ಚೆನ್ನೈ(ಫೆ.08): ವಾಷಿಂಗ್ಟನ್ ಸುಂದರ್‌(85*) ಕೆಚ್ಚೆದೆಯ ಹೋರಾಟದ ಹೊರತಾಗಿಯೂ ಇಂಗ್ಲೆಂಡ್‌ ಮಾರಕ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ ಕೇವಲ 337 ರನ್‌ಗಳಿಗೆ ಸರ್ವಪತನ ಕಂಡಿದೆ. ಇದರೊಂದಿಗೆ ಮೊದಲ ಇನಿಂಗ್ಸ್‌ನಲ್ಲಿ ಭಾರತ 241 ರನ್‌ಗಳ ಹಿನ್ನಡೆ ಅನುಭವಿಸಿದೆ. ಇಂಗ್ಲೆಂಡ್‌ಗೆ ಫಾಲೋ ಆನ್‌ ಹೇರಲು ಅವಕಾಶವಿದ್ದರೂ ನಾಯಕ ರೂಟ್‌ ಫಾಲೋ ಆನ್ ಹೇರದೇ ಎರಡನೇ ಇನಿಂಗ್ಸ್‌ ಬ್ಯಾಟಿಂಗ್‌ ಮಾಡಲು ತೀರ್ಮಾನಿಸಿದ್ದಾರೆ.

ಇನ್ನು ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್‌ ಮೊದಲ ಎಸೆತದಲ್ಲೇ ರೋರಿ ಬರ್ನ್ಸ್‌ ವಿಕೆಟ್‌ ಕಳೆದುಕೊಂಡಿದೆ. ಅಶ್ವಿನ್‌ ಬೌಲಿಂಗ್‌ನಲ್ಲಿ ಭಾರತ ತಂಡಕ್ಕೆ ಮೊದಲ ಯಶಸ್ಸು ದಕ್ಕಿಸಿಕೊಟ್ಟಿದ್ದಾರೆ. ರೋರಿ ಬರ್ನ್ಸ್‌ ಸ್ಲಿಪ್‌ನಲ್ಲಿದ್ದ ಅಜಿಂಕ್ಯ ರಹಾನೆಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

ಹೌದು, ಮೂರನೇ ದಿನದಾಟದಂತ್ಯಕ್ಕೆ 6 ವಿಕೆಟ್‌ ಕಳೆದುಕೊಂಡು 257 ರನ್‌ ಬಾರಿಸಿದ್ದ ಟೀಂ ಇಂಡಿಯಾ, ನಾಲ್ಕನೇ ದಿನದಾಟವನ್ನು ಉತ್ತಮವಾಗಿಯೇ ಆರಂಭಿಸಿತು. ಅದರಲ್ಲೂ ಎರಡನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಲೋಕಲ್ ಹೀರೋ ವಾಷಿಂಗ್ಟನ್‌ ಸುಂದರ್‌ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. 138 ಎಸೆತಗಳನ್ನು ಎದುರಿಸಿದ ಸುಂದರ್‌ 12 ಬೌಂಡರಿ ಹಾಗೂ 2 ಸಿಕ್ಸರ್‌ ನೆರವಿನಿಂದ 85 ರನ್‌ ಬಾರಿಸಿ ಅಜೇಯರಾಗುಳಿದರು. ಮತ್ತೊಂದು ತುದಿಯಲ್ಲಿ ರವಿಚಂದ್ರನ್ ಅಶ್ವಿನ್‌(31) ಕೂಡಾ ಉತ್ತಮ ಸಾಥ್ ನೀಡಿದರು.

ಅಶ್ವಿನ್‌ ಹಾಗೂ ವಾಷಿಂಗ್ಟನ್ ಸುಂದರ್ ಜೋಡಿ ಬೇರ್ಪಡುತ್ತಿದ್ದಂತೆ ಟೀಂ ಇಂಡಿಯಾ ಬಾಲಂಗೋಚಿಗಳಾದ ನದೀಮ್‌(0), ಇಶಾಂತ್(4) ಹಾಗೂ ಬುಮ್ರಾ(0) ಒಂದಂಕಿ ಮೊತ್ತಕ್ಕೆ ವಿಕೆಟ್‌ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು.