ದಾದಾಗೆ BCCI ಅಧ್ಯಕ್ಷ ಗಾದಿ: ಗಂಗೂಲಿ ಮುಂದಿರುವ ಸವಾಲುಗಳೇನು?
ಬಿಸಿಸಿಐ ನೂತನ ಅಧ್ಯಕ್ಷರಾಗಲಿರುವ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಮುಂದಿರುವ ಸವಾಲುಗಳೇನು..? ಟೀಂ ಇಂಡಿಯಾ ನಾಯಕನಂತೆ, ಬಿಸಿಸಿಐ ಅಧ್ಯಕ್ಷನಾಗಿಯೂ ಯಶಸ್ವಿಯಾಗುತ್ತಾರಾ ದಾದಾ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ...
ನವದೆಹಲಿ[ಅ.15]: ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಶ್ರೀಮಂತ ಕ್ರಿಕೆಟ್ ಮಂಡಳಿಯಾದ ಬಿಸಿಸಿಐ ಅಧ್ಯಕ್ಷ ಹುದ್ದೆಗೇರಲು ರೆಡಿಯಾಗಿದ್ದಾರೆ. ಆದರೆ ಈ ಹುದ್ದೆ ಹೂವಿನ ಹಾಸಿಗೆಯೇನಲ್ಲ.
ಗಂಗೂಲಿ ಕೇವಲ 9 ತಿಂಗಳುಗಳ ಕಾಲ ಬಿಸಿಸಿಐ ಅಧ್ಯಕ್ಷರಾಗಿ ಇರಲಿದ್ದು, ಅವರ ಮುಂದೆ ಹಲವು ಸವಾಲುಗಳಿವೆ. ಮೊದಲಿಗೆ ಬಿಸಿಸಿಐ ಘನತೆ ಹೆಚ್ಚಿಸುವ ಕೆಲಸವನ್ನು ಅವರು ಮಾಡಬೇಕಿದೆ. ಫಿಕ್ಸಿಂಗ್, ಬೆಟ್ಟಿಂಗ್, ಡೋಪಿಂಗ್, ವಯೋಮಿತಿ ಮೋಸ ಪ್ರಕರಣಗಳಿಗೆ ಕಡಿವಾಣ ಹಾಕಲು ಯೋಜನೆಗಳನ್ನು ರೂಪಿಸಬೇಕಿದೆ. ಸ್ವಹಿತಾಸಕ್ತಿ ಸಮಸ್ಯೆ ಜೋರಾಗಿದ್ದು, ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ.
BCCI ಅಧ್ಯಕ್ಷ ಹುದ್ದೆ: ದಾದಾಗೆ ಸಾಥ್ ಕೊಟ್ಟ ಹಳೆ ಹುಲಿಗಳು
ಐಸಿಸಿ ಶಾಕ್!
ಗಂಗೂಲಿ ಅಧ್ಯಕ್ಷರಾಗುತ್ತಿದ್ದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಜತೆ ಗುದ್ದಾಡಬೇಕಿದೆ. ಐಸಿಸಿ ಹಾಗೂ ಬಿಸಿಸಿಐ ನಡುವೆ ಹಣಕಾಸು ಹಂಚಿಕೆ ವಿಚಾರವಾಗಿ ಸಮರ ಆರಂಭಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಪ್ರತಿ ವರ್ಷ ಟಿ20 ವಿಶ್ವಕಪ್ ಹಾಗೂ 3 ವರ್ಷಕ್ಕೊಮ್ಮೆ ಏಕದಿನ ವಿಶ್ವಕಪ್ ನಡೆಸಲು ಐಸಿಸಿ ಪ್ರಸ್ತಾಪವಿರಿಸಿದೆ. ಆ ಮೂಲಕ ಪ್ರಸಾರ ಹಕ್ಕು ಹಣದಲ್ಲಿ ಸಿಂಹಪಾಲು ಪಡೆಯಲು ಐಸಿಸಿ ಮುಂದಾಗಿದೆ. ಇದಕ್ಕೆ ಬಿಸಿಸಿಐ ವಿರೋಧ ವ್ಯಕ್ತಪಡಿಸಿದೆ. ಗಂಗೂಲಿ ಹಾಗೂ ಅವರ ತಂಡ ಬಿಸಿಸಿಐಗೆ ನಷ್ಟವಾಗದಂತೆ ನೋಡಿಕೊಳ್ಳಬೇಕಿದೆ.
ಸೌರವ್ ಗಂಗೂಲಿಗೆ ಬಿಸಿಸಿಐ ಅಧ್ಯಕ್ಷ, ಬ್ರಿಜೇಶ್ ಪಟೇಲ್‌ಗೆ ಐಪಿಎಲ್ ಹೊಣೆ?
ಬಿಸಿಸಿಐನಲ್ಲೂ ಗಂಗೂಲಿಗೆ ಸಿಗುತ್ತಾ ಯಶಸ್ಸು?
ಸೌರವ್ ಗಂಗೂಲಿ ಭಾರತ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ನಾಯಕರ ಪೈಕಿ ಒಬ್ಬರು. ಸಾರ್ವಕಾಲಿಕ ಶ್ರೇಷ್ಠ ಎಡಗೈ ಬ್ಯಾಟ್ಸ್‌ಮನ್‌ಗಳ ಪೈಕಿ ಪ್ರಮುಖರು. ಭಾರತ ಪರ 113 ಟೆಸ್ಟ್, 311 ಏಕದಿನ ಪಂದ್ಯಗಳನ್ನಾಡಿರುವ ಗಂಗೂಲಿ 18000ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ರನ್ ಕಲೆಹಾಕಿದ್ದಾರೆ. 2000ರಿಂದ 2005ರ ವರೆಗೂ ಭಾರತ ತಂಡದ ನಾಯಕರಾಗಿದ್ದ ಗಂಗೂಲಿ, ತಂಡದಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದರು. ಅವರ ನಾಯಕತ್ವದಲ್ಲಿ ತಂಡ 2003ರ ಏಕದಿನ ವಿಶ್ವಕಪ್ ಫೈನಲ್‌ಗೇರಿತ್ತು. ಒಬ್ಬ ಕ್ರಿಕೆಟಿಗನಾಗಿ ಅಪಾರ ಯಶಸ್ಸು ಗಳಿಸಿದ್ದ ಗಂಗೂಲಿ, ಬಿಸಿಸಿಐ ಅಧ್ಯಕ್ಷರಾಗಿಯೂ ಯಶಸ್ಸು ಸಾಧಿಸುತ್ತಾರಾ ಎನ್ನುವ ಕುತೂಹಲವಿದೆ.