ಕ್ರಿಕೆಟ್ ಚೆಂಡಿನ ಹೊಳಪು ಕಾಪಾಡಲು ಎಂಜಲಿನ ಬದಲು ಮೇಣ ಬಳಕೆ?
ಕೊರೋನಾದಿಂದಾಗಿ ಕ್ರಿಕೆಟ್ ಚಟುವಟಿಗೆ ನಿಂತಿದೆ. ಹೀಗಿರುವಾಗಲೇ ಒಂದು ವೇಳೆ ಕ್ರಿಕೆಟ್ ಆರಂಭವಾದ ಬಳಿಕ ಚಂಡು ಹೊಳಪು ಕಾಪಾಡಲು ಎಂಜಲು ಹಚ್ಚುವುದಕ್ಕೆ ಐಸಿಸಿ ಬ್ರೇಕ್ ಹಾಕುವ ಸಾಧ್ಯತೆಯಿದೆ. ಹೀಗಿರುವಾಗಲೇ ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟ್ ಬಾಲ್ ತಯಾರಿಕಾ ಸಂಸ್ಥೆ ಕೂಕಾಬುರಾ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಏನದು? ನೀವೇ ನೋಡಿ.
ಮೆಲ್ಬರ್ನ್(ಮೇ.05): ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ, ಕ್ರಿಕೆಟ್ ಚಟುವಟಿಕೆ ಪುನಾರಂಭಗೊಂಡ ಬಳಿಕ ಚೆಂಡು ಹೊಳಪು ಕಾಪಾಡುವುದು ತಂಡಗಳಿಗೆ ಸವಾಲಾಗಿ ಪರಿಣಮಿಸಲಿದೆ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿರುವಾಗ, ಆಸ್ಪ್ರೇಲಿಯಾದ ಕೂಕಾಬುರಾ ಸಂಸ್ಥೆ ಹೊಸ ಯೋಜನೆಗೆ ಕೈಹಾಕಿದೆ.
ಸ್ವಿಂಗ್ ಬೌಲಿಂಗ್‌ಗೆ ಸಹಕಾರಿಯಾಗುವಂತಹ ಮೇಣ ತಯಾರಿಸುತ್ತಿರುವುದಾಗಿ ಸಂಸ್ಥೆ ತಿಳಿಸಿದೆ. ಸ್ಪಾಂಜ್‌ಗೆ ಅಂಟಿಕೊಂಡಿರುವ ಮೇಣವನ್ನು ಚೆಂಡಿನ ಮೇಲೆ ಉಜ್ಜಬಹುದಾಗಿದೆ. ಇದರಿಂದ ಎಂಜಲು ಬಳಕೆ ಮಾಡುವುದನ್ನು ತಡೆಯಬಹುದು ಎಂದು ಸಂಸ್ಥೆ ತಿಳಿಸಿದೆ.
ಚೆಂಡಿಗೆ ಮೇಣ ಹಚ್ಚುವ ಕುರಿತಾಗಿ ನಾವಿನ್ನು ಆರಂಭಿಕ ಹಂತದಲ್ಲಿದ್ದೇವೆ, ಈ ಬಗ್ಗೆ ಇನ್ನಷ್ಟು ಕೆಲಸ ಮಾಡಬೇಕಿದೆ ಎಂದು ಆಸ್ಪ್ರೇಲಿಯಾದ ಕೂಕಾಬುರಾ ಸಂಸ್ಥೆ ತಿಳಿಸಿದೆ. ಕೊರೋನಾದಿಂದಾ ಕ್ರಿಕೆಟ್ ಚಟುವಟಿಕೆಗಳು ಸ್ತಬ್ಧವಾಗಿವೆ. ಚೆಂಡಿನ ಹೊಳಪು ಕಾಪಾಡುವ ನಿಟ್ಟಿನಲ್ಲಿ ಮೇಣ ಹಚ್ಚುವ ಬಗ್ಗೆ ಆಡಳಿತ ಕಮಿಟಿಯಿಂದ ಅನುಮತಿ ಪಡೆದರಷ್ಟೇ ಇದು ಜಾರಿಗೆ ಬರಲಿದೆ.
ಇದೇ ವೇಳೆ ಚೆಂಡಿನ ಒಂದು ಭಾಗದ ತೂಕ ಹೆಚ್ಚಿಸಿದರೆ ಸ್ವಿಂಗ್ ಬೌಲಿಂಗ್‌ಗೆ ಎದುರಾಗುವ ಸಮಸ್ಯೆಗೆ ಪರಿಹಾರ ಸಿಗಲಿದೆ. ಚೆಂಡು ವಿರೂಪಗೊಳಿಸುವುದನ್ನು ಸಹ ತಡೆಯಬಹುದು ಎಂದು ಆಸ್ಪ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಶೇನ್ ವಾರ್ನ್ ಸಲಹೆ ನೀಡಿದ್ದಾರೆ.
2018ರಲ್ಲಿ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯದ ವೇಳೆ ಬಾಲ್ ಟ್ಯಾಂಪರಿಂಗ್ ಪ್ರಕರಣ ನಡೆದಿತ್ತು. ಕೇಪ್‌ಟೌನ್ ಪಂದ್ಯದಲ್ಲಿ ಆಸೀಸ್ ಕ್ರಿಕೆಟಿಗ ಬೆನ್ ಕ್ರಾಫ್ಟ್ ಸ್ಯಾಂಡ್ ಪೇಪರ್ ಬಳಸಿ ಚೆಂಡನ್ನು ವಿರೂಪಗೊಳಿಸಿದ್ದರು. ಪರಿಣಾಮ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್ ಅವರನ್ನು 12 ತಿಂಗಳು ನಿಷೇಧಕ್ಕೆ ಒಳಗಾಗಿದ್ದರು. ಇನ್ನು ಕ್ಯಾಮರೋನ್ ಬೆನ್‌ಕ್ರಾಫ್ಟ್ 9 ತಿಂಗಳು ಬ್ಯಾನ್ ಆಗಿದ್ದರು. ಇದರ ಬೆನ್ನಲ್ಲೇ ಐಸಿಸಿ ಬಾಲ್ ಟ್ಯಾಂಪರಿಂಗ್ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜಾರಿಯಲ್ಲಿದೆ.