ಚೆನ್ನೈ ಟೆಸ್ಟ್‌: ಭಾರತಕ್ಕೆ ಆಘಾತಕಾರಿ ಸೋಲು, ಇಂಗ್ಲೆಂಡ್‌ ಶುಭಾರಂಭ

ಚೆನ್ನೈ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಭಾರತ ಕ್ರಿಕೆಟ್‌ ತಂಡ 227 ರನ್‌ಗಳ ಆಘಾತಕಾರಿ ಸೋಲು ಕಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

Chennai Test England Tharash India by 227 runs in 1st Test kvn

ಚೆನ್ನೈ(ಫೆ.09): ಇಂಗ್ಲೆಂಡ್ ಸಂಘಟಿತ ಬೌಲಿಂಗ್‌ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 192 ರನ್‌ಗಳಿಗೆ ಸರ್ವಪತನ ಕಂಡಿದೆ. ಇದರೊಂದಿಗೆ ಇಂಗ್ಲೆಂಡ್‌ ಮೊದಲ ಟೆಸ್ಟ್ ಪಂದ್ಯದಲ್ಲಿ 227 ರನ್‌ಗಳ ಭರ್ಜರಿ ಗೆಲುವು ಸಾಧಿಸುವುದರ ಮೂಲಕ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಭಾರತ 2017ರ ಬಳಿಕ ಇದೇ ಮೊದಲ ಬಾರಿಗೆ ತವರಿನಲ್ಲಿ ಟೆಸ್ಟ್ ಸೋಲು ಕಂಡಿದೆ. 

ಇಂಗ್ಲೆಂಡ್‌ ನೀಡಿದ್ದ 420 ರನ್‌ಗಳ ಗುರಿ ಪಡೆದಿದ್ದ ಆತಿಥೇಯ ಟೀಂ ಇಂಡಿಯಾ ನಾಲ್ಕನೇ ದಿನದಾಟದಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 39 ರನ್‌ ಗಳಿಸಿತ್ತು. ಆದರೆ ಕೊನೆಯ ದಿನದಾಟದಲ್ಲಿ ಇಂಗ್ಲೆಂಡ್‌ ಬೌಲರ್‌ಗಳು ಮಿಂಚಿನ ದಾಳಿ ನಡೆಸುವ ಮೂಲಕ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. 5ನೇ ದಿನದಾಟದ ಮೊದಲ ಸೆಷನ್‌ನಲ್ಲಿಯೇ ಭಾರತದ ಐವರು ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್ನಿಗಟ್ಟುವ ಮೂಲಕ ತವರಿನ ತಂಡಕ್ಕೆ ರೂಟ್ ಪಡೆ ಸೋಲಿನ ಭೀತಿ ಹುಟ್ಟಿಸಿತು. 

ಚೆನ್ನೈ ಟೆಸ್ಟ್: ಸೋಲಿನ ಸುಳಿಯಲ್ಲಿ ಟೀಂ ಇಂಡಿಯಾ

ಸೋಲಿನಿಂದ ಪಾರು ಮಾಡದ ನಾಯಕ: ಟೀಂ ಇಂಡಿಯಾ ಪರ ಶುಭ್‌ಮನ್‌ ಗಿಲ್‌ ಆಕರ್ಷಕ 50 ರನ್‌ ಬಾರಿಸಿದರೆ, ನಾಯಕ ವಿರಾಟ್ ಕೊಹ್ಲಿ 104 ಎಸೆತಗಳನ್ನು ಎದುರಿಸಿ 9 ಬೌಂಡರಿ ಸಹಿತ 72 ರನ್‌ ಬಾರಿಸಿ ಬೆನ್‌ ಸ್ಟೋಕ್ಸ್‌ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್ ಆಗುವ ಮೂಲಕ ವಿಕೆಟ್ ಒಪ್ಪಿಸಿದರು. ಕೊಹ್ಲಿ ವಿಕೆಟ್ ಪತನದೊಂದಿಗೆ ಭಾರತದ ಗೆಲುವಿನ ಆಸೆ ಕೈಜಾರಿತು.

ಕೈಕೊಟ್ಟ ಮಧ್ಯಮ ಕ್ರಮಾಂಕ: ಟೀಂ ಇಂಡಿಯಾ ಮಧ್ಯಮ ಕ್ರಮಾಂಕ ದಿಢೀರ್ ಕುಸಿತ ಕಂಡಿದ್ದು, ಭಾರತದ ಸೋಲಿಗೆ ಪ್ರಮುಖ ಕಾರಣ ಎನಿಸಿತು. ರಹಾನೆ(0), ಪಂತ್‌(11), ವಾಷಿಂಗ್ಟನ್ ಸುಂದರ್(0) ಹಾಗೂ ರವಿಚಂದ್ರನ್ ಅಶ್ವಿನ್(9) ಬ್ಯಾಟ್‌ನಿಂದ ನಿರೀಕ್ಷಿತ ರನ್‌ ಬರಲಿಲ್ಲ, ಇದು ಭಾರತ ಸೋಲಿಗೆ ಪ್ರಮುಖ ಕಾರಣ ಎನಿಸಿತು.

ಮಿಂಚಿದ ಆಂಗ್ಲ ಬೌಲರ್‌ಗಳು: ಇಂಗ್ಲೆಂಡ್ ತಂಡದ ಪರ ಸ್ಪಿನ್ನರ್ ಜಾಕ್ ಲೀಚ್‌ 4 ವಿಕೆಟ್ ಪಡೆದರೆ, ಜೇಮ್ಸ್‌ ಆ್ಯಂಡರ್‌ಸನ್ 3  ಹಾಗೂ ಜೋಫ್ರಾ ಆರ್ಚರ್, ಡೋಮಿನಿಕ್ ಬೆಸ್‌ ಮತ್ತು ಬೆನ್ ಸ್ಟೋಕ್ಸ್ ತಲಾ ಒಂದೊಂದು ವಿಕೆಟ್ ಪಡೆದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಇಂಗ್ಲೆಂಡ್ ತಂಡ ನಾಯಕ ಜೋ ರೂಟ್‌ ಬಾರಿಸಿದ ಆಕರ್ಷಕ ದ್ವಿಶತಕದ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 578 ರನ್‌ ಬಾರಿಸಿತ್ತು. ಇದಕ್ಕುತ್ತರವಾಗಿ ಭಾರತ ಕೇವಲ 337 ರನ್‌ಗಳಿಗೆ ಸರ್ವಪತನ ಕಂಡಿತ್ತು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ 178 ರನ್‌ ಬಾರಿಸಿ ಸರ್ವಪತನ ಕಾಣುವ ಮೂಲಕ ಭಾರತಕ್ಕೆ ಗೆಲ್ಲಲು 420 ರನ್‌ಗಳ ಗುರಿ ನೀಡಿತ್ತು.

Latest Videos
Follow Us:
Download App:
  • android
  • ios