ಮೆಲ್ಬರ್ನ್‌(ಡಿ.27): ಬಾರ್ಡರ್-ಗವಾಸ್ಕರ್ ಟೆಸ್ಟ್‌ ಸರಣಿಯ ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಅಜಿಂಕ್ಯ ರಹಾನೆ ಭರ್ಜರಿ ಶತಕ ಬಾರಿಸುವ ಮೂಲಕ ಭಾರತ ತಂಡವನ್ನು ಅಪಾಯದಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು, ಒಂದು ಹಂತದಲ್ಲಿ ಟೀಂ ಇಂಡಿಯಾ 64 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕ್ರೀಸ್‌ಗಿಳಿದ ಅಜಿಂಕ್ಯ ರಹಾನೆ ಕ್ಲಾಸ್‌ ಬ್ಯಾಟಿಂಗ್‌ ಮೂಲಕ ಕ್ರಿಕೆಟ್ ಪಂಡಿತರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಆರಂಭದಿಂದಲೇ ಎಚ್ಚರಿಕೆಯ ಬ್ಯಾಟಿಂಗಿಗೆ ಮೊರೆ ಹೋದ ರಹಾನೆ ಮಧ್ಯಮ ಕ್ರಮಾಂಕದಲ್ಲಿ ಹನುಮ ವಿಹಾರಿ ಹಾಗೂ ರಿಷಭ್‌ ಪಂತ್ ಜತೆ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಬಲ ತುಂಬಿದರು. ಇನ್ನು ಆರನೇ ವಿಕೆಟ್‌ಗೆ ಜಡೇಜಾ ಹಾಗೂ ರಹಾನೆ ಜೋಡಿ ಮುರಿಯದ ಶತಕದ ಜತೆಯಾಟವಾಡಿ ತಂಡಕ್ಕೆ ಆಸರೆಯಾಗಿದ್ದಾರೆ.

ಬಾಕ್ಸಿಂಗ್ ಡೇ ಟೆಸ್ಟ್: ರಹಾನೆ ಶತಕ, ಭಾರತಕ್ಕೆ 82 ರನ್‌ಗಳ ಮುನ್ನಡೆ

ಒಟ್ಟು 195 ಎಸೆತಗಳನ್ನು ಎದುರಿಸಿ 11 ಬೌಂಡರಿಗಳ ನೆರವಿನೊಂದಿಗೆ ವೃತ್ತಿಜೀವನದ 12ನೇ ಶತಕ ಬಾರಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ಎರಡನೇ ದಿನದಾಟದಂತ್ಯಕ್ಕೆ 5 ವಿಕೆಟ್‌ ಕಳೆದುಕೊಂಡು 277 ರನ್ ಬಾರಿಸಿದ್ದು, ಮೊದಲ ಇನಿಂಗ್ಸ್‌ನಲ್ಲಿ 82 ರನ್‌ಗಳ ಮುನ್ನಡೆ ಸಾಧಿಸಿದೆ. ಅಜಿಂಕ್ಯ ರಹಾನೆ ಹಾಗೂ ರವೀಂದ್ರ ಜಡೇಜಾ ಬ್ಯಾಟಿಂಗ್‌ ಜತೆಯಾಟಕ್ಕೆ ನೆಟ್ಟಿಗರು ಜೈ ಹೋ ಎಂದಿದ್ದಾರೆ. ವಿರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್, ಯುವರಾಜ್ ಸಿಂಗ್ ಸೇರಿದಂತೆ ವಿದೇಶಿ ಆಟಗಾರರು ರಹಾನೆ ಬ್ಯಾಟಿಂಗ್ ಕೊಂಡಾಡಿದ್ದಾರೆ.