* ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಹೆಡ್ ಕೋಚ್ ಸ್ಥಾನಕ್ಕೆ ಆಂಡ್ರ್ತೂ ಮೆಕ್‌ಡೊನಾಲ್ಡ್ ನೇಮಕ* ಜಸ್ಟಿನ್ ಲ್ಯಾಂಗರ್ ರಾಜೀನಾಮೆಯಿಂದ ತೆರವಾಗಿದ್ದ ಹೆಡ್ ಕೋಚ್ ಸ್ಥಾನ* 4 ವರ್ಷಗಳ ಅವಧಿಗೆ ಆಂಡ್ರ್ಯೂ ಮೆಕ್‌ಡೊನಾಲ್ಡ್ ನೇಮಕ
ಮೆಲ್ಬೊರ್ನ್(ಏ.13): ಆಸ್ಟ್ರೇಲಿಯಾ ಕ್ರಿಕೆಟ್ ತಂಡದ (Australian Cricket Team) ಮೂರು ಮಾದರಿಯ ಹೆಡ್ ಕೋಚ್ ಆಗಿ ಆಂಡ್ರ್ಯೂ ಮೆಕ್‌ಡೊನಾಲ್ಡ್ (Andrew McDonald) ನೇಮಕವಾಗಿದ್ದಾರೆ. ಕಾಂಗರೂ ಪಡೆ ಪಾಕಿಸ್ತಾನ ನೆಲದಲ್ಲಿ ಅದ್ಭುತ ಪ್ರದರ್ಶನ ತೋರಿದ ಬೆನ್ನಲ್ಲೇ ಆಂಡ್ರ್ಯೂ ಮೆಕ್‌ಡೊನಾಲ್ಡ್ ಅವರಿಗೆ ಜಾಕ್ ಪಾಟ್ ಹೊಡೆದಿದ್ದು, ಮುಂದಿನ ನಾಲ್ಕು ವರ್ಷಗಳ ಅವಧಿಗೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ
2019ರಿಂದಲೂ ಜಸ್ಟಿನ್ ಲ್ಯಾಂಗರ್ (Justin Langer) ಅವರಿಗೆ ಸಹಾಯಕ ಕೋಚ್ ಆಗಿ ಆಂಡ್ರ್ಯೂ ಮೆಕ್‌ಡೊನಾಲ್ಡ್ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಪಾಕಿಸ್ತಾನ ಎದುರಿನ ಸರಣಿಗೂ ಮುನ್ನ ಜಸ್ಟಿನ್ ಲ್ಯಾಂಗರ್ ತಾವು ಕೋಚ್ ಆಗಿ ಮುಂದುವರೆಯುವುದಿಲ್ಲ ಎಂದು ಘೋಷಿಸುವ ಮೂಲಕ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಹೆಡ್ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದೀಗ 40 ವರ್ಷದ ಆಂಡ್ರ್ಯೂ ಮೆಕ್‌ಡೊನಾಲ್ಡ್ ಅವರನ್ನು ಪೂರ್ಣ ಪ್ರಮಾಣದ ಹೆಡ್ ಕೋಚ್ ಆಗಿ ನೇಮಕ ಮಾಡಲಾಗಿದೆ.
ನಾವು ಸಾಕಷ್ಟು ಪ್ರತಿಭಾನ್ವಿತ ಅಭ್ಯರ್ಥಿಗಳನ್ನು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಹೆಡ್ ಕೋಚ್ ಹುದ್ದೆಗೆ ಸಂದರ್ಶನ ಮಾಡಿದೆವು. ಆಂಡ್ರ್ಯೂ ಮೆಕ್‌ಡೊನಾಲ್ಡ್ ಹೆಡ್ ಕೋಚ್ ಆಗಿ ತಾವು ಯಾವೆಲ್ಲ ಗುರಿಯನ್ನು ಇಟ್ಟುಕೊಂಡಿದ್ದಾರೆ ಎನ್ನುವ ಅವರ ಉದ್ದೇಶ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಅವರನ್ನು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿ ನೇಮಕ ಮಾಡಲಾಯಿತು ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯಸ್ಥ ನಿಕ್ ಹಾಕ್ಲೇ ಹೇಳಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿ ನೇಮಕವಾಗಿರುವ ಆಂಡ್ರ್ಯೂ ಮೆಕ್‌ಡೊನಾಲ್ಡ್‌ಗೆ ಈ ವರ್ಷ ಸಾಕಷ್ಟು ಸವಾಲುಗಳು ಇವೆ. ಪ್ರಸಕ್ತ ವರ್ಷದಲ್ಲೇ ಆಸ್ಟ್ರೇಲಿಯಾ ತಂಡವು ಶ್ರೀಲಂಕಾ ಹಾಗೂ ಭಾರತ ಪ್ರವಾಸವನ್ನು ಮಾಡಲಿದೆ. ಇನ್ನು ತವರಿನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಬೇಕಾದ ಒತ್ತಡ ಕೂಡಾ ಆಸ್ಟ್ರೇಲಿಯಾ ತಂಡದ ಮೇಲಿದೆ.
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿ ನೇಮಕವಾಗಿರುವುದು ನನ್ನ ಪಾಲಿಗೆ ತುಂಬಾ ಗೌರವದ ವಿಚಾರ. ಹೆಡ್ ಕೋಚ್ ಆಗಿ ಮುಂಬರುವ ದಿನಗಳಲ್ಲಿ ಆಸ್ಟ್ರೇಲಿಯಾ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಲು ಉತ್ಸುಕನಾಗಿದ್ದೇನೆ. ಕೋಚ್ ಹಾಗೂ ಆಟಗಾರರಿಗೆ ಇರುವ ದೊಡ್ಡ ಸವಾಲೆಂದರೆ ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಮಾಡುವುದು. ಈ ವಿಚಾರವಾಗಿ ನನ್ನ ಜತೆಗೆ ಸಹಾಯಕ ಕೋಚ್ ಸಿಬ್ಬಂದಿಗಳು ಕೈಜೋಡಿಸುವ ವಿಶ್ವಾಸವಿದೆ. ವಿವಿಧ ಪ್ರವಾಸಗಳಲ್ಲಿ ಹಲವು ಸವಾಲುಗಳು ಎದುರಾಗುತ್ತವೆ. ನಾವು ಬಲಿಷ್ಠ ತಂಡವನ್ನು ಕಟ್ಟುವತ್ತ ಹೆಜ್ಜೆಹಾಕುತ್ತೇವೆ ಎಂದು ಮೆಕ್‌ಡೊನಾಲ್ಡ್ ಹೇಳಿದ್ದಾರೆ.
IPL 2022: ಆರ್‌ಸಿಬಿ Vs ಸಿಎಸ್‌ಕೆ ಪಂದ್ಯದ ವೇಳೆ ಹರಿದಾಡಿದ ಟಾಪ್ 10 ಮೀಮ್ಸ್‌ಗಳಿವು..!
2018ರಲ್ಲಿ ಕೇಪ್‌ಟೌನ್ ಟೆಸ್ಟ್ ವೇಳೆ ಬಾಲ್ ಟ್ಯಾಂಪರಿಂಗ್ ಮಾಡಿದ ತಪ್ಪಿಗಾಗಿ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ (David Warner) ಹಾಗೂ ಕ್ಯಾಮರೋನ್ ಬೆನ್‌ಕ್ರಾಫ್ಟ್ ನಿಷೇಧಕ್ಕೆ ಗುರಿಯಾಗಿದ್ದರು. ಇದಾದ ಬಳಿಕ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಹಿಂದೆಂದು ಕಂಡು ಕೇಳರಿಯದಂತ ವೈಫಲ್ಯಕ್ಕೆ ಒಳಗಾಗಿತ್ತು. ಇದಾದ ಬಳಿಕ ಆಸೀಸ್ ತಂಡದ ಹೆಡ್ ಕೋಚ್ ಹುದ್ದೆ ಅಲಂಕರಿಸಿದ್ದ ಜಸ್ಟಿನ್ ಲ್ಯಾಂಗರ್ ಬಲಿಷ್ಠ ತಂಡವನ್ನು ಕಟ್ಟಿದ್ದರು. ಜಸ್ಟಿನ್ ಲ್ಯಾಂಗರ್ ಮಾರ್ಗದರ್ಶನದಲ್ಲಿ ಆಸ್ಟ್ರೇಲಿಯಾ ತಂಡವು ಚೊಚ್ಚಲ ಬಾರಿಗೆ ಐಸಿಸಿ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇನ್ನು ತವರಿನಲ್ಲಿ ನಡೆದ ಪ್ರತಿಷ್ಠಿತ ಆ್ಯಷಸ್ ಟೆಸ್ಟ್ ಸರಣಿಯನ್ನು 4-0 ಅಂತರದಲ್ಲಿ ಜಯಿಸಿತ್ತು. ಇದಾದ ಬಳಿಕ ದಿಢೀರ್ ಎನ್ನುವಂತೆ ಜಸ್ಟಿನ್ ಲ್ಯಾಂಗರ್ ತಮ್ಮ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದರು.
