* ಮಹಿಳಾ ತಂಡದ ಕೋಚ್ ಹುದ್ದೆಯಿಂದ ಡಬ್ಲ್ಯೂವಿ ರಾಮನ್‌ ತಲೆದಂಡ* ರಾಮನ್ ಕೋಚ್‌ ಹುದ್ದೆಯಿಂದ ಕೆಳಗಿಳಿಸಿದ್ದಕ್ಕೆ ಬಿಸಿಸಿಐನಿಂದಲೇ ಅಪಸ್ವರ* ರಾಮನ್ ಬದಲಿಗೆ ಈಗ ರಮೇಶ್ ಪೊವಾರ್ ಮಹಿಳಾ ಟೀಂ ಇಂಡಿಯಾ ಕೋಚ್

ನವದೆಹಲಿ(ಮೇ.15): ಭಾರತ ಮಹಿಳಾ ಕ್ರಿಕೆಟ್‌ ತಂಡದ ಪ್ರಧಾನ ಕೋಚ್‌ ಆಗಿ ಡಬ್ಲ್ಯುವಿ ರಾಮನ್‌ ಅವರನ್ನು ಮುಂದುವರಿಸದೆ ಇರುವುದಕ್ಕೆ ಬಿಸಿಸಿಐನ ಹಿರಿಯ ಅಧಿಕಾರಿಗಳಿಂದಲೇ ಅಸಮಾಧಾನ ವ್ಯಕ್ತವಾಗಿದೆ. 

ಕೋಚ್‌ ಆಗಿ ಬಹಳಷ್ಟು ಯಶಸ್ಸು ಕಂಡಿದ್ದ ರಾಮನ್‌ ಬದಲಿಗೆ ಮದನ್‌ ಲಾಲ್‌ ನೇತೃತ್ವದ ಕ್ರಿಕೆಟ್‌ ಸಲಹಾ ಸಮಿತಿ (ಸಿಎಸಿ) ಹಾಗೂ ಪ್ರಧಾನ ಆಯ್ಕೆಗಾರ್ತಿ ನೀತು ಡೇವಿಡ್‌ ವಿರುದ್ಧ ಕೆಲ ಹಿರಿಯ ಹಾಗೂ ಪ್ರಬಲ ಅಧಿಕಾರಿಗಳು ಹರಿಹಾಯ್ದಿದ್ದಾರೆ. 70 ವರ್ಷ ತುಂಬಿದ ಮದನ್‌ ಲಾಲ್‌ ಸಿಎಸಿಯಲ್ಲಿರುವುದಕ್ಕೆ ಬಿಸಿಸಿಐ ಹಿರಿಯ ಅಧಿಕಾರಿಗಳು ತಮ್ಮ ಆಕ್ಷೇಪ ಹೊರಹಾಕಿದ್ದಾರೆ.

ಭಾರತ ಮಹಿಳಾ ಕ್ರಿಕೆಟ್‌ ತಂಡಕ್ಕೆ ರಮೇಶ್ ಪೊವಾರ್‌ ಕೋಚ್‌

ರಾಮನ್ ನೇತೃತ್ವದಲ್ಲಿ ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಫೈನಲ್‌ ಪ್ರವೇಶಿಸಿತ್ತು. ಆದರೆ ಪ್ರಶಸ್ತಿ ಸುತ್ತಿನಲ್ಲಿ ಆಸ್ಟ್ರೇಲಿಯಾ ವಿರುದ್ದ ಮುಗ್ಗರಿಸುವ ಮೂಲಕ ಚೊಚ್ಚಲ ಟ್ರೋಫಿ ಗೆಲ್ಲುವ ಅವಕಾಶದಿಂದ ವಂಚಿತವಾಗಿತ್ತು. ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ನಡೆದ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ತಂಡ ಹೀನಾಯ ಪ್ರದರ್ಶನ ತೋರುವ ಮೂಲಕ ಸರಣಿ ಕೈಚೆಲ್ಲಿತ್ತು. ಇದರ ಬೆನ್ನಲ್ಲೇ ರಾಮನ್ ತಲೆದಂಡವಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. ರಾಮನ್‌ ಬದಲಿಗೆ ರಮೇಶ್‌ ಪೊವಾರ್‌ರನ್ನು ನೂತನ ಕೋಚ್‌ ಆಗಿ ಸಿಎಸಿ ಶಿಫಾರಸು ಮಾಡಿತ್ತು. ಗುರುವಾರ ಬಿಸಿಸಿಐ ಪೊವಾರ್‌ರನ್ನು ಕೋಚ್‌ ಆಗಿ ಆಯ್ಕೆ ಮಾಡಿತ್ತು.