* ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಎಡವಟ್ಟು ಮಾಡಿಕೊಂಡ ಶಾಸ್ತ್ರಿ* ಕೋಚ್ ರವಿಶಾಸ್ತ್ರಿ ಸೇರಿ ನಾಲ್ವರಿಗೆ ಕೋವಿಡ್‌ ದೃಢ* ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್‌ ಶಾಸ್ತ್ರಿ ಮೇಲೆ ಬಿಸಿಸಿಐ ಅಸಮಾಧಾನ

ನವದೆಹಲಿ(ಸೆ.08): ಇಂಗ್ಲೆಂಡ್‌ ವಿರುದ್ಧದ 4ನೇ ಟೆಸ್ಟ್‌ ವೇಳೆ ಪುಸ್ತಕ ಬಿಡುಗಡೆ ಕಾರ‍್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಭಾರತ ತಂಡದ ಪ್ರಧಾನ ಕೋಚ್‌ ರವಿಶಾಸ್ತ್ರ ಮೇಲೆ ಬಿಸಿಸಿಐ ಹಿರಿಯ ಅಧಿಕಾರಿಗಳು ಸಿಟ್ಟು ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಾಸ್ತ್ರಿ ಹಾಗೂ ನಾಯಕ ವಿರಾಟ್‌ ಕೊಹ್ಲಿಯಿಂದ ವಿವರಣೆ ಕೇಳುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಲಂಡನ್‌ನಲ್ಲಿ ನಡೆದ ಬುಕ್‌ ಬಿಡುಗಡೆ ಕಾರ‍್ಯಕ್ರಮದ ಬಗ್ಗೆ ಬಿಸಿಸಿಐ ಬಳಿ ಸೂಕ್ತ ಅನುಮತಿ ಪಡೆದಿರಲಿಲ್ಲ. ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿಗೂ ಪೂರ್ಣ ಮಾಹಿತಿ ಇರಲಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಘಟನೆಯಿಂದ ಬಿಸಿಸಿಐ ಒಂದು ರೀತಿ ಮುಜುಗರ ಅನುಭವಿಸುವಂತೆ ಆಗಿದೆ. ಈ ಘಟನೆಯ ಕುರಿತಂತೆ ರವಿಶಾಸ್ತ್ರಿ ಹಾಗೂ ನಾಯಕ ವಿರಾಟ್ ಕೊಹ್ಲಿ ಬಳಿ ವಿವರಣೆ ಪಡೆಯುವ ಸಾಧ್ಯತೆಯಿದೆ. ಇದಷ್ಟೇ ಅಲ್ಲದೇ ತಂಡದ ಆಡಳಿತಾತ್ಮಕ ಮ್ಯಾನೇಜರ್ ಗಿರೀಶ್ ಡೋಂಗ್ರೆ ಮೇಲೂ ವಿಚಾರಣೆಯ ತೂಗುಗತ್ತಿ ನೇತಾಡಲಾರಂಭಿಸಿದೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆಂದು ವರದಿಯಾಗಿದೆ.

Ind vs Eng 5ನೇ ಟೆಸ್ಟ್‌: ಮ್ಯಾಂಚೆಸ್ಟರ್‌ ತಲುಪಿದ ಭಾರತ ಕ್ರಿಕೆಟ್ ತಂಡ

ಆ ಕಾರ‍್ಯಕ್ರಮದಲ್ಲಿ ನೂರಾರು ಮಂದಿ ಹೊರಗಿನವರು ಪಾಲ್ಗೊಂಡಿದ್ದರು. ಕೊಹ್ಲಿ, ಶಾಸ್ತ್ರಿ ಜೊತೆ ಬೌಲಿಂಗ್‌ ಕೋಚ್‌ ಭರತ್‌ ಅರುಣ್‌, ಫೀಲ್ಡಿಂಗ್‌ ಕೋಚ್‌ ಆರ್‌.ಶ್ರೀಧರ್‌ ಸಹ ಪಾಲ್ಗೊಂಡಿದ್ದರು. ಶಾಸ್ತ್ರಿ ಸೇರಿ ನಾಲ್ವರು ಕೋವಿಡ್‌ಗೆ ತುತ್ತಾಗಿದ್ದು ಐಸೋಲೇಷನ್‌ನಲ್ಲಿದ್ದಾರೆ. ಅದೃಷ್ಟವಶಾತ್ ಯಾವುದೇ ಆಟಗಾರರಿಗೆ ಕೋವಿಡ್ ಸೋಂಕು ದೃಢಪಟ್ಟಿಲ್ಲ. ಎಲ್ಲಾ ಆಟಗಾರರು ಸೆಪ್ಟೆಂಬರ್ 10ರಿಂದ ಆರಂಭವಾಗಲಿರುವ 5ನೇ ಟೆಸ್ಟ್‌ನಲ್ಲಿ ಮ್ಯಾಂಚೆಸ್ಟರ್‌ಗೆ ತೆರಳಿದ್ದರೆ, ಕೋಚ್ ಸೇರಿದಂತೆ ಕೋವಿಡ್‌ ದೃಢಪಟ್ಟಿರುವ ಎಲ್ಲಾ ನಾಲ್ವರು ಲಂಡನ್‌ನಲ್ಲೇ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.