Asianet Suvarna News Asianet Suvarna News

Birmingham Test: ಇಂಗ್ಲೆಂಡ್ ಎದುರು 350+ ಮುನ್ನಡೆ ಸಾಧಿಸಿದ ಟೀಂ ಇಂಡಿಯಾ..!

* ಎಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಬೃಹತ್ ಮುನ್ನಡೆಯತ್ತ ಟೀಂ ಇಂಡಿಯಾ
* ನಾಲ್ಕನೇ ದಿನದಾಟದ ಲಂಚ್ ಬ್ರೇಕ್‌ ವೇಳೆಗೆ ಭಾರತಕ್ಕೆ 361 ರನ್‌ಗಳ ಮುನ್ನಡೆ
* ಸಮಯೋಚಿತ ಅರ್ಧಶತಕ ಸಿಡಿಸಿ ಮಿಂಚಿದ ಪೂಜಾರ, ಪಂತ್

Cheteshwar Pujara Rishabh Pant fifty helps Team India take 361 runs lead in 2nd Innings on day 4 Lunch break kvn
Author
Bengaluru, First Published Jul 4, 2022, 5:13 PM IST

ಬರ್ಮಿಂಗ್‌ಹ್ಯಾಮ್(ಜು.04): ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ 5ನೇ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ಎರಡನೇ ಇನಿಂಗ್ಸ್‌ನಲ್ಲೂ ದಿಟ್ಟ ಬ್ಯಾಟಿಂಗ್ ನಡೆಸುತ್ತಿದ್ದು, ಈಗಾಗಲೇ 361 ರನ್‌ಗಳ ಮುನ್ನಡೆ ಪಡೆದಿದೆ. ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ (66) ಹಾಗೂ ವಿಕೆಟ್ ಕೀಪರ್ ಬ್ಯಾಟರ್‌ ರಿಷಭ್ ಪಂತ್ (57) ಬಾರಿಸಿದ ಸಮಯೋಚಿತ ಅರ್ಧಶತಕಗಳ ನೆರವಿನಿಂದ ನಾಲ್ಕನೇ ದಿನದಾಟದ ಊಟದ ವಿರಾಮದ ವೇಳೆಗೆ ಟೀಂ ಇಂಡಿಯಾ 7 ವಿಕೆಟ್ ಕಳೆದುಕೊಂಡು 229 ರನ್ ಕಲೆಹಾಕಿದೆ.

ಇಲ್ಲಿನ ಎಜ್‌ಬಾಸ್ಟನ್ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಮೂರನೇ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 125 ರನ್ ಬಾರಿಸಿದ್ದ ಟೀಂ ಇಂಡಿಯಾ (Team India), ನಾಲ್ಕನೇ ದಿನವನ್ನು ಎಚ್ಚರಿಕೆಯಿಂದಲೇ ಆರಂಭಿಸಿತು. ಅರ್ಧಶತಕ ಬಾರಿಸಿದ್ದ ಚೇತೇಶ್ವರ್ ಪೂಜಾರ (Cheteshwar Pujara) ನಾಲ್ಕನೇ ದಿನದಾಟದಲ್ಲಿ ತನ್ನ ಖಾತೆಗೆ 16 ರನ್ ಸೇರಿಸಿ ಸ್ಟುವರ್ಟ್‌ ಬ್ರಾಡ್ ಬೌಲಿಂಗ್‌ನಲ್ಲಿ ಅಲೆಕ್ಸ್‌ ಲೀಸ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇದಾದ ಬಳಿಕ ಕ್ರೀಸ್‌ಗಿಳಿದ ಶ್ರೇಯಸ್ ಅಯ್ಯರ್ (Shreyas Iyer) ಚುರುಕಿನ ಬ್ಯಾಟಿಂಗ್‌ ಮೂಲಕ ತಂಡದ ರನ್‌ ಗಳಿಕೆ ಹೆಚ್ಚುವಂತೆ ಮಾಡಿದರು. ಶ್ರೇಯಸ್ ಅಯ್ಯರ್ 26 ಎಸೆತಗಳನ್ನು ಎದುರಿಸಿ 3 ಬೌಂಡರಿ ಸಹಿತ 19 ರನ್ ಗಳಿಸಿ ಪಾಟ್ಸ್‌ಗೆ ವಿಕೆಟ್ ಒಪ್ಪಿಸಿದರು.

ಮತ್ತೆ ಆಪತ್ಭಾಂದವನಾದ ರಿಷಭ್ ಪಂತ್: ಹೌದು, ಇಂಗ್ಲೆಂಡ್ ಎದುರಿನ ಮೊದಲ ಇನಿಂಗ್ಸ್‌ನಲ್ಲಿ ಭಾರತ ತಂಡವು 98 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದಾಗ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ (Ravindra Jadeja) 6ನೇ ವಿಕೆಟ್‌ಗೆ 222 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದರು. ರಿಷಭ್ ಪಂತ್ (Rishabh Pant) ಮೊದಲ ಇನಿಂಗ್ಸ್‌ನಲ್ಲಿ 146 ರನ್ ಬಾರಿಸಿ ಮಿಂಚಿದ್ದರು. ಅದೇ ರೀತಿ ಎರಡನೇ ಇನಿಂಗ್ಸ್‌ನಲ್ಲೂ ರಿಷಭ್ ಪಂತ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಮೂಲಕ ಮತ್ತೊಂದು ಆಕರ್ಷಕ ಅರ್ಧಶತಕ ಚಚ್ಚಿದ್ದಾರೆ. ಇಂಗ್ಲೆಂಡ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಪಂತ್, 86 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ 57 ರನ್ ಬಾರಿಸಿ ಜಾಕ್‌ ಲೀಚ್ ಬೌಲಿಂಗ್‌ನಲ್ಲಿ ರಿವರ್ಸ್‌ ಸ್ವೀಪ್ ಮಾಡುವ ಯತ್ನದಲ್ಲಿ ಜೋ ರೂಟ್‌ಗೆ (Joe Root) ಕ್ಯಾಚಿತ್ತು ಪೆವಿಲಿಯನ್ ಸೇರಿದರು.

Birmingham Test: ಮತ್ತೆ ಅರ್ಧಶತಕ ಚಚ್ಚಿ ಹೊಸ ದಾಖಲೆ ಬರೆದ ರಿಷಭ್‌ ಪಂತ್..!

400+ ರನ್ ಮುನ್ನಡೆ ಸಾಧಿಸುತ್ತಾ ಟೀಂ ಇಂಡಿಯಾ: ಸದ್ಯ ಟೀಂ ಇಂಡಿಯಾ 7 ವಿಕೆಟ್ ಕಳೆದುಕೊಂಡು 229 ರನ್ ಬಾರಿಸಿದ್ದು, ಒಟ್ಟಾರೆ 361 ರನ್‌ಗಳ ಮುನ್ನಡೆ ಸಾಧಿಸಿದೆ. ಮೊದಲ ಇನಿಂಗ್ಸ್‌ನಲ್ಲಿ ಸಮಯೋಚಿತ ಶತಕ ಚಚ್ಚಿದ್ದ ರವೀಂದ್ರ ಜಡೇಜಾ 17 ರನ್ ಬಾರಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಜಡೇಜಾಗೆ ಅನುಭವಿ ವೇಗಿ ಮೊಹಮ್ಮದ್ ಶಮಿ ಉತ್ತಮ ಸಾಥ್ ನೀಡಿದ್ದು 12 ಎಸೆತಗಳಲ್ಲಿ 13 ರನ್‌ ಗಳಿಸಿದ್ದಾರೆ. ಇನ್ನು ಹಂಗಾಮಿ ನಾಯಕ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಕ್ರೀಸ್‌ಗಿಳಿಯುವುದು ಬಾಕಿಯಿದೆ. ಇನ್ನು ಕೇವಲ 39 ರನ್ ಬಾರಿಸಿದರೇ ಟೀಂ ಇಂಡಿಯಾ 400 ರನ್‌ಗಳ ಮುನ್ನಡೆ ಪಡೆಯಲಿದೆ. ಟೀಂ ಇಂಡಿಯಾ 400+ ಮುನ್ನಡೆ ದಾಖಲಿಸಿದರೇ ಬಹುತೇಕ ಆತಿಥೇಯ ಇಂಗ್ಲೆಂಡ್ ಎದುರು ಬಿಗಿಹಿಡಿತ ಸಾಧಿಸಬಹುದು.

Follow Us:
Download App:
  • android
  • ios