* ಆದಿವಾಸಿ ಮಕ್ಕಳ ನೆರವಿಗೆ ನಿಂತ ಮಾಸ್ಟರ್ ಬ್ಲಾಸ್ಟರ್ ತೆಂಡುಲ್ಕರ್* ಸಚಿನ್ ತೆಂಡುಲ್ಕರ್ ಫೌಂಡೇಶನ್‌ನಿಂದ ನೆರವಿನ ಹಸ್ತ* ಮಧ್ಯ ಪ್ರದೇಶದ ಕುಗ್ರಾಮವಾಗಿರುವ ಸೆವಾನಿಯಾ ಎನ್ನುವ ಹಳ್ಳಿಗೆ ಭೇಟಿ
ಭೂಪಾಲ್(ನ.17): ಟೀಂ ಇಂಡಿಯಾ (Team India) ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ (Sachin Tendulkar) ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್ ಅವರನ್ನು ಭೇಟಿಯಾಗಿ ಹಲವು ಸಾಮಾಜಿಕ ಅಭಿವೃದ್ದಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಪೈಕಿ ಆದಿವಾಸಿ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಮಹತ್ವದ ಕೆಲಸಕ್ಕೆ ಕ್ರಿಕೆಟ್ ದೇವರೆಂದೇ ಕರೆಯಲ್ಪಡುವ ತೆಂಡುಲ್ಕರ್ ಕೈಜೋಡಿಸಿದ್ದಾರೆ.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಮಧ್ಯಪ್ರದೇಶದಾದ್ಯಂತ ತಮ್ಮ ಸಂಸ್ಥೆಯೊಂದಿಗೆ ಸಹಭಾಗಿತ್ವ ಹೊಂದಿರುವ ಸಂಸ್ಥೆಗಳು ನಡೆಸುತ್ತಿರುವ ಸಮಾಜಮುಖಿ ಕೆಲಸಗಳನ್ನು ವೀಕ್ಷಿಸಿದರು. ಕ್ರಿಕೆಟ್ ದೇವರೆಂದೇ ಹೆಸರಾದ ಶ್ರೀಯುತ ಸಚಿನ್ ತೆಂಡುಲ್ಕರ್ ಅವರನ್ನು ಆತ್ಮೀಯವಾಗಿ ಮಧ್ಯಪ್ರದೇಶಕ್ಕೆ ಸ್ವಾಗತಿಸುತ್ತಿದ್ದೇನೆ. ನಮ್ಮ ನಿವಾಸದಲ್ಲಿ ಮಾಸ್ಟರ್ ಬ್ಲಾಸ್ಟರ್ ಜತೆ ಒಳ್ಳೆಯ ಮಾತುಕತೆ ನಡೆಯಿತು. ನಿಮ್ಮನ್ನು ಇಲ್ಲಿ ಭೇಟಿಯಾಗಿರುವುದಕ್ಕೆ ಸಂತಸವಾಗುತ್ತಿದೆ. ನಿಮ್ಮ ಭವಿಷ್ಯದ ಕನಸುಗಳು ಉಜ್ವಲವಾಗಲಿ ಎಂದು ಹಾರೈಸುತ್ತೇನೆಂದು ಶಿವರಾಜ್ ಸಿಂಗ್ ಚೌಹ್ಹಾಣ್ (Shivraj Singh Chouhan) ಟ್ವೀಟ್ ಮಾಡಿದ್ದಾರೆ.
ಸಚಿನ್ ತೆಂಡುಲ್ಕರ್ ನೇತೃತ್ವದಲ್ಲಿ ಹಲವು ಸಂಘ-ಸಂಸ್ಥೆಗಳು ಮಧ್ಯ ಪ್ರದೇಶದ ಹಲವು ಭಾಗಗಳಲ್ಲಿ ವಿವಿಧ ಸಮಾಜ ಸೇವೆಗಳನ್ನು ನಡೆಸಿಕೊಂಡು ಬರುತ್ತಿವೆ. ಕೋವಿಡ್ ಬಂದ ಬಳಿಕ ಈ ರೀತಿಯ ಚಟುವಟಿಕೆಗಳಿಂದ ತೆಂಡುಲ್ಕರ್ ದೈಹಿಕ ಅಂತರವನ್ನು ಕಾಯ್ದುಕೊಂಡಿದ್ದರು. ಇದೀಗ ಮತ್ತೆ ಫಲಾನುಭವಿಗಳನ್ನು ಭೇಟಿಯಾಗಿ ಯೋಜನೆಗಳ ಕುರಿತಂತೆ ಮಾಹಿತಿಗಳನ್ನು ಪಡೆದಿದ್ದಾರೆ.
ಇದೀಗ ಕೋವಿಡ್ (COVID 19) ಪರಿಸ್ಥಿತಿ ನಿಯಂತ್ರಣದಲ್ಲಿರುವ ಹಿನ್ನೆಲೆಯಲ್ಲಿ ಮಧ್ಯ ಪ್ರದೇಶದ ಕುಗ್ರಾಮವಾಗಿರುವ ಸೆವಾನಿಯಾ ಎನ್ನುವ ಹಳ್ಳಿಗೆ ಸಚಿನ್ ತೆಂಡುಲ್ಕರ್ ಭೇಟಿ ನೀಡಿದ್ದಾರೆ. 'ಸೇವಾ ಕುಟೀರ್ಸ್' ಹೆಸರಿನ ಯೋಜನೆಯ ಮೂಲಕ ಮಕ್ಕಳಿಗೆ ಪೌಷ್ಠಿಕಾಂಶಭರಿತ ಆಹಾರ, ಗುಣಮಟ್ಟದ ಶಿಕ್ಷಣ ಹಾಗೂ ಆಟೋಟ ಸ್ಪರ್ಧೆಗಳಿಗೆ ಅವಕಾಶ ನೀಡಲಾಗಿದೆ. ಸಚಿನ್ ತೆಂಡುಲ್ಕರ್ ಫೌಂಡೇಶನ್ ಸಹಯೋಗದಲ್ಲಿ ಪರಿವಾರ್ ಎನ್ನುವ ಸಂಘಸಂಸ್ಥೆಯು ಇಂತಹ ಬುಡಕಟ್ಟು ಮಕ್ಕಳ ಶ್ರೇಯಾಭಿವೃದ್ದಿಗೆ ಶ್ರಮಿಸುತ್ತಿದೆ.
Sachin Tendulkar Debut; ಕ್ರಿಕೆಟ್ ದೇವರ ಅಂತಾರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆಗೆ 32 ವರ್ಷದ ಸಂಭ್ರಮ!
ಸೇವಾ ಕುಟೀರ್ಸ್‌ಗೆ ಭೇಟಿ ನೀಡಿದ ಕುರಿತಂತೆ ಟ್ವೀಟ್ ಮಾಡಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ಮೈದಾನದಲ್ಲಿ ಹಾಗೂ ಮೈದಾನದಾಚೆ ಭಾರತವನ್ನು ಪ್ರತಿನಿಧಿಸಲು ಸಿಕ್ಕಿದ್ದು ನನ್ನ ಸೌಭಾಗ್ಯ. ಪರಿವಾರ್ ಸಹಯೋಗದಲ್ಲಿ ನಿರ್ಮಿಸಿರುವ ಉಚಿತ ವಸತಿ ಶಾಲೆಗಳು ಹಾಗೂ ಸೇವಾ ಕುಟೀರಗಳಿಗೆ ಭೇಟಿ ನೀಡಿ ಸಂತೋಷವಾಯಿತು. ನಮ್ಮ ಮಕ್ಕಳು ಈ ಜಗತ್ತನ್ನು ಮತ್ತಷ್ಟು ಉತ್ತಮ ಹಾಗೂ ಪ್ರಕಾಶಮಾನವಾಗಿಸಬಲ್ಲರು. ನಾವೆಲ್ಲರೂ ಅವರಿಗೆ ಸಮಾನ ಅವಕಾಶಗಳನ್ನು ಒದಗಿಸಿಕೊಡಬೇಕಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಸಚಿನ್ ತೆಂಡುಲ್ಕರ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ 32 ವರ್ಷ ಭರ್ತಿ:
ಕ್ರಿಕೆಟ್ ಒಂದು ಧರ್ಮವಾದರೆ, ಸಚಿನ್ ತೆಂಡುಲ್ಕರ್ ಆ ಧರ್ಮದ ದೇವರು ಎನ್ನುವ ಮಾತು ಜನಜನಿತವಾಗಿದೆ. ಇದೀಗ ಸಚಿನ್ ತೆಂಡುಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ 32 ವರ್ಷಗಳು ಕಳೆದಿವೆ. ನವೆಂಬರ್ 15, 1989ರಲ್ಲಿ ಪಾಕಿಸ್ತಾನ ವಿರುದ್ದ ಕರಾಚಿ ಟೆಸ್ಟ್‌ನಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.
ಕೇವಲ 16 ವರ್ಷದವರಿದ್ದಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಸಚಿನ್ ಮುಂದೊಂದು ದಿನ ಇಡೀ ಕ್ರಿಕೆಟ್ ಜಗತ್ತನ್ನೇ ಆಳುತ್ತಾರೆಂದು ಯಾರೂ ಸಹ ಊಹೆಯನ್ನೂ ಮಾಡಿರಲಿಲ್ಲ. 2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದಾಗ ತೆಂಡುಲ್ಕರ್ ನೂರಾರು ದಾಖಲೆಯ ಒಡೆಯರಾಗಿ ಬೆಳೆದು ನಿಂತಿದ್ದರು. ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕ ಬಾರಿಸಿದ ಬ್ಯಾಟರ್, 200 ಟೆಸ್ಟ್ ಪಂದ್ಯಗಳನ್ನಾಡಿದ ಏಕೈಕ ಕ್ರಿಕೆಟರ್ ಸೇರಿದಂತೆ ಇನ್ನೂ ಹತ್ತು ಹಲವು ದಾಖಲೆಗಳು ಸಚಿನ್ ತೆಂಡುಲ್ಕರ್ ಹೆಸರಿನಲ್ಲಿ ಅಚ್ಚಳಿಯದೇ ಉಳಿದಿವೆ.
