ಬೆಂಗಳೂರು[ಫೆ.27]: ಭಾರತದ ಗಮನ ಸಂಪೂರ್ಣವಾಗಿ ವಿಶ್ವಕಪ್‌ ಮೇಲಿದೆ. ಆದರೆ ಬುಧವಾರದ ಮಟ್ಟಿಗೆ ಆಸ್ಪ್ರೇಲಿಯಾ ವಿರುದ್ಧ ಟಿ20 ಸರಣಿ ಸೋಲನ್ನು ತಪ್ಪಿಸಿಕೊಳ್ಳುವುದು ವಿರಾಟ್‌ ಕೊಹ್ಲಿ ತಂಡದ ಗುರಿಯಾಗಿದೆ. ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2ನೇ ಟಿ20 ಪಂದ್ಯ ನಡೆಯಲಿದ್ದು, 2 ಪಂದ್ಯಗಳ ಸರಣಿಯಲ್ಲಿ 0-1ರಿಂದ ಹಿಂದಿರುವ ಭಾರತ, ಸರಣಿ ಡ್ರಾ ಮಾಡಿಕೊಳ್ಳಲು ಎದುರು ನೋಡುತ್ತಿದೆ.

2015-16ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ಸೋಲುಂಡ ಬಳಿಕ, ಭಾರತ ತಂಡ ತವರಿನಲ್ಲಿ ಟಿ20 ಸರಣಿ ಸೋತಿಲ್ಲ. ಆ ದಾಖಲೆಯನ್ನು ಉಳಿಸಿಕೊಳ್ಳಲು ವಿರಾಟ್‌ ಪಡೆ ಕಾತರಿಸುತ್ತಿದೆ. ವಿಶ್ವಕಪ್‌ ತಂಡದಲ್ಲಿ ಸ್ಥಾನ ಗಿಟ್ಟಿಸಲು ಶತಾಯಗತಾಯ ಪ್ರಯತ್ನ ನಡೆಸುತ್ತಿರುವ ಕೆ.ಎಲ್‌.ರಾಹುಲ್‌, ತವರು ಮೈದಾನದಲ್ಲಿ ಅಬ್ಬರಿಸಲು ಉತ್ಸುಕರಾಗಿದ್ದಾರೆ. ರಿಷಭ್‌ ಪಂತ್‌ ಮೇಲೂ ನಿರೀಕ್ಷೆ ಇರಿಸಲಾಗಿದೆ. ಕಳೆದ ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದ ಶಿಖರ್‌ ಧವನ್‌ ಈ ಪಂದ್ಯದಲ್ಲಿ ಕಣಕ್ಕಿಳಿದು, ರೋಹಿತ್‌ ಶರ್ಮಾಗೆ ವಿಶ್ರಾಂತಿ ಸಿಗುವ ಸಾಧ್ಯತೆ ಇದೆ.

ಉಮೇಶ್‌ ಯಾದವ್‌ ಬದಲಿಗೆ ಸಿದ್ಧಾರ್ಥ್ ಕೌಲ್‌ ಇಲ್ಲವೇ ಆಲ್ರೌಂಡರ್‌ ವಿಜಯ್‌ ಶಂಕರ್‌ರನ್ನು ಆಡಿಸುವ ನಿರೀಕ್ಷೆ ಇದೆ. ಧೋನಿ ಸ್ಟ್ರೈಕ್’ರೇಟ್‌ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಮತ್ತೊಂದೆಡೆ ಆಸ್ಪ್ರೇಲಿಯಾ ತಂಡದಲ್ಲಿ ಯಾವುದೇ ಬದಲಾವಣೆ ನಿರೀಕ್ಷೆ ಇಲ್ಲ. 2008ರ ಬಳಿಕ ಮೊದಲ ಬಾರಿಗೆ ಭಾರತ ವಿರುದ್ಧ ಟಿ20 ಸರಣಿ ಗೆಲ್ಲಲು ಕಾಂಗರೂ ಪಡೆ ಕಾತರಿಸುತ್ತಿದೆ.

ಪಿಚ್‌ ರಿಪೋರ್ಟ್‌

ಬೆಂಗಳೂರು ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ರನ್‌ ಹೊಳೆ ನಿರೀಕ್ಷೆ ಮಾಡಬಹುದು ಎಂದು ಕೆಎಸ್‌ಸಿಎ ಅಧಿಕಾರಿಗಳು ತಿಳಿಸಿದ್ದಾರೆ. ಮೊದಲು ಬ್ಯಾಟ್‌ ಮಾಡುವ ತಂಡ 180-190 ರನ್‌ ಗಳಿಸಿದರೆ ಅಚ್ಚರಿಯಿಲ್ಲ. ಪಂದ್ಯಕ್ಕೆ ನಿಗದಿ ಪಡಿಸಿರುವ ಪಿಚ್‌ ಕಳೆದ 2 ತಿಂಗಳಿಂದ ಬಳಕೆಯಾಗಿಲ್ಲ. ಇಬ್ಬನಿ ಬೀಳುವ ಸಾಧ್ಯತೆ ಕಡಿಮೆ. ಉಭಯ ತಂಡಗಳ ನಡುವೆ ಭಾರೀ ಪೈಪೋಟಿ ನಿರೀಕ್ಷಿಸಬಹುದು.

ಸಂಭವನೀಯ ತಂಡಗಳು

ಭಾರತ: ರಾಹುಲ್‌, ರೋಹಿತ್‌/ಧವನ್‌, ಕೊಹ್ಲಿ, ರಿಷಭ್‌, ಧೋನಿ, ಕಾರ್ತಿಕ್‌/ವಿಜಯ್‌ ಶಂಕರ್‌, ಕೃನಾಲ್‌, ಉಮೇಶ್‌/ಸಿದ್ಧಾಥ್‌ರ್‍ ಕೌಲ್‌, ಚಹಲ್‌, ಮರ್ಕಂಡೆ, ಬೂಮ್ರಾ.

ಆಸ್ಪ್ರೇಲಿಯಾ: ಫಿಂಚ್‌, ಶಾರ್ಟ್‌, ಸ್ಟೋಯ್ನಿಸ್‌, ಮ್ಯಾಕ್ಸ್‌ವೆಲ್‌, ಹ್ಯಾಂಡ್ಸ್‌ಕಂಬ್‌, ಟರ್ನರ್‌, ಕೌಲ್ಟರ್‌ ನೈಲ್‌, ಕಮಿನ್ಸ್‌, ರಿಚರ್ಡ್‌ಸನ್‌, ಬೆರ್ಹನ್‌ಡೊಫ್‌ರ್‍, ಆ್ಯಡಂ ಜಂಪಾ.

ಪಂದ್ಯ ಆರಂಭ: ಸಂಜೆ 7ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1