ಮುಂಬೈ/ಚೆನ್ನೈ(ಮಾ.30): ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಏಕದಿನ ಸರಣಿ ಮುಕ್ತಾಯಗೊಳ್ಳುತ್ತಿದ್ದಂತೆ ಭಾರತೀಯ ಕ್ರಿಕೆಟಿಗರ ಗಮನ 2021ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನತ್ತ ನೆಟ್ಟಿದೆ. ಕಳೆದ ಕೆಲ ದಿನಗಳಿಂದಲೇ ತಂಡಗಳು ಅಭ್ಯಾಸ ಆರಂಭಿಸಿದರೂ, ತಾರಾ ಆಟಗಾರರು ಈಗಷ್ಟೇ ತಂಡ ಕೂಡಿಕೊಳ್ಳಲು ಆರಂಭಿಸಿದ್ದಾರೆ. ಅಭಿಮಾನಿಗಳಲ್ಲೂ ಐಪಿಎಲ್‌ ಬಗ್ಗೆಗಿನ ಕುತೂಹಲ ಹೆಚ್ಚುತ್ತಿದೆ.

ಮೊದಲ ಹಂತದಲ್ಲಿ ಚೆನ್ನೈ ಹಾಗೂ ಮುಂಬೈನಲ್ಲಿ ಪಂದ್ಯಗಳು ನಡೆಯಲಿರುವ ಕಾರಣ, ತಂಡಗಳು ಈ ಎರಡು ನಗರಗಳಲ್ಲಿ ಅಭ್ಯಾಸ ಶಿಬಿರ ಆರಂಭಿಸಿವೆ. ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಸೋಮವಾರ ನಾಯಕ ರೋಹಿತ್‌ ಶರ್ಮಾ, ತಾರಾ ಆಟಗಾರರಾದ ಹಾರ್ದಿಕ್‌ ಪಾಂಡ್ಯ, ಕೃನಾಲ್‌ ಪಾಂಡ್ಯ, ಸೂರ್ಯಕುಮಾರ್‌ ಯಾದವ್‌ ಸೇರ್ಪಡೆಗೊಂಡರು. ಇಶಾನ್‌ ಕಿಶನ್‌ ಸೇರಿದಂತೆ ಇನ್ನೂ ಕೆಲ ಆಟಗಾರರು ಈಗಾಗಲೇ ಅಭ್ಯಾಸ ನಡೆಸುತ್ತಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ತಾರಾ ಆಟಗಾರರಾದ ರಿಷಭ್‌ ಪಂತ್‌, ಆರ್‌.ಅಶ್ವಿನ್‌, ಕ್ರಿಸ್‌ ವೋಕ್ಸ್‌, ಶಿಮ್ರೊನ್‌ ಹೆಟ್ಮೇಯರ್‌ ತಂಡ ಕೂಡಿಕೊಂಡಿದ್ದಾರೆ. ಸನ್‌ರೈಸ​ರ್ಸ್ ಹೈದರಾಬಾದ್‌, ಕೆಕೆಆರ್‌, ರಾಜಸ್ಥಾನ ರಾಯಲ್ಸ್‌, ಪಂಜಾಬ್‌ ಕಿಂಗ್ಸ್‌ ತಂಡಗಳು ಈಗಾಗಲೇ ಅಭ್ಯಾಸ ಶುರು ಮಾಡಿವೆ. ಚೆನ್ನೈ ಸೂಪರ್‌ ಕಿಂಗ್ಸ್‌ ಒಂದು ವಾರ ಚೆನ್ನೈನಲ್ಲಿ ಅಭ್ಯಾಸ ನಡೆಸಿ, ಈಗ ಮುಂಬೈ ತಲುಪಿದೆ. ತಂಡದ ತಾರಾ ಆಟಗಾರರಾದ ನಾಯಕ ಎಂ.ಎಸ್‌.ಧೋನಿ, ಸುರೇಶ್‌ ರೈನಾ, ರವೀಂದ್ರ ಜಡೇಜಾ ಕೆಲ ದಿನಗಳ ಅಭ್ಯಾಸ ನಡೆಸಿದ್ದಾರೆ. ಭಾರತ ವಿರುದ್ಧ ಸರಣಿಯಲ್ಲಿ ಆಡಿದ ಸ್ಯಾಮ್‌ ಕರ್ರನ್‌ ಹಾಗೂ ಮೋಯಿನ್‌ ಅಲಿ, ಸೋಮವಾರ ತಂಡ ಸೇರಿಕೊಂಡರು.

ಅಭಿಮಾನಿಗಳಿಗೆ ಗುಡ್‌ನ್ಯೂಸ್‌: ಐಪಿಎಲ್‌ಗೂ ಮುನ್ನ ವಿವಾದಿತ ನಿಯಮ ಕಿತ್ತೆಸೆದ ಬಿಸಿಸಿಐ..!

ಇಂದಿನಿಂದ ಆರ್‌ಸಿಬಿ ಅಭ್ಯಾಸ: ರಾಯಲ್‌ ಚಾಲೆಂಜ​ರ್ಸ್ ಬೆಂಗಳೂರು ತಂಡ ಮಂಗಳವಾರದಿಂದ ಚೆನ್ನೈನಲ್ಲಿ ಅಭ್ಯಾಸ ಆರಂಭಿಸಲಿದೆ. ಇಂಗ್ಲೆಂಡ್‌ ವಿರುದ್ಧ ಸರಣಿಯಲ್ಲಿ ಆಡಿದ ಭಾರತ ತಂಡದಲ್ಲಿದ್ದ ನಾಯಕ ವಿರಾಟ್‌ ಕೊಹ್ಲಿ, ಯಜುವೇಂದ್ರ ಚಹಲ್‌, ವಾಷಿಂಗ್ಟನ್‌ ಸುಂದರ್‌, ಮೊಹಮದ್‌ ಸಿರಾಜ್‌ ಸೋಮವಾರ ಪುಣೆಯಿಂದ ನೇರವಾಗಿ ಚೆನ್ನೈ ತಲುಪಿದರು. ಬಿ ಡಿ ವಿಲಿಯ​ರ್ಸ್ ಸೋಮವಾರ ದಕ್ಷಿಣ ಆಫ್ರಿಕಾದಿಂದ ಹೊರಟ್ಟಿದ್ದು, ಮಂಗಳವಾರ ತಂಡ ಕೂಡಿಕೊಳ್ಳಲಿದ್ದಾರೆ. ಏ.9ರಂದು ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳು ಸೆಣಸಲಿವೆ.

ಮುಂಬೈ ಜೆರ್ಸಿಯಲ್ಲಿ ಸಚಿನ್‌ ಪುತ್ರ: ಸಚಿನ್‌ ತೆಂಡುಲ್ಕರ್‌ ಪುತ್ರ ಅರ್ಜುನ್‌ ತೆಂಡುಲ್ಕರ್‌ ಮುಂಬೈ ಇಂಡಿಯನ್ಸ್‌ ಜೆರ್ಸಿ ತೊಟ್ಟು ಫೋಟೋಶೂಟ್‌ ನಡೆಸಿದ್ದಾರೆ. ಆ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದ್ದು, ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.