2014ರಲ್ಲಿ ಸ್ಥಗಿತಗೊಂಡಿದ್ದ ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿ 2026ರಲ್ಲಿ ಪುನರಾರಂಭಗೊಳ್ಳುವ ಸಾಧ್ಯತೆಯಿದೆ. ಐಪಿಎಲ್, ಬಿಗ್‌ಬ್ಯಾಶ್ ಸೇರಿದಂತೆ ವಿವಿಧ ಲೀಗ್‌ಗಳ ಅಗ್ರ ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ.

ಸಿಂಗಾಪುರ: 2014ರಲ್ಲಿ ಸ್ಥಗಿತಗೊಂಡಿದ್ದ ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿ ಮತ್ತೆ ಆರಂಭಗೊಳ್ಳುವ ನಿರೀಕ್ಷೆಯಿದೆ. 2026ರ ಸೆಪ್ಟೆಂಬರ್‌ ತಿಂಗಳಲ್ಲಿ ಲೀಗ್‌ ನಡೆಯಬಹುದು ಎಂದು ವರದಿಯಾಗಿದೆ.

ಸಿಂಗಾಪುರದಲ್ಲಿ ನಡೆದ ಐಸಿಸಿ ಸಭೆಯಲ್ಲಿ ಚಾಂಪಿಯನ್ಸ್ ಲೀಗ್ ಅನ್ನು ಮತ್ತೆ ಪ್ರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ. ಐಪಿಎಲ್‌, ಬಿಗ್‌ಬ್ಯಾಶ್‌ ಸೇರಿ ವಿವಿಧ ಲೀಗ್‌ಗಳ ಅಗ್ರ ತಂಡಗಳ ನಡುವಿನ ಟೂರ್ನಿ 2009ರಲ್ಲಿ ಆರಂಭಗೊಂಡಿತ್ತು. ಆದರೆ ವಿವಿಧ ಕಾರಣಗಳಿಂದಾಗಿ 2014ರಲ್ಲಿ ಸ್ಥಗಿತಗೊಂಡಿತ್ತು. ಈಗ ಹಲವು ದೇಶಗಳಲ್ಲಿ ಟಿ20 ಲೀಗ್ ನಡೆಯುತ್ತಿದ್ದು, ಅದರ ಜನಪ್ರಿಯತೆ ಕೂಡಾ ಹೆಚ್ಚಾಗಿವೆ. ಹೀಗಾಗಿ ಮತ್ತೆ ಚಾಂಪಿಯನ್ಸ್ ಲೀಗ್ ಆಯೋಜಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.

ಟೂರ್ನಿಯಲ್ಲಿ ನ್ಯೂ ಸೌತ್‌ ವೇಲ್ಸ್‌(2009), ಚೆನ್ನೈ ಸೂಪರ್‌ ಕಿಂಗ್ಸ್(2010), ಮುಂಬೈ ಇಂಡಿಯನ್ಸ್‌(2011), ಸಿಡ್ನಿ ಸಿಕ್ಸರ್ಸ್‌(2012), ಮುಂಬೈ ಇಂಡಿಯನ್ಸ್‌(2013), ಚೆನ್ನೈ ಸೂಪರ್‌ ಕಿಂಗ್ಸ್‌(2014) ಚಾಂಪಿಯನ್‌ ಆಗಿವೆ. ಇದೀಗ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಹೀಗಾಗಿ ಆರ್‌ಸಿಬಿ ಕೂಡಾ ಮುಂಬರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.

ತ್ರಿಕೋನ ಟಿ20 ಸರಣಿಯ ಫೈನಲ್‌ಗೆ ದಕ್ಷಿಣ ಆಫ್ರಿಕಾ

ಹರಾರೆ: ಜಿಂಬಾಬ್ವೆ ವಿರುದ್ಧ 7 ವಿಕೆಟ್‌ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ ತ್ರಿಕೋನ ಟಿ20 ಸರಣಿಯ ಫೈನಲ್‌ ಪ್ರವೇಶಿಸಿದೆ. ನ್ಯೂಜಿಲೆಂಡ್‌ ಈಗಾಗಲೇ ಫೈನಲ್‌ ತಲುಪಿತ್ತು. ಭಾನುವಾರದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಜಿಂಬಾಬ್ವೆ 6 ವಿಕೆಟ್‌ಗೆ 144 ರನ್‌ ಗಳಿಸಿತು. ಬ್ರಿಯಾನ್‌ ಬೆನೆಟ್‌ 61 ರನ್‌ ಸಿಡಿಸಿದರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ದ.ಆಫ್ರಿಕಾ 17.2 ಓವರ್‌ಗಳಲ್ಲಿ ಜಯಗಳಿಸಿತು. ರುಬಿನ್‌ ಹೆರ್ಮಾನ್‌ 63, ನಾಯಕ ವ್ಯಾನ್ ಡೆರ್‌ ಡುಸ್ಸೆನ್‌ ಔಟಾಗದೆ 52 ರನ್‌ ಗಳಿಸಿದರು.

ಟಿ20: ಬಾಂಗ್ಲಾ ವಿರುದ್ಧ ಪಾಕಿಸ್ತಾನಕ್ಕೆ ಸೋಲು

ಢಾಕಾ: ಪಾಕಿಸ್ತಾನ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ 7 ವಿಕೆಟ್‌ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು. ಮೊದಲು ಬ್ಯಾಟ್‌ ಮಾಡಿದ ಪಾಕ್‌ 19.3 ಓವರ್‌ಗಳಲ್ಲಿ 110 ರನ್‌ಗೆ ಆಲೌಟಾಯಿತು. ಫಖರ್‌ ಜಮಾನ್‌(44) ಏಕಾಂಗಿ ಹೋರಾಟ ಪ್ರದರ್ಶಿಸಿದರು. ಸುಲಭ ಗುರಿ ಬೆನ್ನತ್ತಿದ ಬಾಂಗ್ಲಾ 15.3 ಓವರ್‌ಗಳಲ್ಲೆ ಜಯಗಳಿಸಿತು. ಪರ್ವೇಜ್‌ ಹೊಸೈನ್ ಔಟಾಗದೆ 56 ರನ್‌ ಸಿಡಿಸಿದರು.

ಇಂಗ್ಲೆಂಡ್‌ ಟೆಸ್ಟ್‌ ಸರಣಿ: ಭಾರತ ತಂಡಕ್ಕೆ ಯುವ ವೇಗಿ ಅನ್ಶುಲ್‌ ಸೇರ್ಪಡೆ

ಮ್ಯಾಂಚೆಸ್ಟರ್‌: ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಆಡಲು ಭಾರತ ತಂಡಕ್ಕೆ ಯುವ ವೇಗಿ ಅನ್ಶುಲ್‌ ಕಂಬೋಜ್‌ ಸೇರ್ಪಡೆಗೊಂಡಿದ್ದಾರೆ. ಆಕಾಶ್‌ದೀಪ್‌ ಹಾಗೂ ಅರ್ಶ್‌ದೀಪ್‌ ಸಿಂಗ್‌ ಗಾಯಗೊಂಡ ಕಾರಣ ಹರ್ಯಾಣದ ವೇಗಿಗೆ ಮಣೆ ಹಾಕಲಾಗಿದೆ.

ಆಕಾಶ್‌ದೀಪ್‌ ತೊಡೆಸಂಧು ನೋವಿನಿಂದ ಬಳಲುತ್ತಿದ್ದು, ಅರ್ಶ್‌ದೀಪ್‌ ಕೈಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಹೀಗಾಗಿ ಇವರಿಬ್ಬರೂ 4ನೇ ಟೆಸ್ಟ್‌ ಪಂದ್ಯದ ಆಯ್ಕೆಗೆ ಲಭ್ಯವಿರುವ ಸಾಧ್ಯತೆ ಕಡಿಮೆ. ಈ ಹಿನ್ನೆಲೆಯಲ್ಲಿ 24 ವರ್ಷದ ಅನ್ಶುಲ್‌ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಕಳೆದ ವರ್ಷ ರಣಜಿ ಟ್ರೋಫಿಯಲ್ಲಿ ಕೇರಳ ವಿರುದ್ಧ ಇನ್ನಿಂಗ್ಸ್‌ನ ಎಲ್ಲಾ 10 ವಿಕೆಟ್‌ ಕಬಳಿಸಿ ಮಿಂಚಿದ್ದ ಅನ್ಶುಲ್‌, ಇತ್ತೀಚೆಗೆ ಇಂಗ್ಲೆಂಡ್‌ ಲಯನ್ಸ್‌ ವಿರುದ್ಧ ಭಾರತ ‘ಎ’ ತಂಡದ ಪರ ಉತ್ತಮ ಪ್ರದರ್ಶನ ನೀಡಿದ್ದರು. ಅವರು ಕಳೆದ ಋತುವಿನ ರಣಜಿಯಲ್ಲಿ 6 ಪಂದ್ಯಗಳಲ್ಲಿ 34 ವಿಕೆಟ್‌ ಪಡೆದಿದ್ದರು.