ಚೆನ್ನೈ(ಫೆ.13): ಇಂಗ್ಲೆಂಡ್ ಸ್ಪಿನ್ನರ್‌ಗಳು ಮತ್ತೆ ಕೈಚಳಕ ತೋರಿದ್ದು, ಸೆಟ್‌ ಆಗಿದ್ದ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ ಹಾಗೂ ಅಜಿಂಕ್ಯ ರಹಾನೆಯನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೆ ಕೇವಲ ಒಂದು ರನ್‌ ಅಂತರದಲ್ಲಿ ಎರಡು ವಿಕೆಟ್‌ಗಳು ಪತನವಾಗಿವೆ. 

ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್ ಶರ್ಮಾ ಆಕರ್ಷಕ ಶತಕ ಬಾರಿಸಿ ದ್ವಿಶತಕದತ್ತ ದಾಪುಗಾಲಿಡುತ್ತಿರುವಾಗಲೇ ಇಂಗ್ಲೆಂಡ್‌ ಸ್ಪಿನ್ನರ್ ಜಾಕ್‌ ಲೀಚ್‌ ಶಾಕ್‌ ನೀಡಿದ್ದಾರೆ. ಹಿಟ್‌ಮ್ಯಾನ್‌ 161 ರನ್‌ ಬಾರಿಸಿ ಮೋಯಿನ್ ಅಲಿಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದ್ದಾರೆ.

ಹೌದು, ಆರಂಭಿಕ ಆಘಾತ ನಡುವೆಯೇ ತಂಡವನ್ನು ಸಂಕಷ್ಟದಿಂದ ಪಾರುಮಾಡುವಲ್ಲಿ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಯಶಸ್ವಿಯಾಗಿದ್ದರು. ಬರೋಬ್ಬರಿ 231 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ 18 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 161 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು. ಇದರೊಂದಿಗೆ 4ನೇ ವಿಕೆಟ್‌ಗೆ ಅಜಿಂಕ್ಯ ರಹಾನೆ ಜತೆಗಿನ 162 ರನ್‌ಗಳ ಜತೆಯಾಟಕ್ಕೆ ತೆರೆಬಿದ್ದಿತು.

ಚೆನ್ನೈ ಟೆಸ್ಟ್‌: ಹಿಟ್‌ಮ್ಯಾನ್ ರೋಹಿತ್ ಶರ್ಮಾ ಆಕರ್ಷಕ ಶತಕ

ರೋಹಿತ್ ಶರ್ಮಾ ವಿಕೆಟ್ ಪತನವಾಗಿ ಕೆಲ ಓವರ್‌ಗಳಲ್ಲೇ ಉಪನಾಯಕ ಅಜಿಂಕ್ಯ ರಹಾನೆ ಸಹಾ ಪೆವಿಲಿಯನ್ ಸೇರಿದ್ದಾರೆ. ಅಜಿಂಕ್ಯ ರಹಾನೆ 149 ಎಸೆತಗಳನ್ನು ಎದುರಿಸಿ 9 ಬೌಂಡರಿ ಸಹಿತ 67 ರನ್‌ ಬಾರಿಸಿ ಮೋಯಿನ್ ಅಲಿ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್‌ ಆಗಿ ಪೆವಿಲಿಯನ್ ಸೇರಿದರು. 

ಇದೀಗ ಭಾರತ ತಂಡ 75.2 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 249 ರನ್‌ ಬಾರಿಸಿದ್ದು, ರವಿಚಂದ್ರನ್ ಅಶ್ವಿನ್ ಹಾಗೂ ರಿಷಭ್‌ ಪಂತ್ ಕ್ರೀಸ್‌ನಲ್ಲಿದ್ದಾರೆ.