Asianet Suvarna News Asianet Suvarna News

IPL 2022: ಬಲಿಷ್ಠ ಟೆಸ್ಟ್‌ ತಂಡ ಕಟ್ಟಲು ಐಪಿಎಲ್‌ ಕನಸು ತ್ಯಾಗ ಮಾಡಿದ ಜೋ ರೂಟ್‌..!

* ಮುಂಬರುವ ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ ಜೋ ರೂಟ್

* ಆ್ಯಷಸ್ ಟೆಸ್ಟ್ ಸರಣಿಯ ಸೋಲಿನ ಬೆನ್ನಲ್ಲೇ ಐಪಿಎಲ್‌ ಕನಸು ತ್ಯಾಗ ಮಾಡಿದ ಟೆಸ್ಟ್ ನಾಯಕ

* ಬಲಿಷ್ಠ ಇಂಗ್ಲೆಂಡ್ ತಂಡ ಕಟ್ಟಲು ಎಂತಹ ತ್ಯಾಗಕ್ಕೂ ರೆಡಿ ಎಂದ ರೂಟ್

Captain Joe Root sacrifices IPL opportunity to rebuild England Test Cricket Squad kvn
Author
Bengaluru, First Published Jan 17, 2022, 4:56 PM IST

ಲಂಡನ್(ಜ.17): ಮುಂಬರುವ 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್‌) (Indian Premier League) ಟೂರ್ನಿಯಲ್ಲಿ ಇಂಗ್ಲೆಂಡ್‌ ಟೆಸ್ಟ್ ತಂಡದ ನಾಯಕ ಜೋ ರೂಟ್ (Joe Root) ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಗಾಳಿ ಸುದ್ದಿಗೆ ಕೊನೆಗೂ ತೆರೆಬಿದ್ದಿದೆ. ಭಾರತ ಚುಟುಕು ಕ್ರಿಕೆಟ್ ಹಬ್ಬ ಐಪಿಎಲ್‌ನಲ್ಲಿ (IPL) ಜೋ ರೂಟ್ ಬ್ಯಾಟಿಂಗ್ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಇನ್ನೂ ಒಂದು ವರ್ಷ ಕಾಯಲೇಬೇಕಾಗಿದೆ. ಇತ್ತೀಚೆಗಷ್ಟೇ ಜೋ ರೂಟ್‌ ತಾವು ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿರುವ ಕುರಿತಂತೆ ಸುಳಿವು ನೀಡಿದ್ದರು. ಆದರೀಗ ಜೋ ರೂಟ್ ಮತ್ತೆ ಮನಸ್ಸು ಬದಲಿಸಿದ್ದಾರೆ.

2021-22ನೇ ಸಾಲಿನ ಆ್ಯಷಸ್ ಟೆಸ್ಟ್ ಸರಣಿಯ (Ashes Test Series) ಕೊನೆಯ ಪಂದ್ಯವಾದ ಹೋಬರ್ಟ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು (England Cricket Team) ಮತ್ತೊಮ್ಮೆ ಆಘಾತಕಾರಿ ಸೋಲು ಕಂಡಿತು. ಇದರ ಬೆನ್ನಲ್ಲೇ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ 31 ವರ್ಷದ ಜೋ ರೂಟ್‌, ತಾವು ಮುಂಬರುವ 2022ನೇ ಸಾಲಿನ ಐಪಿಎಲ್ ಆಟಗಾರರ ಹರಾಜಿನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ತಮ್ಮ ಗಮನವೇನಿದ್ದರೂ ಇಂಗ್ಲೆಂಡ್ ತಂಡವನ್ನು ಬಲಪಡಿಸುವುದಾಗಿದೆ. ಇದಕ್ಕಾಗಿ ಎಂತಹ ತ್ಯಾಗಕ್ಕೂ ತಾವು ಸಿದ್ದವಿರುವುದಾಗಿ ಜೋ ರೂಟ್ ತಿಳಿಸಿದ್ದಾರೆ

ಜೋ ರೂಟ್ ನೇತೃತ್ವದ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್‌ ತಂಡವು 2021-22ನೇ ಸಾಲಿನ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ದ 4-0 ಅಂತರದ ಸೋಲು ಕಾಣುವ ಮೂಲಕ ತೀವ್ರ ಮುಖಭಂಗಕ್ಕೆ ಒಳಗಾಗಿದೆ. ಆಸ್ಟ್ರೇಲಿಯಾ ನೆಲದಲ್ಲಿ ಇಂಗ್ಲೆಂಡ್ ತಂಡವು ಈ ರೀತಿಯ ಹೀನಾಯ ಪ್ರದರ್ಶನ ತೋರಲು ಆಟಗಾರರು ಐಪಿಎಲ್‌ ಪಾಲ್ಗೊಂಡಿದ್ದು ಎಂದು ಹಲವು ಕ್ರಿಕೆಟ್ ಪಂಡಿತರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. 

ನನ್ನೆಲ್ಲ ಶಕ್ತಿ ಹಾಗೂ ಸಾಮರ್ಥ್ಯವನ್ನು ಬಳಸಿಕೊಂಡು ನಾನು ನಮ್ಮ ತಂಡದಲ್ಲಿ ಸಾಕಷ್ಟು ಕೆಲಸವನ್ನು ಮಾಡಬೇಕಿದೆ. ನನ್ನಿಂದ ಏನೆಲ್ಲಾ ಮಾಡಲು ಸಾಧ್ಯವೋ ಅದನ್ನೆಲ್ಲಾ ಮಾಡಲು ನಾನು ಎಂತಹ ತ್ಯಾಗಕ್ಕೂ ಸಿದ್ದನಿದ್ದೇನೆ. ನಮ್ಮ ದೇಶದ ಟೆಸ್ಟ್ ತಂಡದ ಬಗ್ಗೆ ನಾನು ವಿಶೇಷ ಕಾಳಜಿ ಹೊಂದಿದ್ದೇನೆ. ನಮ್ಮ ತಂಡವನ್ನು ಬಲಿಷ್ಠವಾಗಿ ಕಟ್ಟುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗುತ್ತೇನೆ ಎಂದು ಜೋ ರೂಟ್‌ ಹೋಬರ್ಟ್ ಟೆಸ್ಟ್ ಸೋಲಿನ ಬಳಿಕ ಪ್ರತಿಕ್ರಿಯಿಸಿದ್ದಾರೆ. ಜಗತ್ತಿನ ಮಿಲಿಯನ್ ಡಾಲರ್‌ ಟಿ20 ಟೂರ್ನಿ ಎನಿಸಿರುವ ಐಪಿಎಲ್‌ನಲ್ಲಿ ಜೋ ರೂಟ್ ಇದುವರೆಗೂ ಒಂದೇ ಒಂದು ಪಂದ್ಯವನ್ನಾಡಿಲ್ಲ, 

Ashes Test : 56 ರನ್ ಅಂತರದಲ್ಲಿ ಉರುಳಿದ 10 ವಿಕೆಟ್, ಹೋಬರ್ಟ್ ಟೆಸ್ಟ್ ನಲ್ಲಿ ಆಸೀಸ್ ಗೆ ಗೆಲುವು!

ಜೋ ರೂಟ್‌ 2018ರ ಐಪಿಎಲ್ ಆಟಗಾರರ ಹರಾಜಿನಲ್ಲಿ (IPL Players Auction) ತಮ್ಮ ಹೆಸರನ್ನು ನೋಂದಾಯಿಸಿದ್ದರು. ಆದರೆ ಯಾವ ಫ್ರಾಂಚೈಸಿಯು ಜೋ ರೂಟ್ ಅವರನ್ನು ಖರೀದಿಸಲು ಮನಸ್ಸು ಮಾಡಿರಲಿಲ್ಲ. ಇದಾದ ಬಳಿಕ ಜೋ ರೂಟ್ ಐಪಿಎಲ್ ಆಟಗಾರರ ಹರಾಜಿನಲ್ಲಿ ಪಾಲ್ಗೊಂಡಿರಲಿಲ್ಲ. ಬ್ಯಾಟಿಂಗ್ ಅಸಾಧಾರಣ ಪ್ರತಿಭೆ ಹೊಂದಿರುವ ಜೋ ರೂಟ್‌ ಮುಂದೆ ಯಾವಾಗ ಯಾವ ತಂಡದ ಪರ ಕಣಕ್ಕಿಳಿಯುತ್ತಾರೋ ಕಾದು ನೋಡಬೇಕಿದೆ.

ಇನ್ನು ಮತ್ತೊಂದು ವರದಿಯ ಪ್ರಕಾರ ಇಂಗ್ಲೆಂಡ್ ತಂಡದ ವೇಗದ ಬೌಲರ್‌ ಮಾರ್ಕ್‌ ವುಡ್‌ (Mark Wood) ಮುಂಬರುವ ಐಪಿಎಲ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲು ಒಲವು ತೋರಿದ್ದಾರೆ ಎನ್ನಲಾಗಿದೆ. 2018ರಲ್ಲಿ ನಡೆದ 11ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮಾರ್ಕ್‌ ವುಡ್‌ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಇದೀಗ 2022ರ ಐಪಿಎಲ್ ಟೂರ್ನಿಯಲ್ಲಿ ಹೊಸದಾಗಿ ಲಖನೌ ಹಾಗೂ ಅಹಮದಾಬಾದ್ ತಂಡಗಳು ಸೇರ್ಪಡೆಯಾಗಿರುವುದರಿಂದ ಮುಂಬರುವ ಫೆಬ್ರವರಿ 12 ಹಾಗೂ 13ರಂದು ಐಪಿಎಲ್ ಆಟಗಾರರ ಹರಾಜು ಬೆಂಗಳೂರಿನಲ್ಲಿ ನಡೆಯಲಿದೆ. ಹರಾಜಿನಲ್ಲಿ ಆಟಗಾರರು ಪಾಲ್ಗೊಳ್ಳಲು ಹಾಗೂ ಹೆಸರು ನೋಂದಾಯಿಸಲು ಬಿಸಿಸಿಐ ಜನವರಿ 20ರವರೆಗೆ ಗಡುವು ನೀಡಿದೆ. 
 

Follow Us:
Download App:
  • android
  • ios