‌ರ ಅಂತ್ಯಕ್ರಿಯೆಯನ್ನು ಭಾನುವಾರ(ಮಾ.20) ಮೆಲ್ಬರ್ನ್‌ನಲ್ಲಿ ಅವರ ಕುಟುಂಬ ನೆರವೇರಿಸಿತ್ತು. ಮಾರ್ಚ್‌ 4ರಂದು ಥಾಯ್ಲೆಂಡ್‌ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದ 52 ವರ್ಷದ ವಾರ್ನ್‌ರ ಮೃತದೇಹವನ್ನು ವಾರದ ಬಳಿಕ ಆಸ್ಪ್ರೇಲಿಯಾಕ್ಕೆ ತರಲಾಗಿತ್ತು. ಭಾನುವಾರ ಖಾಸಗಿಯಾಗಿ ನಡೆದಿದ್ದ ಅಂತ್ಯಕ್ರಿಯೆ ವೇಳೆ ವಾರ್ನ್‌ರ ಮೂವರು ಮಕ್ಕಳು, ಪೋಷಕರು, ಇತರ ಕುಟುಂಬಸ್ಥರು, ಆಪ್ತ ಸ್ನೇಹಿತರು, ಮಾಜಿ ಕ್ರಿಕೆಟಿಗರಾದ ಆ್ಯಲೆನ್‌ ಬಾರ್ಡರ್‌, ಮಾರ್ಕ್ ಟೇಲರ್‌, ಮೈಕಲ್‌ ಕ್ಲಾರ್ಕ್, ಆ್ಯಂಡ್ರೂ ಸೈಮಂಡ್ಸ್‌ ಸೇರಿದಂತೆ ಸುಮಾರು 80 ಮಂದಿ ಉಪಸ್ಥಿತರಿದ್ದರು. 

ಶೇನ್‌ ವಾರ್ನ್‌ ಕೋಣೆ, ಟವೆಲ್‌ನಲ್ಲಿ ರಕ್ತದ ಕಲೆ ಪತ್ತೆಯಾಗಿತ್ತು..!

ಬ್ಯಾಂಕಾಕ್‌: ಆಸ್ಪ್ರೇಲಿಯಾದ ಕ್ರಿಕೆಟ್‌ ದಂತಕತೆ ಶೇನ್‌ ವಾರ್ನ್‌ ಅವರ ಕೋಣೆ ಹಾಗೂ ಸ್ನಾನದ ಟವೆಲ್‌ನಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ ಎಂದು ಥಾಯ್ಲೆಂಡ್‌ ಪೊಲೀಸರು ಮಾಹಿತಿ ನೀಡಿದ್ದರು. ‘ವಾರ್ನ್‌ ಅವರ ಕೋಹ್‌ ಸಾಮಯಿ ದ್ವೀಪದಲ್ಲಿರುವ ವಿಲ್ಲಾದಲ್ಲಿ ಪರಿಶೀಲನೆ ವೇಳೆ ರಕ್ತದ ಕಲೆಗಳು ಕಂಡುಬಂದಿವೆ. ಹೃದಯಾಘಾತ (Heart Attack) ವೇಳೆ ತೀವ್ರ ಕೆಮ್ಮಿನಿಂದಾಗಿ ರಕ್ತಸ್ರಾವವಾಗಿದೆ’ ಎಂದು ಅವರು ತಿಳಿಸಿದ್ದಾರೆ. 

Shane Warne ದಿಗ್ಗಜ ಕ್ರಿಕೆಟಿಗ ವಾರ್ನ್‌ ಅಂತಿಮ ವಿದಾಯದಲ್ಲಿ ಹಲವು ಕ್ರಿಕೆಟಿಗರು ಭಾಗಿ

ಇನ್ನು, ವಾರ್ನ್‌ ಸಾವಿಗೂ ಎರಡು ದಿನ ಮುನ್ನವಷ್ಟೇ ಡಯೆಟ್‌ ಮುಗಿಸಿದ್ದರು ಎಂದು ಅವರ ಮ್ಯಾನೇಜರ್‌ ಮಾಹಿತಿ ನೀಡಿದ್ದರು. ‘ವಾರ್ನ್‌ ದೇಹದ ತೂಕ ಇಳಿಸಲು 14 ದಿನಗಳಿಂದ ಡಯೆಟ್‌ ಮಾಡುತ್ತಿದ್ದರು. ನಿಧನದ 2 ದಿನ ಮೊದಲು ಡಯೆಟ್‌ ನಿಲ್ಲಿಸಿದ್ದರು’ ಎಂದಿದ್ದರು.