'IPL ನಿವೃತ್ತಿ ಹೇಳಲು ಸರಿಯಾದ ಸಮಯ, ಆದರೆ..?' ರಿಟೈರ್‌ಮೆಂಟ್ ಬಗ್ಗೆ ಧೋನಿ ಅಚ್ಚರಿಯ ಮಾತು..!
5ನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದು ಬೀಗಿದ ಚೆನ್ನೈ ಸೂಪರ್ ಕಿಂಗ್ಸ್
ನಿವೃತ್ತಿ ನಿರ್ಧಾರದ ಕುರಿತಂತೆ ತುಟಿಬಿಚ್ಚಿದ ಕ್ಯಾಪ್ಟನ್ ಕೂಲ್
ಕಪ್ ಗೆದ್ದ ಬೆನ್ನಲ್ಲೇ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಧೋನಿ
ಅಹಮದಾಬಾದ್(ಮೇ.30): 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ರೋಚಕವಾಗಿ ಮಣಿಸಿದ ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ 5ನೇ ಬಾರಿಗೆ ಟ್ರೋಫಿ ಗೆದ್ದು, ಮುಂಬೈ ಇಂಡಿಯನ್ಸ್ ದಾಖಲೆಯನ್ನು ಸರಿಗಟ್ಟಿದೆ. ಇನ್ನು ಐಪಿಎಲ್ ಟ್ರೋಫಿ ಜಯಿಸಿದ ಬೆನ್ನಲ್ಲೇ ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಿದಾಯ ಘೋಷಿಸಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ. ಇದಷ್ಟೇ ಅಲ್ಲದೇ ತಮ್ಮ ಕ್ರಿಕೆಟ್ ಭವಿಷ್ಯದ ಬಗ್ಗೆ ಮತ್ತೊಮ್ಮೆ ಅಚ್ಚರಿಯ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.
ಹೌದು, ಮಹೇಂದ್ರ ಸಿಂಗ್ ಧೋನಿ ತಾವು ಈಗ ನಿವೃತ್ತಿಯಾಗುತ್ತಿಲ್ಲ ಎನ್ನುವ ಸುಳಿವನ್ನು ಬಿಟ್ಟುಕೊಟ್ಟಿದ್ದು, ದೇಹ ಸ್ಪಂದಿಸಿದರೆ ಇನ್ನೊಂದು ಆವೃತ್ತಿಯಲ್ಲಿ ಐಪಿಎಲ್ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಐಪಿಎಲ್ ಕಪ್ ಜಯಿಸಿದ ಬಳಿಕ ತಾವು ಸುಲಭವಾಗಿ ನಿರ್ಧಾರವನ್ನು ತೆಗೆದುಕೊಳ್ಳಬಹುದು, ಆದರೆ ನಾನು
2019ರ ಐಪಿಎಲ್ ಬಳಿಕ ಪ್ರತಿ ಆವೃತ್ತಿಯ ಐಪಿಎಲ್ ಮುಗಿಯುತ್ತಿದ್ದಂತೆಯೇ ಧೋನಿ ನಿವೃತ್ತಿಯ ಕುರಿತಂತೆ ಮಾತುಗಳು ಕೇಳಿ ಬರುವುದು ತೀರಾ ಸಹಜ ಎನಿಸಿದೆ. ಈ ಆವೃತ್ತಿಯಂತೂ ಧೋನಿ ಆಡಲಿರುವ ಕೊನೆಯ ಐಪಿಎಲ್ ಆವೃತ್ತಿಯಾಗಬಹುದೆಂದು ಬಿಂಬಿತವಾಗಿತ್ತು. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮೈದಾನಕ್ಕೆ ಬಂದು ಧೋನಿ ಆಟವನ್ನು ಅಭಿಮಾನಿಗಳು ಕಣ್ತುಂಬಿಕೊಂಡಿದ್ದರು.
'ಮಹಿ ಬಾಯ್, ನಿಮಗಾಗಿ ಏನು ಬೇಕಾದರೂ ಮಾಡ್ತೇನೆ': ಕಪ್ ಗೆಲ್ಲಿಸಿದ ಜಡ್ಡು ಟ್ವೀಟ್ ವೈರಲ್..!
ಈ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಬಳಿ, ತಾವು ಈ ವರ್ಷ ಐಪಿಎಲ್ ಟ್ರೋಫಿ ಗೆದ್ದು, ಮುಂದಿನ ವರ್ಷ ಕೂಡಾ ಐಪಿಎಲ್ ಆಡುವುದಾಗಿ ತಿಳಿಸಿದ್ದರು ಎಂದು ರೈನಾ ಹೇಳಿದ್ದರು. ಇನ್ನು ಚಾಂಪಿಯನ್ ಪಟ್ಟ ಅಲಂಕರಿಸಿದ ಬಳಿಕ ಖ್ಯಾತ ಕ್ರಿಕೆಟ್ ವಿಶ್ಲೇಷಕ ಹಾಗೂ ವೀಕ್ಷಕ ವಿವರಣೆಗಾರರಾಗಿರು ಹರ್ಷ ಬೋಗ್ಲೆ ಕೂಡಾ, ಧೋನಿಯವರ ಬಳಿ ಕೇಳಿದ ನೇರ ಪ್ರಶ್ನೆಗೆ ಕ್ಯಾಪ್ಟನ್ ಕೂಲ್ ನೀಡಿದ ಪ್ರತಿಕ್ರಿಯೆ ಎಲ್ಲಾ ಊಹಾಪೋಹಗಳಿಗೆ ತೆರೆ ಬೀಳುವಂತೆ ಮಾಡಿತು.
"ನನ್ನಿಂದ ಉತ್ತರವನ್ನು ಬಯಸುತ್ತಿದ್ದೀರಾ ಅಲ್ವಾ?. ನಿವೃತ್ತಿ ಘೋಷಿಸಲು ನನಗೆ ಇದು ಅತ್ಯುತ್ತಮವಾದ ಸಮಯ. ಆದರೆ ಎಲ್ಲಾ ಕಡೆಯಿಂದಲೂ ನನಗೆ ನೀಡಿದ ಪ್ರೀತಿಯನ್ನು ಗಮನಿಸಿದಾಗ, ಇಲ್ಲಿಂದ ನಿವೃತ್ತಿ ಘೋಷಿಸುವುದು ತುಂಬಾ ಸುಲಭವಾದ ನಿರ್ಧಾರ ಎನಿಸುತ್ತದೆ. ಆದರೆ ಮುಂದಿನ 9 ತಿಂಗಳಲ್ಲಿ ಕಠಿಣ ಪರಿಶ್ರಮಪಟ್ಟು ಇನ್ನೊಂದು ಆವೃತ್ತಿಯ ಐಪಿಎಲ್ ಆಡಲು ಎದುರು ನೋಡುತ್ತಿದ್ದೇನೆ. ಇದು ನನಗೆ ಒಂದೊಳ್ಳೆಯ ಕೊಡುಗೆ, ದೇಹ ಸ್ಪಂದಿಸುವುದು ಸುಲಭವಲ್ಲ" ಎಂದು ಎಂ ಎಸ್ ಧೋನಿ ಹೇಳಿದ್ದಾರೆ.
250 ಐಪಿಎಲ್ ಪಂದ್ಯ ಆಡಿದ ಮೊದಲಿಗ ಧೋನಿ!
ಗುಜರಾತ್ ವಿರುದ್ಧ ಫೈನಲ್‌ನಲ್ಲಿ ಕಣಕ್ಕಿಳಿಯುವುದರೊಂದಿಗೆ ಚೆನ್ನೈ ನಾಯಕ ಎಂ.ಎಸ್.ಧೋನಿ ಐಪಿಎಲ್ನಲ್ಲಿ 250 ಪಂದ್ಯವಾಡಿದ ಮೊದಲ ಆಟಗಾರ ಎನಿಸಿಕೊಂಡರು. 2008ರ ಚೊಚ್ಚಲ ಆವೃತ್ತಿ (2016, 2017ರಲ್ಲಿ ಪುಣೆ ಪರ)ಯಿಂದಲೂ ಧೋನಿ ಚೆನ್ನೈ ಪರ ಆಡುತ್ತಿದ್ದು, 5000ಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ. ಇನ್ನು, 243 ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದು, ದಿನೇಶ್ ಕಾರ್ತಿಕ್ 242, ವಿರಾಟ್ ಕೊಹ್ಲಿ 237, ಜಡೇಜಾ 226 ಪಂದ್ಯಗಳನ್ನಾಡಿದ್ದಾರೆ. ಇದೇ ವೇಳೆ ಟಿ20 ಕ್ರಿಕೆಟ್‌ನಲ್ಲಿ 300 ಬಲಿ ಪಡೆದ ಮೊದಲ ವಿಕೆಟ್ ಕೀಪರ್ ಎನ್ನುವ ದಾಖಲೆಯನ್ನೂ ಧೋನಿ ಬರೆದರು.