* ಯುಎಇ ಚರಣದ ಐಪಿಎಲ್ ಭಾಗ-2 ಆರಂಭಕ್ಕೆ ಕ್ಷಣಗಣನೆ ಆರಂಭ* ಯುಎಇ ಚರಣಡದಲ್ಲಿ ಒಟ್ಟು 31 ಪಂದ್ಯಗಳು ನಡೆಯಲಿವೆ* ಮೊದಲ ಪಂದ್ಯದಲ್ಲೇ ಮುಂಬೈ-ಚೆನ್ನೈ ಮುಖಾಮುಖಿ

ದುಬೈ(ಸೆ.18): 14ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಭಾಗ-2ರ ಆರಂಭಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಕೋವಿಡ್‌ನಿಂದಾಗಿ ಮೇ ತಿಂಗಳಲ್ಲಿ ದಿಢೀರ್‌ ಸ್ಥಗಿತಗೊಂಡಿದ್ದ ಟೂರ್ನಿಯೂ ಭಾನುವಾರ ಪುನಾರಂಭಗೊಳ್ಳಲಿದೆ. ಟೂರ್ನಿಯಲ್ಲಿ ಫೈನಲ್‌ ಸೇರಿ 60 ನಿಗದಿಯಾಗಿದ್ದ 60 ಪಂದ್ಯಗಳ ಪೈಕಿ 29 ಪಂದ್ಯಗಳು ಪೂರ್ಣಗೊಂಡಿದ್ದು, ಬಾಕಿ ಇರುವ 31 ಪಂದ್ಯಗಳಿಗೆ ಯುಎಇ ಆತಿಥ್ಯ ವಹಿಸಲಿದೆ.

2020ರ ಆವೃತ್ತಿಯನ್ನು ಯಶಸ್ವಿಯಾಗಿ ಆಯೋಜಿಸಿದ್ದ ದುಬೈ, ಅಬು ಧಾಬಿ ಹಾಗೂ ಶಾರ್ಜಾದಲ್ಲೇ ಈ ಸಲದ ಪಂದ್ಯಗಳು ನಡೆಯಲಿವೆ. ಭಾಗ-2ರ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಹಾಗೂ ಮಾಜಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಸೆಣಸಲಿವೆ.

Scroll to load tweet…

ಕೈಸುಟ್ಟುಕೊಂಡಿದ್ದ ಬಿಸಿಸಿಐ: ಕೊರೋನಾ ಸೋಂಕು ದೊಡ್ಡ ಪ್ರಮಾಣದಲ್ಲಿ ಹಬ್ಬುತ್ತಿದ್ದ ಸಮಯದಲ್ಲೇ ಭಾರತದಲ್ಲೇ ಟೂರ್ನಿ ನಡೆಸಲು ಪ್ರಯತ್ನಿಸಿ ಬಿಸಿಸಿಐ ಕೈಸುಟ್ಟುಕೊಂಡಿತ್ತು. ಟೂರ್ನಿ ಆರಂಭಕ್ಕೂ ಮೊದಲೇ ಕೆಲ ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದರೂ, ಟೂರ್ನಿ ಆರಂಭಗೊಂಡ ಮೊದಲ ವಾರದಲ್ಲಿ ಅಂದರೆ ಚೆನ್ನೈ ಹಾಗೂ ಮುಂಬೈ ಚರಣಗಳಲ್ಲಿ ಯಾವುದೇ ಸಮಸ್ಯೆ ಆಗಿರಲಿಲ್ಲ. ಅಹಮದಾಬಾದ್‌ ಹಾಗೂ ದೆಹಲಿ ಚರಣಗಳು ಚಾಲ್ತಿಯಲ್ಲಿದ್ದಾಗ ಆಟಗಾರರು ಉಳಿದುಕೊಂಡಿದ್ದ ಬಯೋಬಬಲ್‌ನಲ್ಲೇ ಕೋವಿಡ್‌ ಸೋಂಕು ಪತ್ತೆಯಾಯಿತು. ಕೋಲ್ಕತಾ ನೈಟ್‌ರೈಡ​ರ್ಸ್‌ ತಂಡದ ವರುಣ್‌ ಚಕ್ರವರ್ತಿ, ಸಂದೀಪ್‌ ವಾರಿಯರ್‌ಗೆ ಸೋಂಕು ಕಾಣಿಸಿಕೊಂಡಿದ್ದು ಆತಂಕ ಮೂಡಿಸಿತು.

Scroll to load tweet…

IPL 2021 ಡೆಲ್ಲಿ ಕ್ಯಾಪಿಟಲ್ಸ್‌ ನಾಯಕನಾಗಿ ರಿಷಭ್ ಪಂತ್‌ ಮುಂದುವರಿಕೆ

ಸನ್‌ರೈಸರ್ಸ್‌ ವೃದ್ಧಿಮಾನ್‌ ಸಾಹ, ಡೆಲ್ಲಿಯ ಅಮಿತ್‌ ಮಿಶ್ರಾಗೂ ಸೋಂಕು ತಗುಲಿದ ಬಳಿಕ ಟೂರ್ನಿ ಸ್ಥಗಿತಗೊಳಿಸಲಾಯಿತು. ಟೂರ್ನಿ ಶುರುವಾದಾಗಿನಿಂದ ಸ್ಥಗಿತಗೊಳ್ಳುವ ವರೆಗೂ ಹಲವು ಆಟಗಾರರು, ಕೋಚ್‌ಗಳು, ಮೈದಾನ ಸಿಬ್ಬಂದಿ, ತಂಡದ ಅಧಿಕಾರಿಗಳು ಕೋವಿಡ್‌ಗೆ ತುತ್ತಾದರು.

ಯುಎಇಗೆ ಸ್ಥಳಾಂತರ: ಟೂರ್ನಿ ಸ್ಥಗಿತಗೊಂಡ ಬಳಿಕ ಆಟಗಾರರನ್ನು ಅದರಲ್ಲೂ ವಿಶೇಷವಾಗಿ ವಿದೇಶಿಗರನ್ನು ಅವರವರ ತವರುಗಳಿಗೆ ಕಳುಹಿಸಲು ಬಿಸಿಸಿಐ ಎಲ್ಲಾ ಕಸರತ್ತು ನಡೆಸಿತು. ಆ ಬಳಿಕ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲು ನಿರ್ಧರಿಸಲಾಯಿತು. ವೇಳಾಪಟ್ಟಿ ಅಂತಿಮಗೊಳಿಸುವುದು ತಲೆನೋವಾಗಿ ಪರಿಣಮಿಸಿದರೂ ಬಿಸಿಸಿಐ ಎಲ್ಲಾ ದೇಶಗಳ ಕ್ರಿಕೆಟ್‌ ಮಂಡಳಿಗಳ ಮನವೊಲಿಸಿ, ಟಿ20 ವಿಶ್ವಕಪ್‌ಗೂ ಮೊದಲೇ ಟೂರ್ನಿ ಆಯೋಜಿಸಲು ಸಿದ್ಧತೆ ಆರಂಭಿಸಿತು.

ಸ್ಟೇಡಿಯಂಗೆ ಪ್ರೇಕ್ಷಕರು: ಇಂಗ್ಲೆಂಡ್‌ನಲ್ಲಿ ಆದ ಎಡವಟ್ಟುಗಳಿಂದ ಕೋವಿಡ್‌ ಆತಂಕ ಶುರುವಾಗಿತ್ತಾದರೂ, ಆಟಗಾರರು ಸುರಕ್ಷಿತವಾಗಿ ಯುಎಇ ತಲುಪಿದ್ದಾರೆ. ಇಂಗ್ಲೆಂಡ್‌ನಲ್ಲಿ ಕ್ರೀಡಾಂಗಣಗಳಿಗೆ ಶೇ.100ರಷ್ಟು ಪ್ರೇಕ್ಷಕರನ್ನು ಬಿಡಲಾಗಿತ್ತು. ಐಪಿಎಲ್‌ಗೆ ಶೇ 25ರಿಂದ 30ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಬಿಸಿಸಿಐ ಹಾಗೂ ಯುಎಇ ಕ್ರಿಕೆಟ್‌ ಮಂಡಳಿ ನಿರ್ಧರಿಸಿವೆ. ಅಂದರೆ ದುಬೈ ಕ್ರೀಡಾಂಗಣಕ್ಕೆ ಸುಮಾರು 6,000, ಶಾರ್ಜಾದಲ್ಲಿ ನಾಲ್ಕೂವರೆ ಸಾವಿರ ಹಾಗೂ ಅಬು ಧಾಬಿಯಲ್ಲಿ 3 ಸಾವಿರ ಪ್ರೇಕ್ಷಕರಿಗೆ ಪ್ರವೇಶ ಸಿಗಲಿದೆ.