Asianet Suvarna News Asianet Suvarna News

Birmingham Test: ಮತ್ತೆ ಅರ್ಧಶತಕ ಚಚ್ಚಿ ಹೊಸ ದಾಖಲೆ ಬರೆದ ರಿಷಭ್‌ ಪಂತ್..!

* ಬರ್ಮಿಂಗ್‌ಹ್ಯಾಮ್‌ ಟೆಸ್ಟ್‌ನಲ್ಲಿ ಮತ್ತೊಮ್ಮೆ ಘರ್ಜಿಸಿದ ರಿಷಭ್ ಪಂತ್ ಬ್ಯಾಟ್
* ಎರಡನೇ ಇನಿಂಗ್ಸ್‌ನಲ್ಲಿ 57 ರನ್ ಸಿಡಿಸಿದ ವಿಕೆಟ್ ಕೀಪರ್ ಬ್ಯಾಟರ್‌
* ವಿದೇಶಿ ಪಿಚ್‌ನಲ್ಲಿ ಹೊಸ ದಾಖಲೆ ಬರೆದ ಭಾರತೀಯ ವಿಕೆಟ್ ಕೀಪರ್ ಪಂತ್

Century and Fifty in Same Test Rishabh Pant Create unique record in Birmingham Test kvn
Author
Bengaluru, First Published Jul 4, 2022, 4:43 PM IST

ಬರ್ಮಿಂಗ್‌ಹ್ಯಾಮ್‌(ಜು.04): ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಬರ್ಮಿಂಗ್‌ಹ್ಯಾಮ್ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲೂ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್‌ ರಿಷಭ್ ಪಂತ್ ಅವರು ಆಕರ್ಷಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಇಂಗ್ಲೆಂಡ್ ಎದುರಿನ ಮೊದಲ ಇನಿಂಗ್ಸ್‌ನಲ್ಲಿ ಸ್ಪೋಟಕ ಶತಕ ಚಚ್ಚಿದ್ದ ಪಂತ್, ಇದೀಗ ಎರಡನೇ ಇನಿಂಗ್ಸ್‌ನಲ್ಲಿ ಕೂಡಾ ಅರ್ಧಶತಕ ಬಾರಿಸಿ ಹೊಸ ದಾಖಲೆ ಬರೆದಿದ್ದಾರೆ.

ಇಲ್ಲಿನ ಎಜ್‌ಬಾಸ್ಟನ್‌ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 146 ರನ್ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದ ರಿಷಭ್ ಪಂತ್ (Rishabh Pant), ಎರಡನೇ ಇನಿಂಗ್ಸ್‌ನಲ್ಲಿ 57 ರನ್ ಬಾರಿಸುವ ಮೂಲಕ ವಿದೇಶಿ ನೆಲದಲ್ಲಿ ಟೆಸ್ಟ್‌ ಪಂದ್ಯವೊಂದರಲ್ಲಿ ಗರಿಷ್ಠ ರನ್‌ ಬಾರಿಸಿದ ಭಾರತದ ವಿಕೆಟ್‌ ಕೀಪರ್ ಬ್ಯಾಟರ್ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. ಎಜ್‌ಬಾಸ್ಟನ್ ಟೆಸ್ಟ್‌ನ ಎರಡು ಇನಿಂಗ್ಸ್‌ಗಳಿಂದ ರಿಷಭ್ ಪಂತ್ ಒಟ್ಟು 203 ರನ್‌ ಬಾರಿಸಿದ್ದಾರೆ. ಇದಷ್ಟೇ ಅಲ್ಲದೇ ಇಂಗ್ಲೆಂಡ್‌ ನೆಲದಲ್ಲಿ ಟೆಸ್ಟ್‌ ಪಂದ್ಯವೊಂದರಲ್ಲಿ ಶತಕ ಹಾಗೂ ಅರ್ಧಶತಕ ಬಾರಿಸಿದ ಎರಡನೇ ವಿಕೆಟ್ ಕೀಪರ್‌ ಬ್ಯಾಟರ್ ಎನ್ನುವ ದಾಖಲೆ ಕೂಡಾ ರಿಷಭ್ ಪಂತ್ ಪಾಲಾಗಿದೆ. ಈ ಮೊದಲು 2011ರಲ್ಲಿ ಲಾರ್ಡ್ಸ್‌ ಮೈದಾನದಲ್ಲಿ ಭಾರತ ಎದುರಿನ ಪಂದ್ಯದಲ್ಲಿ ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟರ್ ಮ್ಯಾಟ್ ಪ್ರಿಯರ್(71 & 103*) ಅರ್ಧಶತಕ ಹಾಗೂ ಶತಕ ಸಿಡಿಸಿದ್ದರು.

ಇನ್ನು ಟೆಸ್ಟ್‌ ಪಂದ್ಯವೊಂದರಲ್ಲಿ ಶತಕ ಹಾಗೂ ಅರ್ಧಶತಕ ಸಿಡಿಸಿದ ಎರಡನೇ ಭಾರತೀಯ ವಿಕೆಟ್ ಕೀಪರ್ ಎನ್ನುವ ಶ್ರೇಯಕ್ಕೂ ರಿಷಭ್ ಪಂತ್ ಪಾತ್ರರಾಗಿದ್ದಾರೆ. ಈ ಮೊದಲು 1973ರಲ್ಲಿ ಇಂಗ್ಲೆಂಡ್ ಎದುರು ಮುಂಬೈನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್ ಬ್ಯಾಟರ್ ಆಗಿದ್ದ ಫಾರುಖ್ ಇಂಜಿನೀಯರ್ (Farokh Engineer) ಶತಕ ಹಾಗೂ ಅರ್ಧಶತಕ ಬಾರಿಸಿದ್ದರು. ಫಾರುಖ್ ಇಂಜಿನೀಯರ್ ಇಂಗ್ಲೆಂಡ್ ಎದುರಿನ ಮುಂಬೈ ಟೆಸ್ಟ್ ಪಂದ್ಯದಲ್ಲಿ 121 ಹಾಗೂ 66 ರನ್ ಚಚ್ಚಿದ್ದರು.

300+ ರನ್‌ ಮುನ್ನಡೆ ಸಾಧಿಸಿದ ಟೀಂ ಇಂಡಿಯಾ

ಇಂಗ್ಲೆಂಡ್ ಎದುರು ಮೊದಲ ಇನಿಂಗ್ಸ್‌ನಲ್ಲಿ 132 ರನ್‌ಗಳ ಮುನ್ನಡೆ ಪಡೆದಿದ್ದ ಟೀಂ ಇಂಡಿಯಾ (Team India), ಎರಡನೇ ಇನಿಂಗ್ಸ್‌ನಲ್ಲೂ ದಿಟ್ಟ ಹೋರಾಟ ನಡೆಸುವ ಮೂಲಕ ಬೃಹತ್ ಮುನ್ನಡೆಯತ್ತ ದಾಪುಗಾಲಿಡಲಾರಂಭಿಸಿದೆ. ಸದ್ಯ ಟೀಂ ಇಂಡಿಯಾ ಎರಡನೇ ಇನಿಂಗ್ಸ್‌ನಲ್ಲಿ 68 ಓವರ್‌ ಅಂತ್ಯದ ವೇಳೆಗೆ 6 ವಿಕೆಟ್ ಕಳೆದುಕೊಂಡು 205 ರನ್‌ ಬಾರಿಸಿದ್ದು ಒಟ್ಟಾರೆ 337 ರನ್‌ಗಳ ಮುನ್ನಡೆ ಸಾಧಿಸಿದೆ. ಎರಡನೇ ಇನಿಂಗ್ಸ್‌ನಲ್ಲಿ ಟೆಸ್ಟ್‌ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ(66) ಹಾಗೂ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್(57) ಸಮಯೋಚಿತ ಅರ್ಧಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ.

Follow Us:
Download App:
  • android
  • ios