Asianet Suvarna News Asianet Suvarna News

ರಾಹುಲ್ ದ್ರಾವಿಡ್‌ರ ಕೋಚ್‌ ಅವಧಿ ಬಗ್ಗೆ ಮಹತ್ವದ ಅಪ್‌ಡೇಟ್ ಕೊಟ್ಟ ಜಯ್ ಶಾ

ವಿಶ್ವಕಪ್‌ಗೆ ದ್ರಾವಿಡ್‌ರ 2 ವರ್ಷಗಳ ಕೋಚ್‌ ಅವಧಿ ಮುಕ್ತಾಯಗೊಂಡಿತ್ತು. ಆದರೆ ಸದ್ಯ ಅವರನ್ನು ಕೋಚ್‌ ಸ್ಥಾನದಲ್ಲೇ ಮುಂದುವರಿಸಲಾಗಿದೆ. ಈ ಬಗ್ಗೆ ಮಾತನಾಡಿದ ಶಾ, ‘ದ್ರಾವಿಡ್‌ ಸೇರಿದಂತೆ ಸಹಾಯಕ ಸಿಬ್ಬಂದಿಯನ್ನು ಹುದ್ದೆಯಲ್ಲಿ ಮುಂದುವರಿಸಲಾಗಿದೆ. ಆದರೆ ಅವಧಿ ಬಗ್ಗೆ ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಿದೆ. ದ.ಆಫ್ರಿಕಾ ಸರಣಿ ಬಳಿಕ ಅವರೊಂದಿಗೆ ಚರ್ಚಿಸುತ್ತೇವೆ’ ಎಂದಿದ್ದಾರೆ.

BCCI Secretary Jay Shah Big Update On Indian Cricket Team Coach Rahul Dravid kvn
Author
First Published Dec 11, 2023, 10:36 AM IST

ಮುಂಬೈ(ಡಿ.11): ಟೀಂ ಇಂಡಿಯಾ ಕೋಚ್‌ ರಾಹುಲ್‌ ದ್ರಾವಿಡ್‌ರ ಅವಧಿ ವಿಸ್ತರಣೆಯಾಗಿದ್ದರೂ, ಗುತ್ತಿಗೆ ಅವಧಿ ಎಷ್ಟು ವರ್ಷ ಎಂಬುದು ಇನ್ನೂ ನಿರ್ಧಾರವಾಗಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಸ್ಪಷ್ಟಪಡಿಸಿದ್ದಾರೆ. 

ವಿಶ್ವಕಪ್‌ಗೆ ದ್ರಾವಿಡ್‌ರ 2 ವರ್ಷಗಳ ಕೋಚ್‌ ಅವಧಿ ಮುಕ್ತಾಯಗೊಂಡಿತ್ತು. ಆದರೆ ಸದ್ಯ ಅವರನ್ನು ಕೋಚ್‌ ಸ್ಥಾನದಲ್ಲೇ ಮುಂದುವರಿಸಲಾಗಿದೆ. ಈ ಬಗ್ಗೆ ಮಾತನಾಡಿದ ಶಾ, ‘ದ್ರಾವಿಡ್‌ ಸೇರಿದಂತೆ ಸಹಾಯಕ ಸಿಬ್ಬಂದಿಯನ್ನು ಹುದ್ದೆಯಲ್ಲಿ ಮುಂದುವರಿಸಲಾಗಿದೆ. ಆದರೆ ಅವಧಿ ಬಗ್ಗೆ ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಿದೆ. ದ.ಆಫ್ರಿಕಾ ಸರಣಿ ಬಳಿಕ ಅವರೊಂದಿಗೆ ಚರ್ಚಿಸುತ್ತೇವೆ’ ಎಂದಿದ್ದಾರೆ.

ಅಪಾಯಕಾರಿ ಪಿಚ್‌: ಬಿಗ್‌ಬ್ಯಾಶ್‌ ಪಂದ್ಯ ರದ್ದು

ಗೀಲಾಂಗ್‌: ಪಿಚ್‌ ಅಪಾಯಕಾರಿಯಾಗಿ ವರ್ತಿಸುತ್ತಿದ್ದ ಕಾರಣ ಪಂದ್ಯವನ್ನು ಅರ್ಧದಲ್ಲೇ ಸ್ಥಗಿತಗೊಳಿಸಿದ ಅಪರೂಪದ ಪ್ರಸಂಗ ಆಸ್ಟ್ರೇಲಿಯಾದ ಬಿಗ್‌ಬ್ಯಾಶ್‌ ಟಿ20 ಲೀಗ್‌ನಲ್ಲಿ ನಡೆದಿದೆ. ಭಾನುವಾರ ಮೆಲ್ಬರ್ನ್‌ ರೆನಿಗೇಡ್ಸ್‌ ಹಾಗೂ ಪರ್ಥ್‌ ಸ್ಕಾರ್ಚರ್ಸ್‌ ನಡುವಿನ ಪಂದ್ಯ 7ನೇ ಓವರ್‌ ವೇಳೆ ಸ್ಥಗಿತಗೊಂಡಿತು.

Volleyball Club World Championships: ಸರ್‌ ಸೇಫ್ಟಿಗೆ ಕ್ಲಬ್‌ ವಾಲಿಬಾಲ್‌ ಕಿರೀಟ!

ಶನಿವಾರ ಭಾರೀ ಮಳೆ ಸುರಿದಿದ್ದ ಕಾರಣ ಇಲ್ಲಿನ ಸೈಮಂಡ್ಸ್‌ ಕ್ರೀಡಾಂಗಣದ ಪಿಚ್‌ ಒದ್ದೆಯಾಗಿತ್ತು. ಇದರ ಹೊರತಾಗಿಯೂ ಪಂದ್ಯ ಆರಂಭಿಸಲಾಗಿದ್ದು, ಪರ್ಥ್‌ ತಂಡದ ಬ್ಯಾಟಿಂಗ್‌ ವೇಳೆ ಅನಿರೀಕ್ಷಿತ ಬೌನ್ಸ್‌ಗಳು ಕಂಡುಬಂತು. ಬ್ಯಾಟರ್‌ಗಳು ಪಿಚ್‌ ಬಗ್ಗೆ ಆಘಾತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅಂಪೈರ್‌ಗಳು ಪರಿಶೀಲನೆ ನಡೆಸಿ, ಪಿಚ್‌ ಆಡಲು ಸೂಕ್ತವಾಗಿಲ್ಲ ಎಂದು ಪಂದ್ಯ ರದ್ದುಗೊಳಿಸಲು ನಿರ್ಧರಿಸಿದರು.

ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಜಯಿಸಿದ ವಿಂಡೀಸ್‌

ಬ್ರಿಡ್ಜ್‌ಟೌನ್‌: ಇಂಗ್ಲೆಂಡ್‌ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌ ಡಕ್ವರ್ತ್‌ ಲೂಯಿಸ್‌ ನಿಯಮದನ್ವಯ 4 ವಿಕೆಟ್‌ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯದ ಸರಣಿಯನ್ನು ವಿಂಡೀಸ್ 2-1 ಅಂತರದಲ್ಲಿ ಕೈವಶಪಡಿಸಿಕೊಂಡಿತು. ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್ 40 ಓವರಲ್ಲಿ 9 ವಿಕೆಟ್‌ಗೆ 209 ರನ್‌ ಕಲೆಹಾಕಿತು. ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿಪಡಿಸಿದ್ದರಿಂದ ವಿಂಡೀಸ್‌ಗೆ 34 ಓವರಲ್ಲಿ 188 ರನ್‌ ಗುರಿ ನಿಗದಿಪಡಿಸಲಾಯಿತು. ತಂಡ 31.4 ಓವರಲ್ಲಿ ಗುರಿ ಬೆನ್ನತ್ತಿ ಜಯಗಳಿಸಿತು. 5 ಪಂದ್ಯಗಳ ಟಿ20 ಸರಣಿ ಮಂಗಳವಾರದಿಂದ ಆರಂಭಗೊಳ್ಳಲಿದೆ.

ಕಿರಿಯರ ಏಷ್ಯಾಕಪ್‌: ಪಾಕ್‌ ವಿರುದ್ಧ ಸೋಲುಂಡ ಭಾರತ

ದುಬೈ: ಅಂಡರ್‌-19 ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ 8 ಬಾರಿ ಚಾಂಪಿಯನ್‌ ಭಾರತ, ಬದ್ಧವೈರಿ ಪಾಕಿಸ್ತಾನ ವಿರುದ್ಧ 8 ವಿಕೆಟ್‌ ಸೋಲನುಭವಿಸಿದೆ. ಇದರೊಂದಿಗೆ ‘ಎ’ ಗುಂಪಿನಲ್ಲಿ ಭಾರತ 2 ಪಂದ್ಯಗಳಲ್ಲಿ 2 ಅಂಕದೊಂದಿಗೆ 2ನೇ ಸ್ಥಾನಕ್ಕೆ ಕುಸಿದರೆ, ಪಾಕ್‌ 4 ಅಂಕದೊಂದಿಗೆ ಅಗ್ರಸ್ಥಾನಕ್ಕೇರಿತು.

ಮೊದಲು ಬ್ಯಾಟ್‌ ಮಾಡಿದ ಭಾರತ 9 ವಿಕೆಟ್‌ಗೆ 259 ರನ್ ಕಲೆಹಾಕಿತು. ಆದರ್ಶ್‌ ಸಿಂಗ್‌(62), ನಾಯಕ ಉದಯ್‌ ಸಹರನ್‌(60), ಸಚಿನ್‌ ದಾಸ್‌(58) ಹೋರಾಟ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾಯಿತು. ಆರಂಭಿಕ ಪಂದ್ಯದಲ್ಲಿ 6 ವಿಕೆಟ್‌ ಕಿತ್ತಿದ್ದ ವೇಗಿ ಮೊಹಮದ್‌ ಜೀಶಾನ್‌ 46ಕ್ಕೆ 4 ವಿಕೆಟ್‌ ಪಡೆದರು.

Vijay Hazare Trophy: ಕ್ವಾರ್ಟರ್ ಫೈನಲ್‌ನಲ್ಲಿ ವಿದರ್ಭ ಎದುರು ಟಾಸ್ ಗೆದ್ದ ಕರ್ನಾಟಕ ಬೌಲಿಂಗ್ ಆಯ್ಕೆ

ಪಾಕ್‌ ತಂಡ 3 ಓವರ್‌ ಬಾಕಿ ಇರುವಂತೆಯೇ ಗುರಿ ಬೆನ್ನತ್ತಿ ಟೂರ್ನಿಯಲ್ಲಿ 2ನೇ ಜಯ ತನ್ನದಾಗಿಸಿಕೊಂಡಿತು. ಆಜನ್‌ ಅವೈಸ್‌(105) ಶತಕ ಸಿಡಿಸಿದರೆ, ನಾಯಕ ಸಾದ್‌ ಬೇಗ್‌ 68, ಶಾಝೈಬ್‌ ಖಾನ್‌ 63 ರನ್‌ ಕೊಡುಗೆ ನೀಡಿದರು. ಭಾರತಕ್ಕೆ ಮಂಗಳವಾರ ನೇಪಾಳ ಸವಾಲು ಎದುರಾಗಲಿದ್ದು, ಸೆಮೀಸ್‌ಗೇರಲು ಗೆಲ್ಲಲೇಬೇಕಿದೆ.

ಸ್ಕೋರ್‌: 
ಭಾರತ 50 ಓವರಲ್ಲಿ 259/ (ಆದರ್ಶ್‌ 62, ಉದಯ್‌ 60, ಜೀಶಾಣ್‌ 4-46)
ಪಾಕ್‌ 47 ಓವರಲ್ಲಿ 263/2 (ಅವೈಸ್‌ 105*, ಸಾದ್‌ 68*, ಮುರುಗನ್‌ 2-55)

ಕೆಟ್ಟ ರಾಜಕೀಯದಿಂದ ಲಂಕಾ ಕ್ರೀಡೆ ಮೇಲೆ ತೀವ್ರ ಪರಿಣಾಮ

ಬೆಂಗಳೂರು: ಶ್ರೀಲಂಕಾದಲ್ಲಿ ಈಗ ಕೆಟ್ಟ ರಾಜಕೀಯ ಪರಿಸ್ಥಿತಿ ಇದೆ. ಇದರಿಂದಾಗಿ ದೇಶದ ಕ್ರೀಡಾ ಕ್ಷೇತ್ರದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಶ್ರೀಲಂಕಾದ ಮಾಜಿ ಸ್ಪಿನ್ನರ್ ಅಜಂತಾ ಮೆಂಡಿಸ್ ಬೇಸರ ವ್ಯಕ್ತಪಡಿಸಿದರು.

ಮೆಂಡಿಸ್‌ ನಗರದ ಆರ್ಕಿಡ್‌ ಇಂಟರ್‌ನ್ಯಾಷನಲ್‌ ಶಾಲೆಯಲ್ಲಿ ಏರ್ಪಡಿಸಿದ್ದ ''ಮಾಸ್ಟರ್ ಕ್ಲಾಸ್'' ಕಾರ್ಯಕ್ರಮದಲ್ಲಿ ಭಾಗಿಯಾಗಿ, ಮಾಧ್ಯಮದವರ ಜೊತೆ ಮಾತನಾಡಿದರು. ‘ಸರ್ಕಾರದ ಹಸ್ತಕ್ಷೇಪ ತಡೆಯದ ಪರಿಣಾಮ ಲಂಕಾ ಕ್ರಿಕೆಟ್‌ ಮಂಡಳಿ ಐಸಿಸಿಯಿಂದ ಅಮಾನತುಗೊಂಡಿದೆ. ಲಂಕಾದಲ್ಲಿ ಕೆಟ್ಟ ರಾಜಕೀಯವಿದೆ. ಆದರೆ ಸದ್ಯ ಪರಿಸ್ಥಿತಿ ಸುಧಾರಿಸುತ್ತಿದೆ. ಶೀಘ್ರವೇ ಸಹಜ ಸ್ಥಿತಿಗೆ ಬರಲಿದೆ ಎನ್ನುವ ನಂಬಿಕೆ ಇದೆ’ ಎಂದದರು. ‘ವಿಶ್ವಕಪ್‌ನಲ್ಲಿ ಲಂಕಾ ಕಳಪೆ ಪ್ರದರ್ಶನ ನೀಡಿದೆ. ಆದರೆ ಇದು ಮುಂದುವರಿಯಬಾರದು. ಭವಿಷ್ಯದಲ್ಲಿ ನಾವು ಉತ್ತಮ ತಂಡ ಹೊಂದಲಿದ್ದೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
 

Follow Us:
Download App:
  • android
  • ios