ಬೆಂಗಳೂರು(ಫೆ.09): ಇಂಗ್ಲೆಂಡ್‌ ವಿರುದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬರೋಬ್ಬರಿ 227 ರನ್‌ಗಳ ಹೀನಾಯ ಸೋಲು ಕಂಡಿದೆ. ಇದರೊಂದಿಗೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಸತತ 4ನೇ ಟೆಸ್ಟ್ ಸೋಲು ಅನುಭವಿಸಿದೆ. 32 ವರ್ಷದ ವಿರಾಟ್ ಕೊಹ್ಲಿ ಎರಡನೇ ಇನಿಂಗ್ಸ್‌ನಲ್ಲಿ 72 ರನ್‌ ಬಾರಿಸುವ ಮೂಲಕ ತಂಡವನ್ನ ಸೋಲಿನಿಂದ ಪಾರು ಮಾಡಲು ಪ್ರಯತ್ನಿಸಿದರಾದರೂ ಉಳಿದ ಬ್ಯಾಟ್ಸ್‌ಮನ್‌ಗಳು ನೆಲಕಚ್ಚಿ ಆಡದ ಪರಿಣಾಮ ಭಾರೀ ಅಂತರದ ಸೋಲು ಭಾರತಕ್ಕೆ ಎದುರಾಯಿತು.

ಮೊದಲಿಗೆ ನ್ಯೂಜಿಲೆಂಡ್ ಎದುರು 2 ಟೆಸ್ಟ್ ಪಂದ್ಯ ಸೋತಿದ್ದ ವಿರಾಟ್ ಕೊಹ್ಲಿ ಪಡೆ, ಆ ಬಳಿಕ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ದ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಸೋತಿತ್ತು. ಇದೀಗ ಇಂಗ್ಲೆಂಡ್ ವಿರುದ್ದದ ಮೊದಲ ಟೆಸ್ಟ್‌ ಸೋಲಿನೊಂದಿಗೆ ವಿರಾಟ್ ಕೊಹ್ಲಿ ನಾಯಕತ್ವದ ಮೇಲೆ ಪ್ರಶ್ನೆಗಳು ಏಳಲಾರಂಭಿಸಿವೆ. ಅದರಲ್ಲಿ ಪ್ರಮುಖವಾಗಿ ಚೆನ್ನೈ ಟೆಸ್ಟ್‌ಗೆ ಕುಲ್ದೀಪ್‌ ಯಾದವ್‌ ಅವರಿಗೆ ಬೆಂಚ್ ಕಾಯಿಸುವಂತೆ ಮಾಡಿದ್ದೇಕೆ ಎನ್ನುವಂತಹ ಪ್ರಶ್ನೆಗಳನ್ನು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಕೇಳಲಾರಂಭಿಸಿದ್ದಾರೆ.

ಟೀಂ ಇಂಡಿಯಾ ಸೋಲಿಸಿದ ಇಂಗ್ಲೆಂಡ್‌ಗೆ ಜೈ ಹೋ ಎಂದ ನೆಟ್ಟಿಗರು..!

ಕೊಹ್ಲಿ ಕೆಳಗಿಳಿಸಿ ರಹಾನೆಗೆ ನಾಯಕತ್ವ ಪಟ್ಟ ನೀಡಿ:

ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಅಡಿಲೇಡ್‌ ಟೆಸ್ಟ್ ಪಂದ್ಯವನ್ನು ಹೀನಾಯವಾಗಿ ಸೋತಿತ್ತು. ಇದಾದ ಬಳಿಕ ಪಿತೃತ್ವದ ರಜೆಯ ಮೇರೆಗೆ ವಿರಾಟ್ ತವರಿಗೆ ಮರಳಿದ್ದರು. ವಿರಾಟ್ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ಟೀಂ ಇಂಡಿಯಾವನ್ನು ಯುಶಸ್ವಿಯಾಗಿ ಮುನ್ನಡೆಸಿ 2-1 ಅಂತರದಲ್ಲಿ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯನ್ನು ಗೆಲ್ಲಿಸಿದ್ದರು. ಇದೀಗ ಇಂಗ್ಲೆಂಡ್ ವಿರುದ್ದವೂ ಟೀಂ ಇಂಡಿಯಾ ಮೊದಲ ಟೆಸ್ಟ್ ಪಂದ್ಯವನ್ನು ಹೀನಾಯವಾಗಿ ಸೋಲು ಕಂಡ ಬೆನ್ನಲ್ಲೇ ಟೀಂ ಇಂಡಿಯಾ ಟೆಸ್ಟ್ ನಾಯಕತ್ವ ಬದಲು ಮಾಡಿ ಎನ್ನುವ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಮುನ್ನೆಲೆಗೆ ಬಂದಿದೆ.