ಕ್ರಿಕೆಟ್‌ ಮೈದಾನದಲ್ಲಿ ಅಂಪೈರ್‌ ನೀಡುವ ಸಾಫ್ಟ್ ಸಿಗ್ನಲ್‌ ಔಟ್ ತೀರ್ಮಾನ ಸಾಕಷ್ಟು ಗೊಂದಲದ ಗೂಡಾಗಿತ್ತು. ಇದಕ್ಕೆ ಬಿಸಿಸಿಐ ಮೇಜರ್ ಸರ್ಜರಿ ಮಾಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಮಾ.29): ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಪಂದ್ಯದ ವೇಳೆ ವಿವಾದಕ್ಕೆ ಕಾರಣವಾಗಿದ್ದ ಅಂಪೈರ್‌ ಸಾಫ್ಟ್‌ ಸಿಗ್ನಲ್‌ ನಿಯಮವನ್ನು ಮುಂದಿನ ಐಪಿಎಲ್‌ ಪಂದ್ಯಾವಳಿಯಲ್ಲಿ ಅಳವಡಿಸಲಾಗುವುದಿಲ್ಲ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಸ್ಪಷ್ಟಪಡಿಸಿದೆ. ಅಲ್ಲದೆ, ‘ಶಾರ್ಟ್‌ ರನ್‌’ ಮೇಲ್ಮನವಿ ಎದುರಾದಲ್ಲಿ ಥರ್ಡ್‌ ಅಂಪೈರ್‌ಗೆ ನೀಡುವ ಪದ್ಧತಿಯನ್ನೇ ಅನುಸರಿಸಲಾಗುವುದು ಎಂದು ತಿಳಿಸಿದೆ.

ಇತ್ತೀಚೆಗೆ ಈ ನಿಯಮದ ಬಗ್ಗೆ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿ, ಈ ನಿಯಮ ಅಳವಡಿಕೆಯನ್ನು ತೆಗೆದುಹಾಕಬೇಕೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಇದೀಗ ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದ್ದು, 14ನೇ ಆವೃತ್ತಿಯ ಐಪಿಎಲ್‌ನಿಂದಲೇ ತೆಗೆದುಹಾಕಲಾಗುವುದು ಎಂದು ತಿಳಿಸಿದೆ.

ವಿವಾದ ಸೃಷ್ಟಿಸಿದ ಸೂರ್ಯಕುಮಾರ್ ಯಾದವ್‌ ಔಟ್‌..! ಸಾಫ್ಟ್ ಸಿಗ್ನಲ್‌ ಬಗ್ಗೆ ನೆಟ್ಟಿಗರು ಗರಂ

ಭಾರತ ಮತ್ತು ಇಂಗ್ಲೆಂಡ್‌ ನಡುವಿನ 4ನೇ ಟಿ20 ಪಂದ್ಯದಲ್ಲಿ ಈ ನಿಯಮದಿಂದಾಗಿ ಸೂರ್ಯಕುಮಾರ್‌ ಯಾದವ್‌ ಔಟಾಗಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಕ್ರಿಕೆಟ್‌ ವಲಯದಲ್ಲಿ ಈ ನಿಯಮ ಚರ್ಚೆಗೆ ಗ್ರಾಸವಾಗಿತ್ತು.

ಏನಿದು ಸಾಫ್ಟ್‌ ಸಿಗ್ನಲ್‌?

ಪಂದ್ಯದ ವೇಳೆ ಅನುಮಾನಾಸ್ಪದ ರನ್‌ ಅಥವಾ ಕ್ಯಾಚ್‌ ವಿಚಾರವಾಗಿ ಅಂಪೈರ್‌ಗೆ ನಿರ್ಣಯ ಪ್ರಕಟಿಸಲು ಸಾಧ್ಯವಾಗದೇ ಇದ್ದಾಗ ಟೀವಿ ಅಂಪೈರ್‌ ಸಹಾಯ ಕೇಳಲಾಗುತ್ತದೆ. ಈ ವೇಳೆ ಟೀವಿ ಅಂಪೈರ್‌ ಮೈದಾನದಲ್ಲಿರುವ ಅಂಪೈರ್‌ ನಿರ್ಧಾರವನ್ನು ಪರಿಗಣಿಸಿ ಅಂತಿಮ ನಿರ್ಣಯ ಪ್ರಕಟಿಸಲಾಗುತ್ತದೆ. ಇದನ್ನು ಸಾಫ್ಟ್‌ ಸಿಗ್ನಲ್‌ ಎನ್ನಲಾಗುತ್ತದೆ. ಈ ಹಂತದಲ್ಲಿ ಒಂದೊಮ್ಮೆ ಟೀವಿ ಅಂಪೈರ್‌ಗೂ ನಿರ್ಣಯ ನೀಡಲು ಸಾಧ್ಯವಾಗದೇ ಇದ್ದಾಗ ಮೈದಾನದಲ್ಲಿರುವ ಅಂಪೈರ್‌ ನೀಡಿರುವ ನಿರ್ಣಯವನ್ನೇ ಎತ್ತಿಹಿಡಿಯುತ್ತದೆ.