ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾಗೆ ಭಾರೀ ಹಿನ್ನಡೆ4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲೆರಡು ಪಂದ್ಯ ಸೋತಿರುವ ಆಸ್ಟ್ರೇಲಿಯಾಇದೀಗ ಆಸೀಸ್ ತಂಡದಿಂದ ಮೂವರು ಹೊರಬೀಳುವ ಸಾಧ್ಯತೆ
ನವದೆಹಲಿ(ಫೆ.20): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡವು ನಿರೀಕ್ಷಿತ ಆರಂಭ ಪಡೆಯಲು ವಿಫಲವಾಗಿದೆ. 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲೆರಡು ಪಂದ್ಯಗಳಲ್ಲಿ ಮುಗ್ಗರಿಸುವ ಮೂಲಕ ಆಸೀಸ್ ತಂಡವು ಕನಿಷ್ಠ ಡ್ರಾ ಮಾಡಿಕೊಳ್ಳಲು ಸಹ ಪರದಾಡುತ್ತಿದೆ. ಇದೆಲ್ಲದರ ನಡುವೆ ಗಾಯದ ಸಮಸ್ಯೆ ಆಸ್ಟ್ರೇಲಿಯಾ ತಂಡವನ್ನು ಬೆಂಕಿಯಿಂಡ ಬಾಣಲೆಗೆ ಬೀಳುವಂತೆ ಮಾಡಿದೆ.
ಹೌದು, ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್, ಕೌಟುಂಬಿಕ ಸಮಸ್ಯೆಯಿಂದಾಗಿ, ಡೆಲ್ಲಿ ಟೆಸ್ಟ್ ಸೋಲಿನ ಬೆನ್ನಲ್ಲೇ ಆಸ್ಟ್ರೇಲಿಯಾಗೆ ವಾಪಾಸ್ಸಾಗಿದ್ದಾರೆ. ಇನ್ನು ಆಸ್ಟ್ರೇಲಿಯಾ ತಂಡದ ಮಾರಕ ವೇಗಿ ಜೋಶ್ ಹೇಜಲ್‌ವುಡ್ ಕೂಡಾ ಇದೀಗ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಸಿಡ್ನಿ ಟೆಸ್ಟ್ ಪಂದ್ಯದ ವೇಳೆ ಹಿಮ್ಮಡಿ ಗಾಯದ ಸಮಸ್ಯೆಗೆ ಒಳಗಾಗಿದ್ದ ಜೋಶ್ ಹೇಜಲ್‌ವುಡ್, ಭಾರತ ಎದುರಿನ ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಮೊದಲೆರಡು ಪಂದ್ಯಗಳಲ್ಲಿ ಹೇಜಲ್‌ವುಡ್ ಕಣಕ್ಕಿಳಿದಿರಲಿಲ್ಲ. ಇದೀಗ ಹಿಮ್ಮಡಿ ನೋವಿನಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಜೋಶ್ ಹೇಜಲ್‌ವುಡ್, ಭಾರತ ಎದುರಿನ ಇನ್ನುಳಿದ ಎರಡು ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಇನ್ನು ಇದಷ್ಟೇ ಅಲ್ಲದೇ ಡೇವಿಡ್ ವಾರ್ನರ್, ಆಸ್ಟನ್ ಏಗರ್ ಹಾಗೂ ಮ್ಯಾಟ್ ರೆನ್‌ಶೋ ಕೂಡಾ ತವರಿಗೆ ವಾಪಾಸ್ಸಾಗಲಿದ್ದಾರೆ ಎನ್ನಲಾಗುತ್ತಿದೆ.
ಪ್ಯಾಟ್ ಕಮಿನ್ಸ್, ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯಲ್ಲಿ ತವರಿಗೆ ವಾಪಾಸ್ಸಾಗಿದ್ದು, ಮಾರ್ಚ್ 01ರಿಂದ ಇಂದೋರ್‌ನ ಹೋಲ್ಕರ್ ಮೈದಾನದಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಆಸೀಸ್ ತಂಡ ಕೂಡಿಕೊಳ್ಳುವ ವಿಶ್ವಾಸವಿದೆ. ಇನ್ನು ಎರಡನೇ ಟೆಸ್ಟ್ ಪಂದ್ಯದ ವೇಳೆ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್, ಮುಂಗೈ ಗಾಯಕ್ಕೆ ಒಳಗಾಗಿ, ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಲಿಳಿದಿರಲಿಲ್ಲ. ಇವರು ತವರಿಗೆ ವಾಪಾಸ್ಸಾಗಲಿದ್ದಾರೆ ಎನ್ನಲಾಗುತ್ತಿದೆ.
Border Gavaskar Trophy: ಸರಣಿಯ ಮಧ್ಯದಲ್ಲೇ ಆಸೀಸ್‌ಗೆ ವಾಪಾಸ್ಸಾದ ನಾಯಕ ಪ್ಯಾಟ್ ಕಮಿನ್ಸ್..!
ಇನ್ನುಳಿದಂತೆ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿಯ ಪ್ರಕಾರ ಆಸ್ಟನ್ ಏಗರ್ ಹಾಗೂ ಮ್ಯಾಟ್ ರೆನ್‌ಶೋ ಕೂಡಾ ಆಸ್ಟ್ರೇಲಿಯಾಗೆ ವಾಪಸ್ಸಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಮಾರಕ ವೇಗಿ ಮಿಚೆಲ್ ಸ್ಟಾರ್ಕ್ ಹಾಗೂ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ತಂಡದಲ್ಲಿ ಸ್ಥಾನ ಪಡೆದಿದ್ದರೂ ಸಹಾ ಮೊದಲೆರಡು ಟೆಸ್ಟ್ ಪಂದ್ಯದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ. ಇನ್ನು ಮುಂದಿನ ಪಂದ್ಯಗಳಿಗೆ ಅವರ ಲಭ್ಯತೆಯ ಬಗ್ಗೆ ಯಾವುದೇ ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲ.
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳ ಬಗ್ಗೆ ಹೇಳುವುದಾದರೇ, ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಮೊದಲೆರಡು ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ 2-0 ಮುನ್ನಡೆ ಸಾಧಿಸಿದೆ. ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇನಿಂಗ್ಸ್ ಹಾಗೂ 132 ರನ್‌ಗಳ ಗೆಲುವು ಸಾಧಿಸಿತ್ತು. ಇನ್ನು ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್‌ಗಳ ಜಯ ಸಾಧಿಸಿದೆ. ಮೊದಲೆರಡು ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಮಾರಕ ದಾಳಿಗೆ ಆಸ್ಟ್ರೇಲಿಯಾ ಅಕ್ಷರಶಃ ತತ್ತರಿಸಿ ಹೋಗಿದೆ.
