ಮೆಲ್ಬರ್ನ್‌(ಡಿ.27): ಟೀಂ ಇಂಡಿಯಾ ನಾಯಕ ಅಜಿಂಕ್ಯ ರಹಾನೆ ಬಾರಿಸಿದ (104*) ಅಜೇಯ ಶತಕ ಹಾಗೂ ರವೀಂದ್ರ ಜಡೇಜಾ (40*) 6ನೇ ವಿಕೆಟ್‌ಗೆ ಮರಿಯದ ಶತಕದ ಜತೆಯಾಟದ ನೆರವಿನಿಂದ ಟೀಂ ಇಂಡಿಯಾ ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯದಲ್ಲಿ ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ. ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ಎರಡನೇ ದಿನದಾಟದಂತ್ಯಕ್ಕೆ 5 ವಿಕೆಟ್‌ ಕಳೆದುಕೊಂಡು 277 ರನ್ ಬಾರಿಸಿದ್ದು, ಒಟ್ಟಾರೆ ಮೊದಲ ಇನಿಂಗ್ಸ್‌ನಲ್ಲಿ 82 ರನ್‌ಗಳ ಮುನ್ನಡೆ ಸಾಧಿಸಿದೆ.

ಹೌದು, ಮೊದಲ ದಿನದಾಟದಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 36 ರನ್‌ ಗಳಿಸಿದ್ದ ಟೀಂ ಇಂಡಿಯಾ ಎರಡನೇ ದಿನದಾಟವನ್ನು ಅತ್ಯಂತ ಎಚ್ಚರಿಕೆಯಿಂದ ಆರಂಭಿಸಿತು. ಎರಡನೇ ವಿಕೆಟ್‌ಗೆ ಪೂಜಾರ ಮತ್ತು ಗಿಲ್ ಜೋಡಿ 61 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಗಿಲ್‌ 45 ರನ್ ಬಾರಿಸಿ ವಿಕೆಟ್‌ ಒಪ್ಪಿಸಿದರೆ, ಟೆಸ್ಟ್‌ ಸ್ಪೆಷಲಿಸ್ಟ್ ಪೂಜಾರ ಆಟ ಕೇವಲ 17 ರನ್‌ಗಳಿಗೆ ಸೀಮಿತವಾಯಿತು.

ನಾಯಕನ ಆಟವಾಡಿದ ರಹಾನೆ: ಒಂದು ಹಂತದಲ್ಲಿ 63 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ನಾಯಕ ಅಜಿಂಕ್ಯ ರಹಾನೆ ಆಸರೆಯಾದರು. ಕೊಹ್ಲಿ ಅನುಪಸ್ಥಿತಿಯಲ್ಲಿ ಒತ್ತಡದ ಸಂದರ್ಭದಲ್ಲೂ ಧೃತಿಗೆಡದೇ ನಿರ್ಭಯವಾಗಿ ಬ್ಯಾಟ್ ಬೀಸಿದರು. ರಹಾನೆ- ಹನುಮ ವಿಹಾರಿ ಜೋಡಿ(52) ಹಾಗೂ ರಹಾನೆ-ಪಂತ್ ಜೋಡಿ(57) ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ನೆರವಾದರು. ಅಜಿಂಕ್ಯ ರಹಾನೆ 195 ಎಸೆತಗಳನ್ನು ಎದುರಿಸಿ 11 ಬೌಂಡರಿಗಳ ನೆರವಿನಿಂದ ಟೆಸ್ಟ್ ವೃತ್ತಿ ಜೀವನದ 12ನೇ ಟೆಸ್ಟ್ ಶತಕವನ್ನು ಪೂರೈಸಿದರು.

ಜಡ್ಡು-ರಹಾನೆ ಜುಗಲ್ಬಂದಿ: 6ನೇ ವಿಕೆಟ್‌ಗೆ ರವೀಂದ್ರ ಜಡೇಜಾ ಹಾಗೂ ಅಜಿಂಕ್ಯ ರಹಾನೆ ಜೋಡಿ ಆಸ್ಟ್ರೇಲಿಯಾ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಈ ಜೋಡಿ ಮುರಿಯದ 104 ರನ್‌ಗಳ ಜತೆಯಾಟ ನಿಭಾಯಿಸುವ ಮೂಲಕ ತಂಡ ಬೃಹತ್‌ ಮುನ್ನಡೆಯತ್ತ ಕೊಂಡೊಯ್ಯುವ ಯತ್ನ ಮಾಡಿದ್ದಾರೆ. ರಹಾನೆಗೆ ಉತ್ತಮ ಸಾಥ್ ನೀಡಿರುವ ಜಡೇಜಾ 104 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಸಹಿತ 40 ರನ್ ಬಾರಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಎರಡನೇ ದಿನದಾಟದ ಮುಕ್ತಾಯಕ್ಕೆ ಕೆಲವೇ ಓವರ್‌ಗಳು ಬಾಕಿ ಇದ್ದಾಗ ತುಂತುರು ಮಳೆ ಸುರಿದಿದ್ದರಿಂದ ಎರಡನೇ ದಿನದಾಟವನ್ನು ಸ್ವಲ್ಪ ಮುಂಚಿತವಾಗಿಯೇ ಮುಗಿಸಲಾಯಿತು.

ಸಂಕ್ಷಿಪ್ತ ಸ್ಕೋರ್:
ಅಸ್ಟ್ರೇಲಿಯಾ: 195/10
ಮಾರ್ನಸ್ ಲಬುಶೇನ್: 48
ಜಸ್ಪ್ರೀತ್ ಬುಮ್ರಾ: 56/4

ಭಾರತ: 277/5
ಅಜಿಂಕ್ಯ ರಹಾನೆ: 104*
ಮಿಚೆಲ್ ಸ್ಟಾರ್ಕ್: 61/2
(* ಎರಡನೇ ದಿನದಾಟ ಮುಕ್ತಾಯದ ವೇಳೆಗೆ)