* ಭಾರತವನ್ನು ಮಣಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದ ನ್ಯೂಜಿಲೆಂಡ್* ಟೇಲರ್-ವಿಲಿಯಮ್ಸನ್ ಬ್ಯಾಟಿಂಗ್‌ಗೆ ಸುಸ್ತಾದ ಟೀಂ ಇಂಡಿಯಾ ಬೌಲರ್‌ಗಳು* ನ್ಯೂಜಿಲೆಂಡ್ ಪ್ರದರ್ಶನಕ್ಕೆ ಜೈ ಹೋ ಎಂದ ನೆಟ್ಟಿಗರು
ಬೆಂಗಳೂರು(ಜೂ.24): ನಾಯಕ ಕೇನ್ ವಿಲಿಯಮ್ಸನ್ ಹಾಗೂ ಅನುಭವಿ ಬ್ಯಾಟ್ಸ್‌ಮನ್ ರಾಸ್ ಟೇಲರ್ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಭಾರತ ವಿರುದ್ದದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಚೊಚ್ಚಲ ಟೆಸ್ಟ್ ವಿಶ್ವಕಪ್ ನ್ಯೂಜಿಲೆಂಡ್ ಪಾಲಾಗಿದೆ.
ಇದಕ್ಕೂ ಮೊದಲು ನ್ಯೂಜಿಲೆಂಡ್ ವೇಗಿಗಳಾದ ಕೈಲ್ ಜೇಮಿಸನ್, ಟ್ರೆಂಟ್ ಬೌಲ್ಟ್ ಹಾಗೂ ಟಿಮ್ ಸೌಥಿ ಮಾರಕ ದಾಳಿಗೆ ತತ್ತರಿಸಿದ ಭಾರತ ಕ್ರಿಕೆಟ್ ತಂಡವು ಎರಡನೇ ಇನಿಂಗ್ಸ್‌ನಲ್ಲಿ ಕೇವಲ 170 ರನ್‌ಗಳಿಗೆ ಸರ್ವಪತನ ಕಂಡಿತು. ಪರಿಣಾಮ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲಲು ನ್ಯೂಜಿಲೆಂಡ್ ಕ್ರಿಕೆಟ್ ತಂಡಕ್ಕೆ 53 ಓವರ್‌ಗಳಲ್ಲಿ 139 ರನ್‌ಗಳ ಸಾಧಾರಣ ಗುರಿ ಸಿಕ್ಕಿತು. ಆರಂಭದಲ್ಲೇ ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 2 ವಿಕೆಟ್ ಕಬಳಿಸುವ ಮೂಲಕ ಕಿವೀಸ್ ಪಡೆಯ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು.
ಆದರೆ ಮೂರನೇ ವಿಕೆಟ್‌ಗೆ ಜತೆಯಾದ ಕೇನ್ ವಿಲಿಯಮ್ಸನ್(52) ಹಾಗೂ ರಾಸ್ ಟೇಲರ್(47) ಅಜೇಯ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು. ರಾಸ್ ಟೇಲರ್ ಗೆಲುವಿನ ರನ್ ಬಾರಿಸುತ್ತಿದ್ದಂತೆ ಡ್ರೆಸ್ಸಿಂಗ್ ರೂಂನಲ್ಲಿದ್ದ ನ್ಯೂಜಿಲೆಂಡ್ ಆಟಗಾರರು ಕುಣಿದು ಕುಪ್ಪಳಿಸಿದರು.
ನ್ಯೂಜಿಲೆಂಡ್ ತಂಡ ಚಾಂಪಿಯನ್ ಆಗುತ್ತಿದ್ದಂತೆ ಕೇನ್ ವಿಲಿಯಮ್ಸನ್ ಪಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಅಭಿಮಾನಿಗಳು ಮಾತ್ರವಲ್ಲ ಟೀಂ ಇಂಡಿಯಾ ಹಿರಿ-ಕಿರಿಯ ಆಟಗಾರರು ಕೂಡಾ ಅರ್ಹ ಗೆಲುವು ದಾಖಲಿಸಿದ ನ್ಯೂಜಿಲೆಂಡ್ ತಂಡಕ್ಕೆ ಟ್ವೀಟ್ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
